ವಿಶ್ವ ಕೊಂಕಣಿ ಸ್ಕಾಲರ್‍ಶಿಪ್ ಅಲ್ಯುಮ್ನಿ ಸಂಘದಿಂದ ಫೆ.24ರಂದು ಪ್ರೇರಣಾ – ಯುವಜನರಿಗಾಗಿ ವಿಶಿಷ್ಟ ಕಾರ್ಯಕ್ರಮ
ವಿಶ್ವ ಕೊಂಕಣಿ ಕೇಂದ್ರದಿಂದ ಪ್ರವರ್ತಿತ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪಿಸಲಾದ ವಿಶ್ವ ಕೊಂಕಣಿ ಅಲ್ಯುಮ್ನಿ ಸಂಘವು ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಯುವಜನರಿಗಾಗಿ “ಪ್ರೇರಣಾ” ಎಂಬ ಒಂದು ದಿನದ ಸಮಾವೇಶವನ್ನು ಫೆಬ್ರುವರಿ 24ರಂದು ಮಂಗಳೂರಿನ ಟಿ.ವಿ.ರಮಣ ಪೈ ಸಭಾಭವನದಲ್ಲಿ ಆಯೋಜಿಸಿದೆ. ವಿಶ್ವ ಕೊಂಕಣಿ ಕೇಂದ್ರದ ವಿಶನ್ ಟಿ.ವಿ.ಎಮ್ ಕಾರ್ಯಕ್ರಮದ ಅಂಗವಾಗಿರುವ ಈ ಸಮಾವೇಶವನ್ನು ಚಿಂತಕ, ಪದ್ಮಶ್ರೀ ಪುರಸ್ಕೃತ ಟಿ.ವಿ.ಮೋಹನದಾಸ ಪೈಯವರು ಉದ್ಘಾಟಿಸಲಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ವಿಶ್ವ ಕೊಂಕಣಿ ವಿದ್ಯಾರ್ಥಿ ನಿಧಿಯ ಅಧ್ಯಕ್ಷ ರಾಮದಾಸ್ ಕಾಮತ್ ಯು., ಪ್ರೇರಣಾ ಕಾರ್ಯಕ್ರಮದ ಮಾರ್ಗದರ್ಶಕ ಸಂದೀಪ ಶೆಣೈ ಹಾಗೂ ವಿಶ್ವ ಕೊಂಕಣಿ ವಿದ್ಯಾರ್ಥಿ ನಿಧಿಯ ಕಾರ್ಯದರ್ಶಿ ಪ್ರದೀಪ್ ಜಿ.ಪೈ ಯವರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭವು ಜರಗಲಿದೆ. ವಿಶ್ವ ಕೊಂಕಣಿ ಅಲ್ಯುಮ್ನಿ ಸಂಘದ ಅಧ್ಯಕ್ಷ ದಿನೇಶ ಪೈರವರು ಸ್ವಾಗತ ಭಾಷಣ ಮಾಡಲಿರುವರು.
ಒಂದು ವಾರ್ಷಿಕ ಸಮಾವೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ 2015ರಲ್ಲಿ ಪ್ರಾರಂಭಿಸಲಾದ ಪ್ರೇರಣಾವನ್ನು ಪ್ರತಿವರ್ಷ ವಿವಿಧ ಔದ್ಯಮಿಕ ರಂಗಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಆಹ್ವಾನಿಸಿ ಅವರು ತಮ್ಮ್ಮ ಸಾಧನೆಯ ಹಾದಿಯಲ್ಲಿನ ಅನುಭವಗಳನ್ನು ವಿದ್ಯಾರ್ಥಿ ಹಾಗೂ ಯುವಜನರೊಂದಿಗೆ ಹಂಚಿಕೊಳ್ಳಲು ಅನುವಾಗುವಂತೆ ಹಮ್ಮಿಕೊಳ್ಳಲಾಗುತ್ತದೆ.
