ವಿಧಾನಸಭಾ ಚುನಾವಣೆಗೆ ಕಾಂಗ್ರೆಸಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ರಾಹುಲ್ ಗಾಂಧಿ
ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಶುಕ್ರವಾರ ಮಂಗಳೂರಿನ ಟಿ.ಎಂ.ಪೈ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಮಂಗಳೂರಿನ ಟಿಎಂಎಪೈ ಸಭಾಂಗಣದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್‍ಗಾಂಧಿ ಇದು ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಣಾಳಿಕೆಯಾಗಿದೆ. ಆದರೆ ಬಿಜೆಪಿಯವರದು ಮೂರ್ನಾಲ್ಕು ಜನ ಉದ್ಯಮಿಗಳು, ಆರ್‍ಎಸ್‍ಎಸ್ ಮತ್ತು ರೆಡ್ಡಿ ಬ್ರದರ್ಸ್ ಅವರ ಬೇಡಿಕೆಗಳಿಗೆ ಒತ್ತು ಕೊಡುವ ಪ್ರಣಾಳಿಕೆಯಾಗಿದೆ ಎಂದು ಟೀಕಿಸಿದರು.
2025ರೊಳಗೆ ನವ ಕರ್ನಾಟಕ ನಿರ್ಮಿಸುವ ಗುರಿಯನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವುದು, ಸಂಪರ್ಕ ರಸ್ತೆಗಳನ್ನು ಸುಧಾರಿಸುವುದು, 5 ವರ್ಷದಲ್ಲಿ 10 ಲಕ್ಷ ಮನೆ ನಿರ್ಮಾಣ, ಎಲ್ಲರಿಗೂ ಮನೆ ಒದಗಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಎರಡು ಹಂತದಲ್ಲಿ ಪ್ರಣಾಳಿಕೆ ತಯಾರಿಸಲಾಗಿದ್ದು, ರಾಜ್ಯಮಟ್ಟಕ್ಕೆ ಒಂದು ಪ್ರಣಾಳಿಕೆ ಸಿದ್ಧಪಡಿಸಿದರೆ, ಮಂಗಳೂರು, ಬೆಂಗಳೂರು, ಮೈಸೂರು ವಿಭಾಗಗಳಿಗೆ ಪ್ರತ್ಯೇಕವಾಗಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್, ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ ಸಿ ವೇಣುಗೋಪಾಲ್ ಡಿ ಕೆ ಶಿವಕುಮಾರ್, ವಿಷ್ಣುನಾಥ್, ಬಿ ಕೆ ಹರಿಪ್ರಸಾದ್ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.