ವಿಶ್ವ ಕನ್ನಡಿಗರ ಆತ್ಮೀಯರಾದ ಬಿ. ಜಿ. ಮೋಹನ್ ದಾಸ್ ಅಸ್ತಂಗತ
ವಿಶ್ವದಾದ್ಯಂತ ನೆಲೆಸಿರುವ ಕನ್ನಡಿಗರ ಅಭಿಮಾನದ ಆತ್ಮೀಯತೆಯಿಂದ ಕರೆಯಲ್ಪಡುತಿದ್ದ ಬೀಜಿ ಎಂದೆ ಪ್ರಖ್ಯಾತರಾಗಿದ್ದ ಶ್ರೀ ಬಿ. ಜಿ. ಮೋಹನ ದಾಸ್ ರವರು 31ನೇ ಅಗಸ್ಟ್ ಈ ದಿನ ಮದ್ಯಾಹ್ನ 1.45 ಕ್ಕೆ ಮಣಿಪಾಲ್ ಆಸ್ಪತ್ರೆಯಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಹೃದಯ ಸಂಬಂಧಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಐ.ಸಿ.ಯು. ನಲ್ಲಿ ವೆಂಟಿಇಲೇಟರ್ ನಲ್ಲಿ ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿರುವ ಬೀಜಿಯವರು ಪತ್ನಿ, ಮಗ,ಸೊಸೆ,ಮಗಳು ಮತ್ತು ಅಪಾರ ಬಂಧು ಬಳಗದವರನ್ನು ಆಗಲಿದ್ದಾರೆ.
ಬೀಜಿಯವರು ನಡೆದು ಬಂದಿರುವ ಹಾದಿ….
ಶ್ರೀ ಬಿ. ಜಿ. ಮೋಹನ್ ದಾಸ್ ರವರು ಕಳೆದ ಮೂರು ದಶಕಗಳಿಂದ. ನಮ್ಮ ತಾಯಿನಾಡನ್ನು ಬಿಟ್ಟು ಗಲ್ಫ್ ನಾಡಿಗೆ ಬಂದು ನಮ್ಮ ನಮ್ಮ ವೃತ್ತಿಯೊಂದಿಗೆ, ಪ್ರವೃತ್ತಿಯಲ್ಲಿ ಸಂಘಟನೆಗಳ ಮೂಲಕ ನಮ್ಮ ಕನ್ನಡ ನಾಡಿನ ಭಾಷೆ, ಕಲೆ ಸಂಸ್ಕೃತಿಯನ್ನು ಯು.ಎ.ಇ. ಯ ಈ ನಾಡಿನಲ್ಲಿ ಉಳಿಸಿ ಬೆಳೆಸಿಕೊಂಡು ಬಂದಿರುವವರು
ಬೀಜಿಯವರು ಮಣಿಪಾಲ್ ಜೇಸಿಸ್ ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ನಾಯಕತ್ವದ ಅಪಾರ ಅನುಭವ ಇರುವವರು.
1982ರಲ್ಲಿ ಕೊಲ್ಲಿರಾಷ್ಟ್ರದತ್ತ ಪಯಣ ಬೆಳೆಸಿ ಯು.ಎ.ಇ. ಯಲ್ಲಿ ಪ್ರತಿಷ್ಠಿತ ನ್ಯೂ ಮೆಡಿಕಲ್ ಸೆಂಟರಿನಲ್ಲಿ ಕಂಟ್ರಿ ಮ್ಯಾನೇಜರ್ ಹುದ್ಧೆಯಲ್ಲಿದ್ದು, ಈಂಡಿಯನ್ ಫರ್ಮಾಸ್ಯೂಟಿಕಲ್ ಫೋರಂ ನ ಅಧ್ಯಕ್ಷರಾಗಿ ಗೌರವದ ಸ್ಥಾನದಲ್ಲಿ ಕಾರ್ಯನಿರ್ವಹಿಸುತಿರುವಾಗಲೇ ಹಲವಾರು ಗಣ್ಯಾತಿ ಗಣ್ಯರ ಸಂಪರ್ಕದಲ್ಲಿದ್ದವರು.
