ವಿಶ್ವ ಪ್ರವಾಸೋದ್ಯಮ ದಿನಾಚರಣೆ; ಹಣತೆ ದೀಪಗಳಲ್ಲಿ ಬೆಳಗಿದ ಬಾರ್ಕೂರು ಕತ್ತಲೆ ಬಸದಿ
ಉಡುಪಿ: ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ನಾವೆಲ್ಲಾ ಕೈ ಜೋಡಿಸಬೇಕು. ನಮ್ಮ ನೆಲ ಜಲ ಸಂಸ್ಕøತಿ ಉಳಿಸಬೇಕು. ಇತಿಹಾಸ ಪ್ರಸಿದ್ಧ ಬಾರ್ಕೂರು ದೇವಾಲಯಗಳ ತವರೂರು. ಮುಂದಿನ ದಿನಗಳಲ್ಲಿ ಈ ತಾಣ ಪ್ರವಾಸಿಗರನ್ನುಆಕರ್ಷಿಸುವಂತಾಗಲಿ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದರು.
ಅವರು ಮಂಗಳವಾರ ಬಾರ್ಕೂರಿನ ಕತ್ತಲೆ ಬಸದಿಯಲ್ಲಿ ಉಡುಪಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸುಸ್ಥಿರ ಅಭಿವೃದ್ಧಿಗೆ ಪ್ರವಾಸೋದ್ಯಮ ಎಂಬ ಧ್ಯೇಯ ವಾಕ್ಯದಡಿ ವಿಶಿಷ್ಟವಾಗಿ ಆಯೋಜಿಸಿದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ದೀಪಗಳನ್ನು ಬೆಳಗುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಬ್ರಹ್ಮಾವರ ಕ್ರಾಸ್‍ಲ್ಯಾಂಡ್ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೋ. ಗುರುಮೂರ್ತಿ ಮಾತನಾಡಿ, ಪ್ರಾಚೀನ ಪರಂಪರಾ ಶೈಲಿಗೆ ಅನುಗುಣವಾಗಿ ಕಟ್ಟಿದ ದೇವಾಲಯಗಳು ಬಾರ್ಕೂರಿನಲ್ಲಿವೆ. ಈ ಪರಂಪರೆ ನಾವೆಲ್ಲ ಉಳಿಸಬೇಕು. ಅದು ಧಾರ್ಮಿಕ ದೃಷ್ಟಿಯಿಂದ ಅಲ್ಲ, ಬದಲಾಗಿ ಐತಿಹಾಸಿಕ ದೃಷ್ಟಿಯಿಂದ ನಮ್ಮ ಪರಂಪರೆ ಉಳಿಯಬೇಕು. ವಾಸ್ತುಶಿಲ್ಪದ ದೃಷ್ಟಿಯಿಂದ ಇಲ್ಲಿನ ದೇವಾಲಯಗಳು ಸುಂದರವಾಗಿವೆಯೇ ಎಂದರು.
ಪುರಾತತ್ವ ಇಲಾಖೆಯ ಮೂರ್ತೇಶ್ವರಿ, ಅಸೋಸಿಯೇಶನ್ ಆಪ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ.ಆರ್., ಬಾರ್ಕೂರು ಶಾಂತರಾಮ ಶೆಟ್ಟಿ, ಬಾರ್ಕೂರು ಪಂಚಾಯತ್ ಅಧ್ಯಕ್ಷೆ ಶೈಲಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಕುಣಿತ ಚಂಡೆ ಮದ್ದಲೆಗಳ ನಾದದೊಂದಿಗೆ ಕತ್ತಲೆ ಬಸದಿಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಬಾರ್ಕೂರಿನ ಜನರು ಬಸದಿಯ ಸುತ್ತಲೂ ಹಣತೆ ದೀಪ ಬೆಳಗಿಸಿ ಬಸದಿಗೆ ಬೆಳಕಿನ ಭಾಗ್ಯ ಕಲ್ಪಿಸಿದರು.