ಫೆಬ್ರುವರಿ 24ರಂದು ಜರಗಲಿರುವ ಪ್ರೇರಣಾದ 2018ರ ಆವೃತ್ತಿಯಲ್ಲಿ ಒಮ್ನಿಸಿಸ್ ಟೆಕ್ನಾಲಜೀಸ್‍ನ ಆಡಳಿತ ನಿರ್ದೇಶಕ ಶ್ರೀಕಾಂತ ಪಂಡಿತ್, ದೇವಗಿರಿ ಚಹಾ ಪ್ರವರ್ತಕ ನಂದಗೋಪಾಲ ಶೆಣೈ, ಭಾರತ್ ಫೋರ್ಜ್‍ನ ಸಿ.ಎಫ್.ಒ ಕಿಶೋರ್ ಸಾಲೆತೂರ್, ಜೀರೋಧಾ.ಕಾಮ್‍ನ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಅವೆನ್ಯೂ ಸೂಪರ್ ಮಾಟ್ರ್ಸ್‍ನ ಆಡಳಿತ ನಿರ್ದೇಶಕ ನೆವಿಲ್ ನೊರೊನ್ಹಾ, ಜೀವನ ಕೌಶಲ್ಯ ತರಬೇತುಗಾರ್ತಿ ಡಾ. ಚಂದ್ರಿಕಾ ಕಾಮತ್ ಮತ್ತು ಜ್ಯೋತಿ ಲ್ಯಾಬೋರೇಟರೀಸ್‍ನ ಜಂಟಿ ಆಡಳಿತ ನಿರ್ದೇಶಕ ಉಲ್ಲಾಸ ಕಾಮತ್ ರವರುಗಳು ಅವರ ಅನುಭವಗಳಿಂದ ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಪ್ರೇರೇಪಿಸಲಿದ್ದಾರೆ. ಚಿಂತಕ, ವಾಗ್ಮಿ ಟಿ.ವಿ.ಮೋಹನದಾಸ ಪೈರವರು ಸಮಾರೋಪ ಭಾಷಣವನ್ನು ನೀಡಲಿದ್ದಾರೆ.
ತಾವು ಪಡೆದುದನ್ನು ಸಮಾಜಕ್ಕೆ ಮತ್ತೆ ನೀಡುವ ಆಶಯದಿಂದ ಪ್ರೇರೇಪಿತವಾಗಿರುವ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪಿಸಲಾದ ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್‍ನ ಸದಸ್ಯರು ಇಂದು ವಿಶ್ವದಾದ್ಯಂತ ಅನೇಕ ಕಾರ್ಪೋರೇಟ್ ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಂಕಣಿ ಭಾಷಿಕ ಸಮುದಾಯವು ಈ ಪ್ರಾಂತ್ಯದ ಸರ್ವತೋನ್ಮುಖ ಅಭಿವೃದ್ಧಿಗೆ ಕಳೆದ ಶತಮಾನದಲ್ಲಿ ವಹಿಸಿದ ಪಾತ್ರದ ಪರಂಪರೆಯನ್ನು ಮುಂದುವರೆಸುತ್ತಾ, ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ ಈ ಪ್ರಾಂತ್ಯದ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ನಾವಿನ್ಯಶೀಲತೆಯನ್ನು ಪ್ರೇರೇಪಿಸುವ ಸಲುವಾಗಿ ಒಂದು ವೇದಿಕೆಯನ್ನು ರೂಪಿಸುವ ನಿಟ್ಟಿನಲ್ಲಿ ಪ್ರೇರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.
ಪ್ರೇರಣಾದಲ್ಲಿ ಮಾತನಾಡಲಿರುವ ಸಾಧಕರ ಕಿರುಪರಿಚಯ:
ಶ್ರೀಕಾಂತ್ ಪಂಡಿತ್: ಭಾರತದ ಐಟಿ ರಂಗದ ಬೃಹತ್ ಸಂಸ್ಥೆಯಾಗಿ ನಿಂತಿರುವ ಇನ್ಫೊಸಿಸ್‍ನ ಆರಂಭಿಕ ಪ್ರವರ್ತಕರಲ್ಲಿ ಒಬ್ಬರಾಗಿರುವ ಶ್ರೀಕಾಂತ್ ಪಂಡಿತ್ ರವರು ಒಮ್ನಿಸಿಸ್ ಟೆಕ್ನಾಲಜೀಸ್ ಪ್ರೈ. ಲಿ. ನ ಆಡಳಿತ ನಿರ್ದೇಶಕರಾಗಿರುವರು. ಇವರು 1996ರವರೆಗೆ ಇನ್ಫೊಸಿಸ್‍ನ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಐಐಟಿ ಕಾನ್ಪುರ್‍ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಶ್ರೀಕಾಂತ ಪಂಡಿತ್ ರವರಿಗೆ ಭಾರತೀಯ ಶೇರು ಮಾರುಕಟ್ಟೆಯ ಮೇಲಿನ ವಿಶೇಷ ಒಳನೋಟವು ಒಮ್ನಿಸಿಸ್ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ನಿರ್ಣಾಯಕವಾಗಿದೆ. 2003ರಲ್ಲಿ ಒಮ್ನಿಸಿಸ್ ಸಂಸ್ಥೆಯು ದೇಶದಲ್ಲಿಯೇ ಶೇರು ಮಾರುಕಟ್ಟೆಯಲ್ಲಿ ಆಟೊಮೇಟೆಡ್ ಟ್ರೇಡಿಂಗನ್ನು ನಡೆಸುವ ಅನುಮತಿಯನ್ನು ಪಡೆದ ಕೀರ್ತಿಯು ಶ್ರೀಕಾಂತ್ ಪಂಡಿತ್‍ರವರಿಗೆ ಸಲ್ಲುತ್ತದೆ.
