Home Mangalorean News Kannada News ವಿ.ವಿ ಫಲಿತಾಂಶ ಗೊಂದಲ – ಕ್ರಮಕ್ಕೆ ಆಗ್ರಹಿಸಿ ಅ.ಭಾ.ವಿ.ಪ ಪ್ರತಿಭಟನೆ

ವಿ.ವಿ ಫಲಿತಾಂಶ ಗೊಂದಲ – ಕ್ರಮಕ್ಕೆ ಆಗ್ರಹಿಸಿ ಅ.ಭಾ.ವಿ.ಪ ಪ್ರತಿಭಟನೆ

Spread the love

ವಿ.ವಿ ಫಲಿತಾಂಶ ಗೊಂದಲ – ಕ್ರಮಕ್ಕೆ ಆಗ್ರಹಿಸಿ ಅ.ಭಾ.ವಿ.ಪ ಪ್ರತಿಭಟನೆ

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಲ್ಲಿ ಈ ಬಾರಿಯೂ ವಿ.ವಿ ಆಡಳಿತ ಮಂಡಳಿ ವಿಫಲವಾಗಿರುವುದನ್ನು ಖಂಡಿಸಿ ಇಂದು ನಗರದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಅಂತರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವಂತಹ ದ.ಕ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ದಶಕಗಳ ಇತಿಹಾಸವಿರುವ ಮಂಗಳೂರು ವಿಶ್ವ ವಿದ್ಯಾನಿಲಯವು ನಾಡಿಗೆ ಬೇಕಾದ ಅನೇಕ ಜ್ಞಾನಿಗಳನ್ನು, ಸಾಹಿತಿಗಳನ್ನು, ಸಂಶೋಧಕರನ್ನು ನಿರ್ಮಾಣ ಮಾಡಿದೆ. ಆದರೆ ಕಳೆದ ಎರಡು ವರ್ಷಗಳಿಂದ ವಿ.ವಿಯ ಆಡಳಿತ ವೈಕರಿಯನ್ನು ಗಮನಿಸಿದರೆ ವಿಶ್ವವಿದ್ಯಾನಿಲಯಕ್ಕಿರುವ ಘನತೆಯನ್ನು ನಿರ್ನಾಮ ಮಾಡಲಾಗುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ.

