ವಿದ್ಯಾರ್ಥಿಸ್ನೇಹಿ ಪೋಲಿಸ್ ಆಗುವತ್ತ ಒಂದು ಹೆಜ್ಜೆ; ಶಾಲೆಗಳಲ್ಲಿ ಕಾನೂನು ಪಾಠ ಮಾಡಿದ ಅಧಿಕಾರಿಗಳು
ಉಡುಪಿ: ಪೋಲಿಸ್ ವ್ಯವಸ್ಥೆಯನ್ನು ಜನಸ್ನೇಹಿ ಹಾಗೂ ವಿದ್ಯಾರ್ಥಿಸ್ನೇಹಿಯಾಗುವತ್ತ ಹಿಂದಿನ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಅವರು ಶಾಲೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಹರಟುವುದು, ಕಾನೂನು ಅರಿವು ನೀಡುವ ಕೆಲಸ ಮಾಡುವುದರೊಂದಿಗೆ ಮಕ್ಕಳ ಪಾಲಿನ ಹೀರೋ ಸಿಂಗಮ್ ಆಗಿದ್ದರು. ಪ್ರಸ್ತುತ ಅವರದೆ ದಾರಿಯಲ್ಲಿ ಒಂದು ಹೆಜ್ಜೆ ಮುಂದೆ ಸಾಗುತ್ತಿರುವ ಪ್ರಸ್ತುತ ಉಡುಪಿ ಜಿಲ್ಲಾ ಎಸ್ಪಿ ಡಾ. ಸಂಜೀವ್ ಪಾಟೀಲ್ ಹಾಗೂ ಎಲ್ಲಾ ಪೋಲಿಸ್ ತಂಡ ಶಾಲಾ ಮಕ್ಕಳಿಗೆ ಪ್ರತಿ ತಿಂಗಳು ಶಾಲಾ ಮಕ್ಕಳ ಮತ್ತು ಪೋಲಿಸರ ನಡುವೆ ಉತ್ತಮ ಬಾಂಧವ್ಯವನ್ನು ಕಲ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಶುಕ್ರವಾರ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಎಸ್ಪಿ ಡಾ. ಸಂಜೀವ್ ಪಾಟೀಲ್ ಅವರ ಸೂಚನೆಯಂತೆ ಎಲ್ಲಾ ಠಾಣೆಗಳ ಪೋಲಿಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ತೆರಳಿ ಕಾನೂನಿನ ಮಾಹಿತಿ ಜಾಗೃತಿಯನ್ನು ನೀಡುವ ಕೆಲಸವನ್ನು ಮಾಡಿದರು. ಪೋಲಿಸರು ಜಿಲ್ಲೆಯ ಒಟ್ಟು 116 ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಸ್ವತಃ ಜಿಲ್ಲಾ ಎಸ್ಪಿ ಡಾ. ಸಂಜೀವ್ ಪಾಟೀಲ್ ಅವರು ನಗರದ ವಳಕಾಡು ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ಬಿಸಿಯೂಟ ಯೋಜನೆ ತಯಾರಿಸುವಲ್ಲಿ ಕೈಗೊಂಡ ಮುಂಜಾಗ್ರತ ಕ್ರಮಗಳ ಮಾಹಿತಿ ಪಡೆದರಲ್ಲದೆ ಮಕ್ಕಳಿಗೆ ಡಿಜಿಟಲ್ ಸಾಕ್ಷರತೆಯ ಬಗ್ಗೆ ಕೂಡ ಮಾಹಿತಿ ನೀಡಿದರು.
ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ಪೋಲೀಸ್ ಅಧಿಕಾರಿಗಳು ಒಟ್ಟು 116 ಶಾಲೆಗಳಿಗೆ ಭೇಟಿ ನೀಡಿದರು ಮತ್ತು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮುಖ್ಯವಾಗಿ ರಸ್ತೆ ನಿಯಮಗಳು, ರಸ್ತೆಗಳಲ್ಲಿ, ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಅನುಸರಿಬೇಕಾದ ಸುರಕ್ಷತಾ ಕ್ರಮಗಳು, ತುರ್ತು ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾಡಬಹುದಾದ ಸಹಾಯಗಳು, 100, 101, 102, 108 ಇತ್ಯಾದಿ ತುರ್ತು ಕರೆಗಳ ಉಪಯೋಗ, ಬಳಕೆಗಳ ಬಗ್ಗೆಯೂ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕೆಲವು ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ವಿದ್ಯಾರ್ಥಿಗಳೊಂದಿಗೆ ಅತ್ಯುತ್ತಮವಾಗಿ ಸಂವಾದ ನಡೆಸಿ, ಪೆನ್ಸಿಲ್, ಚಾಕೋಲೇಟ್ ಇತ್ಯಾದಿಗಳನ್ನು ನೀಡಿ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.
ಅಲ್ಲದೇ ವಿದ್ಯಾರ್ಥಿಗಳಿಗೆ ಪೋಲೀಸ್ ಠಾಣೆಗೆ ಬಂದು ಅಲ್ಲಿನ ಕಾರ್ಯ ವ್ಯವಸ್ಥೆಗಳನ್ನು ವೀಕ್ಷಿಸುವಂತೆ ಆಹ್ವಾನ ನೀಡಲಾಯಿತು, ಈ ಮೂಲಕ ವಿದ್ಯಾರ್ಥಿಗಳಲ್ಲಿ ಪೋಲೀಸ್ ಇಲಾಖೆ ಬಗ್ಗೆ ತಪ್ಪು ಹೆದರಿಕೆಯನ್ನು ದೂರಗೊಳಿಸಿ, ಉತ್ತಮ ಬಾಂಧವ್ಯವನ್ನು ವೃದ್ಧಿಸುವ ಪ್ರಯತ್ನವನ್ನೂ ಮಾಡಲಾಯಿತು ಎಂದು ಎಸ್ಪಿ ಸಂಜೀವ ಎಂ. ಪಾಟೀಲ್ ಹೇಳಿದರು.