ನಂದಗೋಪಾಲ ಶೆಣೈ: ಪರೋಕ್ಷ ತೆರಿಗೆರಂಗದಲ್ಲಿ ಪರಿಣತ ರಾಗಿರುವ ಲೆಕ್ಕ ಪರಿಶೋಧಕ ನಂದಗೋಪಾಲ ಶೆಣೈಯವರು ತಮ್ಮ ಕುಟುಂಬದ ವ್ಯವಹಾರವಾದ ದೇವಗಿರಿ ಚಹಾವನ್ನು ಮಾರುಕಟ್ಟೆಯ ಉತ್ತುಂಗಕ್ಕೇರಿಸುವಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಇಂದು ದೇವಗಿರಿ ಚಹಾ ಕರ್ನಾಟಕ ಕರಾವಳಿಯ ಹಳ್ಳಿ ಹಳ್ಳಿಗಳಲ್ಲೂ ಮನೆಮಾತಾಗಿದ್ದು ಸುಮಾರು 10,000 ಅಂಗಡಿಗಳಲ್ಲಿ 30 ಲಕ್ಷ ಕಿಲೋಗ್ರಾಂ ಮೇಲ್ಪಟ್ಟ ವ್ಯವಹಾರವನ್ನು ನಡೆಸುತ್ತಿದೆ.
ಕಿಶೋರ್ ಸಾಲೆತೂರ್: ಭಾರತ್ ಫೋರ್ಜ್ ಸಂಸ್ಥೆಯ ಪ್ರಧಾನ ಫಿನಾನ್ಶಿಯಲ್ ಅಧಿಕಾರಿ (ಸಿ.ಎ¥sóï.ಒ) ಆಗಿರುವ ಕಿಶೋರ್ ಸಾಲೆತೂರ್ ರವರು ಈ ಹಿಂದೆ ಟಾಟಾ ರಿಯಾಲ್ಟಿ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿ.ನ ಸಿ.ಎ¥sóï.ಒ ಮತ್ತು ಟಾಟಾ ಟೆಲೆ ಸರ್ವೀಸಸ್‍ನ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಐಐಎಮ್ ಬೆಂಗಳೂರಿನ ಪದವೀಧರರಾಗಿರುವ ತಮ್ಮ ಸಂಸ್ಥೆಗಳಿಗೆ ಬಂಡವಾಳ ಹೂಡಿಕೆಯನ್ನು ಪ್ರವರ್ತಿಸುವಲ್ಲಿ ಪರಿಣತರಾಗಿದ್ದಾರೆ.
ನಿಖಿಲ್ ಕಾಮತ್: ಓರ್ವ ನಿಷ್ಣಾತ ಬೈಕರ್ ಹಾಗೂ ಚದುರಂಗ ಆಟಗಾರನಾಗಿರುವ ನಿಖಿಲ್ ಕಾಮತ್ ತಮ್ಮ 16ನೇ ವರ್ಷ ವಯಸ್ಸಿನಲ್ಲೇ ಡಿರೈವೇಟಿವ್ಸ್ ಟ್ರೇಡಿಂಗ್ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡವರು. 2001ರಲ್ಲಿ ತಮ್ಮ ಹತ್ತನೇ ತರಗತಿಯನ್ನು ಪೂರೈಸಿದ ಬಳಿಕ ಭಾರತೀಯ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ತೊಡಗಿಸಿಕೊಳ್ಳಲು ವಿದ್ಯಾಭ್ಯಾಸಕ್ಕೆ ಅಲ್ಪವಿರಾಮವನ್ನು ನೀಡಲು ನಿರ್ಧರಿಸಿದರು. 2006ರಲ್ಲಿ ಇಂಡಿಯಾ ಬುಲ್ಸ್ ಸಂಸ್ಥೆಯ ಪೋರ್ಟ್ ಫೋಲಿಯೋ ಮ್ಯಾನೆಜ್‍ಮೆಂಟ್ ಹುದ್ದೆಗೆ ಆಯ್ಕೆಯಾಗಿ ಹೂಡಿಕೆ ಹಾಗೂ ಹಣ ನಿರ್ವಹಣೆಯಲ್ಲಿ ಪರಿಣತಿಯನ್ನು ಗಳಿಸಿದರು. 2010ರಲ್ಲಿ ತಮ್ಮ ಸಹೋದರನ ಒಡಗೂಡಿ ಇವರು ಸ್ಥಾಪಿಸಿದ ಜಿûೀರೊಧಾ.ಕಾಮ್ ಇಂದು ಭಾರತದಲ್ಲಿಯೇ ವಿಶಿಷ್ಟವಾದ ಡಿಸ್ಕೌಂಟ್ ಬ್ರೋಕಿಂಗ್ ಹೌಸ್ ಎನ್ನುವ ಕೀರ್ತಿಯನ್ನು ಪಡೆದಿದೆ.