ದುಬಾಯಿ ಕರ್ನಾಟಕ ಸಂಘದ ಸಂವಿದಾನವನ್ನು ರಚಿಸಿದ ಇವರು 1989ರಲ್ಲಿ ದುಬಾಯಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಕರ್ನಾಟಕದ ಕಲೆ, ಭಾಷೆ, ಸಂಸ್ಕೃತಿಯನ್ನು ಈ ಮಣ್ಣಿನಲ್ಲಿ ವೈಭವೀಕರಿಸಿದ ಸಾಧನೆ ಇವರದ್ದು ಅಗಿದೆ. ಉದಯವಾಣಿ ಪತ್ರಿಕೆಯಲ್ಲಿ ಗಲ್ಫ್ ವಾರ್ತಾ ಸಂಚಯ ವಿಭಾಗವು 1989 ರಿಂದ ಪ್ರಕಟವಾಗುವಂತೆ ಮಾಡಿರುವ ಕೀರ್ತಿ ಇವರಿಗೆ ಸಲ್ಲಬೇಕು.
1991 ರಲ್ಲಿ ದೇವಾಡಿಗ ಸಂಘ – ದುಬಾಯಿ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒರ್ವರಾಗಿ, ಸ್ವಜಾತಿ ಬಂಧುಗಳನ್ನು ಕೊಲ್ಲಿ ರಾಷ್ಟ್ರದಲ್ಲಿ ಸಂಘಟಿಸುವುದರ್ ಜೊತೆಗೆ ದೇವಾಡಿಗ.ಕಾಮ್, ಕರ್ನಾಟಕ ಸಂಘ ದುಬಾಯಿ.ಕಾಮ್, ಗಲ್ಫ್ ವಾರ್ತೆ.ಕಾಮ್, ಕೊಲ್ಲೂರು.ಕಾಮ್, ಗಲ್ಫ್ ಕನ್ನಡಿಗ.ಕಾಮ್ ಅಂತರ್ಜಾಲ ತಾಣದ ವಿನ್ಯಾಸ ಮಾಡಿ ವಿಶ್ವದಾದ್ಯಂತ ವೀಕ್ಷಕರು ವೀಕ್ಷಿಸುವಂತೆ ಮಾಡಿದ ಸಾಧನೆ ಬೀಜಿಯವರದ್ದು.
ಮಾತೃ ಭಾಷೆಯೊಂದಿಗೆ ಅಂಗ್ಲ ಭಾಷೆಯಲ್ಲಿ ಸಹ ಉತ್ತಮ ಬರಹಗಾರು, ವಾಕ್ಪಟುವ ಪಡೆದಿರುವ ಬೀಜಿ “ಔಟ್ ಸ್ಟಾಂಡಿಂಗ್ ಅಲುಮ್ನಿ-2002” ಪ್ರಶಸ್ತಿಯನ್ನು ಮಣಿಪಾಲದಿಂದ ಪಡೆದಿದ್ದಾರೆ. ಇವರ ಸಾಮಾಜಿಕ, ಮಾಧ್ಯಮ ಸೇವೆಯನ್ನು ಮೆಚ್ಚಿ ಶಾರ್ಜಾ ಕರ್ನಾಟಕ ಸಂಘ 2007ರಲ್ಲಿ ಪ್ರತಿಷ್ಠಿತ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಯನ್ನು ನೀಡಿ ಸನ್ಮಾನಿಸಿ ಗೌರವಿಸಿದೆ. 2008ರಲ್ಲಿ ಬಹ್ರೈನ್ ಕನ್ನಡ ಸಂಘ ಕರ್ನಾಟಕದ ಮುಖ್ಯಮಂತ್ರಿ ಮಾನ್ಯ ಶ್ರೀ ಯಡಿಯೂರಪ್ಪ ನವರ ಸಮ್ಮುಖದಲ್ಲಿ ನೀಡಿ ಸನ್ಮಾನಿಸಿ ಗೌರವಿಸಿದೆ.
