ವಿಹಿಂಪ, ಬಜರಂಗದಳ ಉಡುಪಿ ನಗರ ವತಿಯಿಂದ ಪಂಜಿನ ಮೆರವಣಿಗೆ
ಉಡುಪಿ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಉಡುಪಿ ನಗರ ಘಟಕದ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ಭಾನುವಾರ ನಡೆಯಿತು.
ನಗರದ ಜೋಡುಕಟ್ಟೆಯ ಬಳಿ ಆರಂಭವಾದ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಬಳಿ ಸಮಾಪನಗೊಂಡಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಲಾಸ್ ನಾಯಕ್ ಅವರು ದೇಶವನ್ನು ಮತ್ತೆ ಒಗ್ಗೂಡಿಸಬೇಕಾದ ಅಗತ್ಯತೆಯಕುರಿತು ದಿಕ್ಸೂಚಿ ಭಾಷಣದಲ್ಲಿ ಪ್ರತಿಪಾದಿಸಿದರು.
ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಜಿಲ್ಲಾ ಸುರಕ್ಷಾ ಪ್ರಮುಖ್ ಅನಿಲ್ ಕುಮಾರ್, ನಗರದ ಸಂಚಾಲಕ ಲೋಕೇಶ್ ಶೆಟ್ಟಿಗಾರ್, ವಿಹಿಂಪ ನಗರಾಧ್ಯಕ್ಷ ಸಂತೋಷ್ ಸುವರ್ಣ ಉದ್ಯಾವರ, ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯರಾದ ಗೀತಾಂಜಲಿ ಸುವರ್ಣ, ಆರೆಸ್ಸೆಸ್ ಪ್ರಮುಖ ಟಿ. ಶಂಭು ಶೆಟ್ಟಿ, ಬಿಜೆಪಿ ನಾಯಕರಾದ ಯಶ್ಪಾಲ್ ಸುವರ್ಣ, ಬಾಲಕೃಷ್ಣ ಶೆಟ್ಟಿ, ವೀಣಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.