ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕಿಂತ ಹಿಂದಿನ ಗುರು ಕೇಂದ್ರಿತ ಶಿಕ್ಷಣ ಪದ್ಧತಿ ಹೆಚ್ಚು ಪರಿಣಾಮಕಾರಿ
ಉಜಿರೆ: ಪಾಶ್ಚಾತ್ಯ ಸಂಸ್ಕøತಿಯ ಅಂಧಾನುಕರಣೆ ಹಾಗೂ ಇಂಗ್ಲೀಷ್ ಮಾಧ್ಯಮದ ವ್ಯಾಮೋಹದಿಂದ ಇಂದು ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೂಕ್ಮವಾದ ಬದುಕಿಗೆ ಜೀವನ ಮುಖಿಯಾದ ಹಾಗೂ ಸಮಾಜ ಮುಖಿಯಾದ ಶಿಕ್ಷಣ ನೀಡಬೇಕು. ಇಂದಿನ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕಿಂತ ಹಿಂದಿನ ಗುರುಕೇಂದ್ರಿತ ಶಿಕ್ಷಣ ಪದ್ಧತಿ ಹೆಚ್ಚು ಪರಿಣಾಮಕಾರಿಯಾಗಿದೆ. ಹಿಂದೆ ವಿದ್ಯಾರ್ಥಿಗಳು ಗುರುಗಳನ್ನು ಹುಡುಕಿಕೊಂಡು ಹೋಗುತ್ತಿದ್ದರೆ ಇಂದು ಗುರುಗಳೆ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗುವ ಸ್ಥಿತಿ ಬಂದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.
ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ನೈತಿಕ ಮೌಲ್ಯಾಧರಿಸಿದ ರಾಜ್ಯಮಟ್ಟದ ಸ್ಪರ್ಧೆಗಳ ವಿಜೇತರಿಗೆ ಶನಿವಾರ ಅವರು ಬಹುಮಾನ ವಿತರಿಸಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಭಾಷೆಯ ಬೆಳವಣಿಗೆ ಆಗಬೇಕು. ಇಂದಿನ ಶೈಕ್ಷಣಿಕ ವ್ಯವಸ್ಥೆ ರೂಪಾಂತರಗೊಂಡು ನಾವು ಸತ್ಯವನ್ನೆಲ್ಲ ಮರೆಮಾಚುತ್ತಿದ್ದೇವೆ. ಭಾರತೀಯ ಸಂಸ್ಕøತಿ, ಪರಂಪರೆಯನ್ನು ಪ್ರತಿಬಿಂಬಿಸುವ ಕಲೆ, ಸಾಹಿತ್ಯ ಮತ್ತು ಸಂಗೀತದ ಹಿನ್ನೆಲೆಯಲ್ಲಿ ಶಿಕ್ಷಣ ನೀಡಬೇಕು. ಸಭ್ಯ, ಸುಸಂಸ್ಕøತ ನಾಗರಿಕರನ್ನು ರೂಪಿಸಬೇಕು. ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಶಾಂತಿವನ ಟ್ರಸ್ಟ್‍ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಬೇಕೆಂದು ಅವರು ಹೆಗ್ಗಡೆಯವರನ್ನು ಕೋರಿದರು.
ರಾಜ್ಯ ಶಿಕ್ಷಣ, ಸಂಶೋಶನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕ ಎಂ.ಆರ್. ಮಾರುತಿ ಶುಭಾಶಂಸನೆ ಮಾಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೆ ಉನ್ನತ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಮೊದಲು ತಮ್ಮ ಅಂತರಂಗದರ್ಶನ ಮಾಡಿ ತಮ್ಮನ್ನು ತಾವು ತಿಳಿದುಕೊಂಡು ಇತರರಿಗೂ ಸಹಾಯ ಮಾಡಬೇಕು.
ಶಾಂತಿವನ ಟ್ರಸ್ಟ್ ವತಿಯಿಂದ ಕೇವಲ ಸ್ಪರ್ಧೆಗಾಗಿ ಪ್ರತಿ ವರ್ಷ ಪುಸ್ತಕಗಳನ್ನು ಪ್ರಕಟಿಸುತ್ತಿಲ್ಲ. ಇದನ್ನು ಓದಿ ವಿದ್ಯಾರ್ಥಿಗಳು ದೇಶ ಪ್ರೇಮ, ಗುರು-ಹಿರಿಯರು ಹಾಗೂ ಸೈನಿಕರ ಬಗ್ಯೆ ಗೌರವ ಭಾವನೆ ಹೊಂದಿರಬೇಕು. ಪುಸ್ತಕಗಳನ್ನು ಓದಿ ಜ್ಞಾನವಂತರಾಗಿ ಆದರ್ಶ ಬದುಕನ್ನು ಕಟ್ಟಿಕೊಳ್ಳಬೇಕು. ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ ಜೈನ್ ಸ್ವಾಗತಿಸಿದರು. ಉಡುಪಿಯ ಅಶೋಕ ಸಿ. ಪೂಜಾರಿ ಧನ್ಯವಾದವಿತ್ತರು. ಸದಾಶಿವ ನಾಯಕ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.