ದೇವಾಡಿಗ ಸಮುದಾಯದ ಸ್ವಜಾತಿ ಬಂಧುಗಳ ಸರ್ವೋತೋನ್ಮುಖ ಅಭಿವೃದ್ದಿಯಲ್ಲಿ ಕೈಜೋಡಿಸುವುದರೊಂದಿಗೆ, ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಊರಿನಲ್ಲಿರುವ ಬಡತನದಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಗಲ್ಫ್ ನಾಡಿನಲ್ಲಿ ಕನ್ನಡ ಭಾಷೆಯನ್ನು ಅನಿವಾಸಿ ಕನ್ನಡಿಗರಿಗೆ ಮುಟ್ಟಿಸುವ ಸಲುವಾಗಿ “ಗಲ್ಫ್ ಕನ್ನಡಿಗ” ವೆಬ್ ಮಾಧ್ಯಮವನ್ನು ಪ್ರಾರಂಭಿಸಿ, ಯು.ಎ.ಇ. ಯಲ್ಲಿ ನಡೆಯುವ ಕರ್ನಾಟಕ ಪರ ಸಂಘ ಸಂಸ್ಥೆಗಳ ಚಟುವಟಿಕೆಗಳನ್ನು ವಿಶ್ವಕ್ಕೆ ಮುಟ್ಟಿಸಿದ ಕೀರ್ತಿ ಬೀಜಿಯವರಿಗೆ ಸಲ್ಲುತ್ತದೆ. ಇವರ ಅವಿಶ್ರಾಂತ ದುಡಿತದ ಜೊತೆಗೆ ಕನ್ನಡ ಭಾಷೆಯ ಬಗ್ಗೆ ಇದ್ದ ತುಡಿತ ಸರ್ವರ ಮನ ಗೆದ್ದಿದೆ.
ಅಬುಧಾಬಿ ಕರ್ನಾಟಕ ಸಂಘ ಆಶ್ರಯದಲ್ಲಿ ಆಚರಿಸಿದ ಕುವೆಂಪು ವಿಶ್ವ ಕನ್ನಡ ಸಮ್ಮೇಳನದಲ್ಲಿ “ಕುವೆಂಪು ವಿಶ್ವ ಮಾನವ ಪ್ರಶಸ್ತಿ”, ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಅಬುಧಾಬಿ ಕರ್ನಾಟಕ ಸಂಘ ನೀಡಲಾಗುವ ಪ್ರತಿಷ್ಠಿತ “ದ. ರಾ. ಬೇಂದ್ರೆ ಪ್ರಶಸ್ತಿ” ಯನ್ನು ಪ್ರಥಮ ವರ್ಷದಲ್ಲೇ ಬೀಜಿ ಯವರಿಗೆ ಪ್ರಧಾನಿಸಲಾಗಿತ್ತು.
ದೇವಾಡಿಗ ಸಂಘ ದುಬಾಯಿ, ಕುಂದಾಪುರ ದೇವಾಡಿಗ ಸಂಘ ದುಬಾಯಿ ಮತ್ತು ಭಾರತದ ವಿವಿಧ ದೇವಾಡಿಗ ಸಂಘ ಮತ್ತು ಇನ್ನಿತರ ಸಂಘ ಸಂಸ್ಥೆಗಳು ಹಲವು ಬಾರಿ ಸನ್ಮಾನಿಸಿ ಗೌರವಿಸಿದ್ದಾರೆ.
ಬೀಜಿಯರ ಕನ್ನಡ ಭಾಷೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿರುವ ಅಪೂರ್ವ ಸಾಧನೆಗಾಗಿ ಕರ್ನಾಟಕ ಸರ್ಕಾರ 2019ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಮೂರು ದಶಕಗಳ ನಿರಂತರ ಸೇವೆಯ ನಂತರ ಗಲ್ಫ್ ನಾಡಿನಿಂದ ತಮ್ಮ ಜನ್ಮಭೂಮಿಗೆ ತೆರಳಿ ವಿಶ್ರಾಂತ ಜೀವನದಲ್ಲಿಯೂ ಸದಾ ಲವಲವಿಕೆಯಿಂದ ತಮ್ಮನ್ನು ತೊಡಗಿಸಿಕೊಂಡು ಲಯನ್ಸ್ ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತಿರುವುದನ್ನು ಕಂಡಾಗ ಬೀಜಿಯವರ ಬಗ್ಗೆ ಅಪಾರ ಗೌರವ ಮೂಡಿ ಬರುತ್ತದೆ,
ನಿರಂತರವಾಗಿ ಕ್ರಿಯಾಶೀಲರಾಗಿದ್ದ ಆತ್ಮೀಯ ಬೀಜಿಯವರು ಇನ್ನು ನಮ್ಮೊಂದಿಗೆ ಇಲ್ಲ. ಸಮಸ್ಥ ಕನ್ನಡಿಗರ ಪರವಾಗಿ ನಮ್ಮ ಅಂತಿಮ ನಮನಗಳು.
ಬಿ. ಕೆ. ಗಣೇಶ್ ರೈ
ಅಬುಧಾಬಿ – ಯು.ಎ.ಇ.