ವಿವಾಹ ನಿಶ್ಚಯವಾಗಿದ್ದ ಯುವಕನ ಕೊಲೆ ಕೃತ್ಯ ಭೇಧಿಸಿದ ಪೋಲಿಸರು ಆರು ಮಂದಿ ಬಂಧನ
ಮಂಗಳೂರು: ಧರ್ಮಸ್ಥಳ ಸಮೀಪ ಪಟ್ರಮೆ ರಸ್ತೆಯಲ್ಲಿ ಕೆಲದಿನಗಳ ಹಿಂದೆ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿದ್ದ ಮೃತದೇಹದ ಗುರುತು ಪತ್ತೆಯಾಗಿದ್ದು, ಇದೊಂದು ಕೊಲೆ ಕೃತ್ಯ ಎಂದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪೋಲಿಸರು ಬಂಧಿಸಿದ್ದಾರೆ.
ಕೊಲೆಯಾದ ಯುವಕನನ್ನು ಮಲವಂತಿಗೆ ಗ್ರಾಮದ ನಿವಾಸಿ ಸುರೇಶ್ ನಾಯ್ಕ (29) ಎಂದು ಗುರುತಿಸಲಾಗಿದೆ. ಲಬ್ಯ ಮಾಹಿತಿಯಂತೆ ಪೋಲಿಸ್ ವಶದಲ್ಲಿರುವ ಪ್ರಮುಖ ಆರೋಪಿ ಸುಲ್ಕೇರಿ ನಿವಾಸಿ ಆನಂದ ನಾಯ್ಕ ಎಂಬಾತನಾಗಿದ್ದು, ಈತನೊಂದಿಗೆ ಬೆಳ್ತಂಗಡಿ ಚರ್ಚ್ ರೋಡಿನ ಪ್ರವೀಣ ನಾಯ್ಕ, ಲೋಕೆಶ್ ಮೂಲ್ಯ, ವಿನಯ ಪೂಜಾರಿ ಚಾರ್ಮಾಡಿ, ನಾಗರಾಜ ಮೂಲ್ಯ ಹಾಗೂ ಪ್ರಕಾಶ ನಾಯ್ಕ ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ.
ಘಟನೆಯ ವಿವರ : ಎಪ್ರಿಲ್ 30 ರಂದು ಧರ್ಮಸ್ಥಳ ಪೋಲಿಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ- ಪಟ್ರಮೆ ಸಾರ್ವಜನಿಕ ರಸ್ತೆಯ ಅವೆಕ್ಕಿ ಎಂಬಲ್ಲಿ ರಸ್ತೆಯ ಬದಿಯ ತಗ್ಗು ಪ್ರದೇಶದಲ್ಲಿ ಸಂಜೆ 5.00 ಗಂಟೆಗೆ ಸುಮಾರು 25 ರಿಂದ 30 ವರ್ಷ ಪ್ರಾಯದ ಗಂಡಸಿನ ಮೃತದೇಹವು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡು ಬಂದಿದ್ದು ಈ ಬಗ್ಗೆ ದರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ.
ದುಷ್ಕರ್ಮಿಗಳು ಯಾವುದೇ ಕುರುಹುಗಳನ್ನು ಬಿಡದೆ ನಿಗಾ ವಹಿಸಿ ಹತ್ಯೆ ನಡೆಸಿ ಹೆಣವನ್ನು ಸುಟ್ಟಿದ್ದರು. ಕೃತ್ಯ ನಡೆದ ಸ್ಥಳದಲ್ಲಿ ಶವದೊಂದಿಗೆ ದೊರೆತ ವಸ್ತುವಿನ ಸಾಕ್ಷ್ಯಾಧಾರದ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ವರದಿಯಾಗಿದ್ದ ಮನುಷ್ಯ ಕಾಣೆ ಪ್ರಕರಣದಲ್ಲಿ ಪಿರ್ಯಾದಿದಾರರಾದ ಸಂಜೀವ ನಾಯ್ಕ್ ಎಂಬವರನ್ನು ಕರೆಯಿಸಿದ್ದು, ಸದರಿ ಶವವು ಸುರೇಶನದ್ದೆಂದು ಗುರುತಿಸಿರುತ್ತಾರೆ. ಅದರಂತೆ ಸುರೇಶನ ಚಲನವಲನ ಹಾಗೂ ಇತರೆ ತನಿಖಾ ಜಾಡು ಹಿಡಿದು ಈ ಬಗ್ಗೆ ತನಿಖೆ ನಡೆಸಿದಾಗ ವಿನಯ (30), ಬಿನ್ ಜಯರಾಮ ಬಂಗೇರ, ಮಾರಿಗುಡಿ ಬಳಿ, ಚಾರ್ಮಾಡಿ ಗ್ರಾಮ, ಬೆಳ್ತಂಗಡಿ ಎಂಬವನ ಬಗ್ಗೆ ಸಂದೇಹವುಂಟಾಗಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಕಾಣೆಯಾದ ಸುರೇಶ್ ಎಂಬ ವ್ಯಕ್ತಿಗೆ ದಿನಾಂಕ: 30.4.2017 ರಂದು ವಿವಾಹ ನಿಶ್ಚಿತಾರ್ಥವಿದ್ದು, ವಿವಾಹವಾಗುವ ಹುಡುಗಿಯ ನಿಶ್ಚಿತಾರ್ಥವನ್ನು ತಪ್ಪಿಸುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕು ನಾವೂರ ಗ್ರಾಮದ ಶ್ರೀ ಆಧಿಶಕ್ತಿ ಮಹಾಮ್ಮಾಯಿ ದೇವಸ್ಥಾನದ ಪೂಜಾರಿಯಾದ ಅನಂದ (35) ಬಿನ್ ವಾಸು ನಾಯ್ಕ, ಹಾಗೂ ಆನಂದ ನಾಯ್ಕನ ಸೂಚನೆಯ ಮೇರೆಗೆ ಪ್ರವೀಣ ಬಿನ್ ಶ್ಯಾಂ ನಾಯ್ಕ ಚರ್ಚ್ ರೋಡ್ ಬೆಳ್ತಂಗಡಿ, ಲೋಕೇಶ (34) ಬಿನ್ ವೆಂಕಪ್ಪ ಮೂಲ್ಯ ಪುದು ಗ್ರಾಮ, ಬಂಟ್ವಾಳ ತಾಲೂಕು, ಪ್ರಕಾಶ(31) ಬಿನ್ ಶಿವಪ್ಪ ನಾಯ್ಕ, ಮೂಡುಕೋಡಿ ಗ್ರಾಮ, ಬೆಳ್ತಂಗಡಿ ತಾಲೂಕು , ನಾಗರಾಜ(39) ಬಿನ್ ಬಾಬು ಮೂಲ್ಯ ಮೇಲಂತಬೆಟ್ಟು ಗ್ರಾಮ, ಬೆಳ್ತಂಗಡಿ ಎಂಬವರು ಸೇರಿಕೊಂಡು ದಿನಾಂಕ: 29.4.2017 ರಂದು ಸುರೇಶನನ್ನು ಗಂಗಾ ಕಲ್ಯಾಣ ಯೋಜನೆಯಲ್ಲಿ ಹಣಸಿಗುವ ಬಗ್ಗೆ ಮಾಹಿತಿ ನೀಡಲು ನಿನ್ನಲ್ಲಿ ಮಾತನಾಡಲಿದೆ ಎಂಬುದಾಗಿ ಕರೆ ಮಾಡಿ ಸುರೇಶನನ್ನು ಉಜಿರೆಗೆ ಕರೆಯಿಸಿ ನಾಗರಾಜನ ಬಾಬ್ತು ಕೆಎ-19-ಎಂಇ-5750 ನೇ ಮಾರುತಿ ಓಮ್ನಿ ಕಾರಿನಲ್ಲಿ ಆತನನ್ನು ಕುಳ್ಳಿರಿಸಿ ಕರೆದುಕೊಂಡು ಹೋಗುತ್ತಾ ಸೋಮಂತಡ್ಕ – ದಿಡುಪೆ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಅತನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದು ಕೊಲೆ ಮಾಡಿ ನಂತರ ಆತನ ಮೃತದೇಹವನ್ನು ಧರ್ಮಸ್ಥಳ ಗ್ರಾಮದ ಅವೆಕ್ಕಿ ಎಂಬಲ್ಲಿ ರಸ್ತೆ ಬದಿಯ ತಗ್ಗು ಪ್ರದೇಶದಲ್ಲಿ ಮೃತದೇಹವನ್ನು ಗುರುತು ಸಿಗಬಾರದು ಎಂದು ಗೋಣಿಚೀಲದಿಂದ ಸುತ್ತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿರುವುದಾಗಿದೆ. ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಪ್ರಕರಣದ ಪತ್ತೆಯ ಬಗ್ಗೆ ಜಿಲ್ಲಾ ಪೋಲೀಸ್ ಅಧೀಕ್ಷಕರವರು ಮತ್ತು ಹೆಚ್ಚುವರಿ ಪೋಲೀಸ್ ಅಧೀಕ್ಷಕರವರ ನಿರ್ದೇಶನದಂತೆ ಪೋಲೀಸ್ ಉಪಾಧೀಕ್ಷಕರಾದ ಶ್ರೀ ರವೀಶ್ ಸಿ.ಆರ್. ಬಂಟ್ವಾಳ ರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೋಲೀಸ್ ವೃತ್ತ ನಿರೀಕ್ಷಕರಾದ ಶ್ರೀ. ನಾಗೇಶ್ ಕದ್ರಿಯವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯ್ತು. ಈ ಪತ್ತೆ ಕಾರ್ಯದಲ್ಲಿ ಧರ್ಮಸ್ಥಳ ಪೋಲೀಸ್ ಉಪ ನಿರೀಕ್ಷಕರಾದ ರಾಮ ನಾಯ್ಕ ಮತ್ತು ಕೊರಗಪ್ಪ ನಾಯ್ಕ, ಸಿಬ್ಬಂದಿಗಳಾದ ಪ್ರವೀಣ್ ಎಂ, ಬೆನ್ನಿಚ್ಚನ್, ವೆಂಕಟೇಶ್, ವಿಜು, ಸ್ಯಾಮುವೆಲ್, ಪೌಲೋಸ್, ಪ್ರಮೋದ್, ಮಹಿಳಾ ಸಿಬ್ಬಂದಿ ಶ್ರೀಮತಿ ಸವಿತಾ, ಜಿಲ್ಲಾ ಗಣಕ ಯಂತ್ರ ವಿಭಾಗದ ದಿವಾಕರ ಮತ್ತು ತಾರಾನಾಥ ಎಂಬವರು ಸಹಕರಿಸಿರುತ್ತಾರೆ.
ಈ ಒಂದು ಯಾವುದೇ ಕುರುಹು ಇಲ್ಲದೆ ಇದ್ದ ಈ ಪ್ರಕರಣವನ್ನು ಕೇವಲ 4 ದಿನಗಳೊಳಗೆ ಪ್ರಕರಣವನ್ನು ಭೇದಿಸಿದ ಪೋಲೀಸ್ ತಂಡವನ್ನು ಶ್ಲಾಘಿಸಲಾಗಿದೆ.