ನೆವಿಲ್ ನೊರೊನ್ಹಾ: ಪ್ರಸಿದ್ಧ ಡಿಮಾರ್ಟ್ ಮಳಿಗೆಗಳನ್ನು ದೇಶದಾದ್ಯಂತ ಹೊಂದಿರುವ ಅವೆನ್ಯೂ ಸೂಪರ್ ಮಾಟ್ರ್ಸ್ ಲಿ. ನ ಆಡಳಿತ ನಿರ್ದೇಶಕರಾಗಿರುವ ನೆವಿಲ್ ನೊರೊನ್ಹಾ ಡಿಮಾರ್ಟ್‍ನ 2017ರ ಯಶಸ್ವಿ ಐಪಿಒ ಪ್ರವರ್ತನೆಯ ರೂವಾರಿ. ಮುಂಬಯಿಯ ಎಸ್.ಐ.ಇ.ಎಸ್ ಕಾಲೇಜಿನ ಪದವೀಧರರಾಗಿರುವ ನೆವಿಲ್ ನೊರೊನ್ಹಾ ಗ್ರಾಹಕ ವಸ್ತುಗಳ ಉದ್ಯಮದಲ್ಲಿ ಸುಮಾರು 20 ವರ್ಷಕ್ಕೂ ಮಿಗಿಲಾದ ಅನುಭವವನ್ನು ಹೊಂದಿರುವರು. ತಮ್ಮ ವಿಶಿಷ್ಟ ನಾಯಕತ್ವಗುಣಗಳಿಂದ ಇಂದು ಈ ಉದ್ಯಮದಲ್ಲಿ ಬಹು ಬೇಡಿಕೆಯ ಯುವ ಉದ್ಯಮಿಯಾಗಿದ್ದಾರೆ. ಡಿಮಾರ್ಟ್‍ಗಿಂದ ಮೊದಲು ಸುಮಾರು 8 ವರ್ಷ ಹಿಂದುಸ್ತಾನ್ ಲಿವರ್ ಲಿ. ನಲ್ಲಿ ಸೇವೆಯನ್ನು ಸಲ್ಲಿಸಿರುವ ನೆವಿಲ್ ನೊರೊನ್ಹಾ ಆಧುನಿಕ ಗ್ರಾಹಕ ವಸ್ತುಗಳ ಉದ್ಯಮದಲ್ಲಿ ಅಪಾರ ಒಳನೋಟವನ್ನು ಹೊಂದಿರುವುದು ಅವರ ಯಶಸ್ಸಿಗೆ ಕಾರಣವಾಗಿದೆ.
ಡಾ. ಚಂದ್ರಿಕಾ ಕಾಮತ್: ನುರಿತ ಕೌಶಲ್ಯ ತರಬೇತುಗಾರ್ತಿಯಾಗಿರುವ ಡಾ. ಚಂದ್ರಿಕಾ ಕಾಮತ್ ಸಮಯ ನಿರ್ವಹಣೆ, ಒತ್ತಡ ನಿರ್ವಹಣೆ, ಆತ್ಮ ವಿಶ್ವಾಸ, ಮುಂತಾದ ವಿಷಯಗಳಲ್ಲಿ ನಡೆಸುವ ತರಬೇತಿ ಕಾರ್ಯಕ್ರಮಗಳು ಹೆಸರುವಾಸಿಯಾಗಿವೆ. ಹಿಂದುಸ್ತಾನಿ ಸಂಗೀತದಲ್ಲಿಯೂ ಪರಿಣತಿಯನ್ನು ಹೊಂದಿರುವ ಡಾ. ಚಂದ್ರಿಕಾ ಕಾಮತ್ ಸಂಗೀತ, ಭಾರತೀಯ ತತ್ವಶಾಸ್ತ್ರ ಮತ್ತು ಜೀವನ ಕೌಶಲ್ಯಗಳನ್ನು ಸಮನ್ವಯಗೊಳಿಸಿ ವಿಶಿಷ್ಟ ತರಬೇತಿಗಳನ್ನು ನಡೆಸುತ್ತಾರೆ. ಹಲವು ಪ್ರಸಿದ್ಧ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನೂ ನೀಡಿದ್ದಾರೆ.