ಸರಿಯಾಗಿ ಕಾಲಕಾಲಕ್ಕೆ ಪರೀಕ್ಷೆಗಳನ್ನು ನಡೆಸಿ ಸಮಯಕ್ಕೆ ಸರಿಯಾಗಿ ಫಲಿತಾಂಶವನ್ನು ನೀಡುವುದು ವಿ.ವಿಯ ಕಾರ್ಯಗಳಲ್ಲಿ ಪ್ರಮುಖ ಭಾಗ. ಆದರೆ ಫಲಿತಾಂಶ ಪ್ರಕಟಿಸುವಲ್ಲಿಯೇ ಕಳೆದ 3 ಸೆಮಿಸ್ಟರ್‍ಗಳಿಂದ ವಿ.ವಿ ಯ ಆಡಳಿತ ಮಂಡಳಿ ಎಡವುತ್ತಿರುವುದು, ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿರುವುದು ವಿ.ವಿ ಯ ಆಡಳಿತ ಮಂಡಳಿಯ ಕಾರ್ಯ ವೈಖರಿ ಹಾಗೂ ಕುಲಪತಿಗಳು ಹಾಗೂ ಕುಲ ಸಚಿವರುಗಳು ಶೈಕ್ಷಣಿಕ ವಿಷಯಗಳನ್ನು ನಿರ್ಲಕ್ಷಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ.
ಕಳೆದ ನವೆಂಬರ್, ಡಿಸೆಂಬರ್‍ನಲ್ಲಿ ನಡೆದ ಪದವಿ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ 18.01.2017 ರಂದು ವಿ.ವಿಯ ಅಧಿಕೃತ ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡು ಕೆಲವೇ ನಿಮಿಷಗಳಲ್ಲಿ ಫಲಿತಾಂಶವನ್ನು ಹಿಂತೆಗೆದುಕೊಂಡಿರುವುದು ಹಾಗೂ ಈ ಕುರಿತು ವಿ.ವಿ ಯ ಕುಲಪತಿಗಳಾಗಲಿ, ಪರೀಕ್ಷಾಂಗ ಕುಲಸಚಿವರಾಗಲಿ ಇಲ್ಲಿಯವರೆಗೆ ಅಧಿಕೃತ ಪ್ರತಿಕ್ರಿಯೆ ನೀಡದಿರುವುದು ಇವರ ಬೇಜವಬ್ಧಾರಿತನಕ್ಕೆ ಸಾಕ್ಷಿಯಾಗಿದೆ. ಒಂದು ಪ್ರಮುಖ ವಿಶ್ವವಿದ್ಯಾನಿಲಯದ ಪರೀಕ್ಷೆ ಹಾಗೂ ಫಲಿತಾಂಶದಂತಹ ಗಂಭೀರ ವಿಷಯಗಳ ದಾಖಲೆಗಳು ಕುಲಪತಿಗಳು ಹಾಗೂ ಪರೀಕ್ಷಾಂಗ ಕುಲಸಚಿವರ ಗಮನಕ್ಕೆ ಬಾರದೆ ವಿ.ವಿ.ಯ ಅಧಿಕೃತ ವೆಬ್‍ಸೈಟುಗಳಲ್ಲಿ ಸೋರಿಕೆಯಾಗಿ ಪ್ರಕಟವಾಗಿದೆ ಎನ್ನುವುದಾದರೆ ಇವರುಗಳು ಆ ಸ್ಥಾನದಲ್ಲಿ ಇರಲು ಎಷ್ಟು ಸಮರ್ಥರು ಎಂದು ಯೋಚಿಸಬೇಕಾಗುತ್ತದೆ. ಹಾಗಾಗಿ ಈ ಮೂಲಕ ಆಗ್ರಹಿಸುವುದೇನೆಂದರೆ ಈ ಕೂಡಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಿಯಾದ ತನಿಖೆಯಾಗಬೇಕು ಹಾಗೂ ಕಳೆದ 2 ವರ್ಷಗಳಿಂದ ಸರಿಯಾದ ಪರೀಕ್ಷೆ ನಡೆಸುವಲ್ಲಿ ಹಾಗೂ ಫಲಿತಾಂಶ ನೀಡುವಲ್ಲಿ ವಿಫಲವಾಗಿರುವ ಈಗಿನ ಪರೀಕ್ಷಾಂಗ ಕುಲಸಚಿವರನ್ನು ಬದಲಾಯಿಸಿ ಆ ಸ್ಥಾನಕ್ಕೆ ಅನುಭವಿ ಮತ್ತು ಸಮರ್ಥರನ್ನು ನೇಮಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್, ತಾಲೂಕು ಸಂಚಾಲಕ ಸುಧಿತ್ ಶೆಟ್ಟಿ ಫಲಿತಾಂಶ ಗೊಂದಲವನ್ನು ಸರಿಪಡಿಸಬೇಕೆಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆ ನಂತರ ಜಂಟಿ ಆಯುಕ್ತರ ಮೂಲಕ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು. ವಿಭಾಗ ಕಾರ್ಯಲಯ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘ ಅಧ್ಯಕ್ಷ ಮೋಹಿತ್, ಚೈತನ್ಯ, ಕಾರ್ಯಲಯ ಕಾರ್ಯದರ್ಶಿ ರಾಜೇಂದ್ರ, ಗಣೇಶ್, ಅಕ್ಷಯ್, ಜಾನವಿ, ಆದ್ಯ, ಶ್ರೇಯಾ, ದೀಪಕ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

Exit mobile version