ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ನೆರವೇರಿಸಿ, ಮಾನವೀಯತೆ ಮೆರೆದ ಎಸ್ಪಿ ಅಣ್ಣಾಮಲೈ

Spread the love

ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ನೆರವೇರಿಸಿ, ಮಾನವೀಯತೆ ಮೆರೆದ ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು: ಆಧುನಿಕತೆಯ ಭರಾಟೆಯಲ್ಲಿ ಮನುಷ್ಯನ ಜೀವನ ಶೈಲಿ ಬದಲಾಗುತ್ತಿದ್ದು, ಮಾನವೀಯತೆ ಮರೆಯುತ್ತಿರುವ ಮಾನವ ಸಂಬಂಧಗಳ ಕೊಂಡಿಗಳನ್ನು ಕಳಚಿಕೊಂಡು ಯಾಂತ್ರಿಕ ಜೀವನಕ್ಕೆ ಮಾರುಹೋಗುತ್ತಿದ್ದಾನೆ.

ನೂರಾರು ದೇವರನ್ನು ಪೂಜಿಸುವ ಬದಲು ಹೆತ್ತ ತಂದೆ ತಾಯಿಯನ್ನು ಪೂಜಿಸು ಎಂಬ ನಾಣ್ನುಡಿಯನ್ನು ಮನುಷ್ಯರು ಇಂದು ಮರೆಯುತ್ತಿದ್ದು, ತಂದೆ, ತಾಯಿಯನ್ನು ಮನೆಯಿಂದ ನಿರ್ದಾಕ್ಷಿಣ್ಯವಾಗಿ ಹೊರ ಹಾಕಿ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾನೆ. ಮಕ್ಕಳನ್ನು ಬೆಳೆಸಲು ಕೂಲಿ ಮಾಡಿ ಜೀವನವನ್ನೇ ಸವೆಸಿದ ಹಿರಿಯ ಜೀವಗಳು ಇಂದು ಮಕ್ಕಳಿಂದಲೇ ಮನೆಯಿಂದ ಹೊರ ದಬ್ಬಲ್ಪಟ್ಟು, ಬದುಕಿದ್ದರೂ ಸತ್ತಂತೆ ಜೀವನ ನಡೆಸುತ್ತಿರುವ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಅಂತಹ ಜೀವಗಳು ತಮಗೆ ಯಾರಿಂದಾದರೂ ಪ್ರೀತಿ ಲಭಿಸುವುದೋ ಎಂಬ ಕಾತರದಲ್ಲೇ ದಿನದೂಡುತ್ತಿದ್ದಾರೆ.

ಚಿಕ್ಕಮಗಳೂರಿನ ಅನ್ನಪೂರ್ಣ ವೃದ್ಧಾಶ್ರಮದ ವೃದ್ದರಿಗೆ ಬುಧವಾರ ಅತೀವ ಸಂತೋಷದ ಕ್ಷಣ. ಹೌದು, ವೃತ್ತಿಯಲ್ಲಿ ಅವರು ಖಡಕ್ ಪೋಲಿಸ್ ಅಧಿಕಾರಿ ಆದರೆ ಅವರಲ್ಲೂ ಪುತ್ರ ಹೃದಯ ಇದೇ ಎನ್ನುವುದಕ್ಕೆ ಈ ವೃದ್ಧಾಶ್ರಮ ಸಾಕ್ಷಿಯಾಯಿತು.

ಪ್ರತಿದಿನ ಟಿವಿಯಲ್ಲಿ ಚಿಕ್ಕಮಗಳೂರು ಎಸ್ಪಿ ಕಾರ್ಯವೈಖರಿಯನ್ನು ವೀಕ್ಷಿಸುತ್ತಿದ್ದ ವಯೋವೃದ್ಧರ ಆಸೆಯನ್ನು ಅಣ್ಣಾಮಲೈ ನೆರವೇರಿಸಿದ್ದಾರೆ.

ಚುನಾವಣೆ ಪೂರ್ವದಿಂದಲೂ ಪ್ರತಿದಿನ ಟಿವಿಯಲ್ಲಿ ಅಣ್ಣಾಮಲೈ ಕಾರ್ಯವೈಖರಿಯನ್ನು ವೀಕ್ಷಿಸುತ್ತಿದ್ದ ಚಿಕ್ಕಮಗಳೂರಿನ ಗೌರಿ ಕಾಲುವೆಯಲ್ಲಿರೋ ಅನ್ನಪೂರ್ಣ ವೃದ್ಧಾಶ್ರಮದ ವಯೋವೃದ್ಧರು ಎಸ್ಪಿ ಅವರನ್ನು ಕಣ್ತುಂಬ ನೋಡಬೇಕೆಂದು ಇಂಗಿತ ವ್ಯಕ್ತಪಡಿಸಿದ್ದರು.

ವಿಷಯ ತಿಳಿದ ಅಣ್ಣಾಮಲೈ ಸ್ಥಳಕ್ಕೆ ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ, ಕಷ್ಟವನ್ನು ವಿಚಾರಿಸಿದ್ದಾರೆ. ಮಂಗಳವಾರ ಸಂಜೆ ದಿಢೀರನೇ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಅಣ್ಣಾಮಲೈ ಅಲ್ಲಿನ ಹಿರಿ ಜೀವಗಳ ನೋವನ್ನು ಆಲಿಸಿದ್ದಾರೆ.

ಎಸ್ಪಿ ಅಣ್ಣಾಮಲೈ ಅವರನ್ನು ನೋಡುತ್ತಿದ್ದಂತೆ ವಯೋವೃದ್ಧರು ಆನಂದಭಾಷ್ಪ ಸುರಿಸಿದರು. ಎಸ್ಪಿ ಪಕ್ಕದಲ್ಲಿ ಮಕ್ಕಳಂತೆ ಕೂತು ಹಿರಿಯ ಜೀವಗಳು ತಮ್ಮ ನೋವಗಳನ್ನು ಹೇಳಿ ಕಣ್ಣೀರಿಟ್ಟರು. ಒಬ್ಬೊಬ್ಬರ ನೋವನ್ನು ಕೇಳಿದ ಅಣ್ಣಾಮಲೈ ಅವರಿಗೆ ಸಾಂತ್ವಾನ ಹೇಳಿದರು.


Spread the love