ಶ್ರೀ ಉಲ್ಲಾಸ್ ಕಾಮತ್, ಜಂಟಿ ಆಡಳಿತ ನಿರ್ದೇಶಕರು, ಜ್ಯೋತಿ ಲೆಬೊರೆಟರೀಸ್: ಓರ್ವ ಪರಿಣತ ಕಂಪನಿ ಸೆಕ್ರೆಟರಿ ಮತ್ತು ಲೆಕ್ಕ ಪರಿಶೋಧಕರಾಗಿರುವ ಶ್ರೀ ಉಲ್ಲಾಸ ಕಾಮತ್‍ರವರು ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್ ನಿಂದ ಕಾನೂನು ಪದವಿಯನ್ನೂ ಗ್ಲೋಬಲ್ ಮೆನೇಜ್‍ಮೆಂಟ್‍ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿರುವರು. ವ್ಹಾರ್ಟನ್ ಬಿಸಿನೆಸ್ ಸ್ಕೂಲ್ ಮತ್ತು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ನಲ್ಲಿ ಮೆನೆಜ್‍ಮೆಂಟ್ ನಲ್ಲಿ ಉನ್ನತ ವ್ಯಾಸಂಗವನ್ನು ಗೈದಿರುತ್ತಾರೆ. ಜ್ಯೋತಿ ಲೆಬೊರೆಟರೀಸ್ ಇವರ ನಾಯಕತ್ವದಲ್ಲಿ ವೈವಿಧ್ಯಮಯ ಉತ್ಪನ್ನಗಳ ಎಫ್. ಎಂ.ಸಿ.ಜಿ ಕಂಪನಿಯಾಗಿ ಬೆಳೆದು ನಿಂತಿದೆ. ಹೆಂಕೆಲ್ ಇಂಡಿಯಾ ಸಂಸ್ಥೆಯನ್ನು ಜ್ಯೋತಿ ಲೆಬೊರೆಟರೀಸ್ ಬಳಗಕ್ಕೆ ಸೇರಿಸುವಲ್ಲಿ ಇವರ ಪಾತ್ರ ದೊಡ್ಡದು. ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ ಅಕೌಂಟಂಟ್ ಪ್ರವರ್ತಿಸುವ ಸಿ.ಎ. ಉದ್ಯಮ ಸಾಧಕ ಪ್ರಶಸ್ತಿಯು ದೊರೆತಿದೆ.
ಶ್ರೀ ಟಿ.ವಿ.ಮೋಹನದಾಸ ಪೈ: ಅಕ್ಷಯಪಾತ್ರೆ, ಬಿಪ್ಯಾಕ್ ಮುಂತಾದ ಯೋಜನೆಗಳ ಮೂಲಕ ಶಿಕ್ಷಣ, ಸಾರ್ವಜನಿಕ ಸವಲತ್ತುಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಶ್ರೀ ಟಿ.ವಿ. ಮೋಹನದಾಸ್ ಪೈ ರವರು ಭಾರತದಲ್ಲಿ ಉದ್ಯಮಶೀಲತೆಯ ಉತ್ತೇಜನೆಯನ್ನು ಪ್ರತಿಪಾದಿಸುತ್ತಾರೆ. ಭಾರತವನ್ನು ಸ್ಟಾರ್ಟಪ್ ಕ್ಯಾಪಿಟಲ್ ಆಗಿ ರೂಪಿಸುವಲ್ಲಿ ಯುವಜನತೆಯು ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಧೃಡವಾಗಿ ನಂಬುವ ಮೋಹನದಾಸ ಪೈ ಇದರಿಂದ ದೇಶದ ಅಭಿವೃದ್ಧಿಯ ಗತಿಯು ಹೆಚ್ಚಲಿದೆ ಎಂದು ಹೇಳುತ್ತಾರೆ.