ವಿಶ್ವ ಕೊಂಕಣಿ ಕೇಂದ್ರದಲ್ಲಿ- ಗೋವಾ ರಾಜ್ಯದಲ್ಲಿ ಮಾತೃದೇವಿ ಉಪಾಸನೆಯ ಬಗ್ಗೆ ಸಂಶೋಧನಾ ಯೋಜನೆ

Spread the love

ವಿಶ್ವ ಕೊಂಕಣಿ ಕೇಂದ್ರದಲ್ಲಿ- ಗೋವಾ ರಾಜ್ಯದಲ್ಲಿ ಮಾತೃದೇವಿ ಉಪಾಸನೆಯ ಬಗ್ಗೆ ಸಂಶೋಧನಾ ಯೋಜನೆ

ಅನಾದಿ ಕಾಲದಿಂದಲೂ ಕೊಂಕಣಿ ಭಾಷಿಕರ ನಡುವೆ ನಿಚ್ಚಳವಾಗಿರುವ ಮಾತೃಶಕ್ತಿಯ ಆರಾಧನೆಗೆ ಸೂಕ್ತ ಸಂಶೋಧನಾತ್ಮಕ ಸ್ಪರ್ಶದ ಅಗತ್ಯವಿದ್ದು, ಅಂತಹ ಒಂದು ಅಧ್ಯಯನ ಯೋಜನೆಯನ್ನು ವಿಶ್ವಕೊಂಕಣಿ ಕೇಂದ್ರವು ಕೈಗೆತ್ತಿಕೊಳ್ಳುತ್ತಿರುವುದು ಪ್ರಶಂಶನೀಯವೆಂದು ಗೋವಾದ ಇತಿಹಾಸ ತಜ್ಞ ಡಾ. ರೋಹಿತ್ ಫಳಗಾಂವಕಾರ್ ಅಬಿಪ್ರಾಯಪಟ್ಟರು.

ಅವರು ವರ್ಧನಿ ಫೆಲೋಶಿಪ್ ಅಡಿಯಲ್ಲಿ ಪ್ರಾರಂಭಿಸಿರುವ “ಗೋವಾದಲ್ಲಿ ಮಾತೃದೇವಿಯರ ಉಪಾಸನೆ” ಯೆಂಬ ಸಂಶೋಧನಾ ಯೋಜನೆಯ ಕುರಿತು ತಜ್ಞ ಉಪನ್ಯಾಸ ನೀಡುತ್ತಾ, ಸಾಂಪ್ರದಾಯಿಕ ಆರಾಧನೆ ನಂಬಿಕೆಗಳ ಕುರಿತು ಶಾಸ್ತ್ರೀಯ ವಿಧಾನದ ವ್ಯಾಸಂಗಿಕ ಅಧ್ಯಯನಗಳು ನಡೆದಾಗ ಅವು ಸರ್ವಸ್ವೀಕೃತವಾಗುತ್ತವೆಯೆಂದು ಹೇಳಿದರು.

ಗೋವಾದ ಹಲವು ದೇವಿಮಂದಿರಗಳು, ಅಮೂರ್ಥ ಕಲ್ಪನೆಗಳು ಹಾಗೂ ಮೂರ್ತಿ ರೂಪದ ದೇವೀ ವಿಗ್ರಹಗಳ ಚಿತ್ರ ಪ್ರದರ್ಶನಗಳ ಮೇಲೆ ಚರ್ಚೆ- ವಿಶ್ಲೇಷಣೆಗಳನ್ನು ನಡೆಸುವ ಮೂಲಕ ಒಂದು ವಿಚಾರಗೋಷ್ಟಿ ನಡೆಸಲಾಯಿತು.

ಪ್ರಾರಂಭದಲ್ಲಿ ಸ್ಮಿತಾ ಶೆಣೈ ಇವರು ಅಧ್ಯಯನ ಯೋಜನೆಯ ಹಾಗೂ ಸಂಶೋಧಕ ಡಾ ರೋಹಿತ್‍ರ ಸಂಕ್ಷಿಪ್ತ ಪರಿಚಯ ನೀಡಿದರು. ಆ ನಂತರ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ ಯವರು ಸ್ವಾಗತ ನುಡಿಗಳೊಂದಿಗೆ ಸಂಶೋಧಕರಿಗೆ ಮಂಜೂರಾತಿ ಪತ್ರ ನೀಡಿ ಗೌರವಿಸಿದರು.

ಶ್ರಿ ಅನ್ನು ಮಂಗಳೂರು ಇವರು, ಸುಮಾರು ಒಂದು ವರ್ಷ ಅವಧಿಯ ಈ ಸಂಶೋಧನೆಗೆ ಪೂರಕವಾಗಿ, ನಾಜೂಕಿನ ಛಾಯಾಚಿತ್ರಗಾರಿಕೆ ನಡೆಸಿ, ಮುಂದೆ ಒಂದು ಸುಂದರ ಕಾಫಿಟೆಬಲ್ ಪುಸ್ತಕದ ರೂಪದಲ್ಲಿ ತರುವ ವಿವರಗಳನ್ನು ಸಭೆಗೆ ನೀಡಿದರು. ಗೋವಾದ ಉದ್ಯಮಿ ಸಿಎ ಬಾಲಾಜಿ ಭಟ್ ಇವರು ಈ ಪುಸ್ತಕ ರಚನಾ ವೆಚ್ಚವನ್ನು ಪ್ರಾಯೋಜಿಸಲಿದ್ದಾರೆ.

ಸ್ಮಿತಾ ಶೆಣೈ ಯವರು ಸಭೆಯ ಕಾರ್ಯಕ್ರಮ ನಿರ್ವಹಣೆ ಮಾಡಿ ವಂದನಾರ್ಪಣೆ ನಡೆಸಿಕೊಟ್ಟರು. ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ ಆರ್ ಭಟ್, ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ ಮೋಹನ್ ಪೈ, ಪಿ ರಮೇಶ್ ಪೈ, , ಶಕುಂತಲಾ ಆರ್ ಕಿಣಿ, ಹಾಗೂ ಸಿಎಒ ಡಾ ಬಿ ದೇವದಾಸ ಪೈ, ಜಿಸ್ಸೆಲ್ ಡಿ ಮೆಹ್ತಾ ಮತ್ತಿತರರು ಉಪಸ್ಥಿತರಿದ್ದರು.


Spread the love