ವೆನ್ಲಾಕ್ ಆಸ್ಪತ್ರೆಯ ಇತಿಹಾಸದಲ್ಲೇ ಮೊದಲ ಅಂಗಾಂಗ ದಾನ ಪ್ರಕ್ರಿಯೆ – ಸಾವಿನಲ್ಲೂ ಸಾರ್ಥಕತೆ ಮೆರೆದ ಶಿವಮೊಗ್ಗದ ರೇಖಾ

Spread the love

ವೆನ್ಲಾಕ್ ಆಸ್ಪತ್ರೆಯ ಇತಿಹಾಸದಲ್ಲೇ ಮೊದಲ ಅಂಗಾಂಗ ದಾನ ಪ್ರಕ್ರಿಯೆ – ಸಾವಿನಲ್ಲೂ ಸಾರ್ಥಕತೆ ಮೆರೆದ ಶಿವಮೊಗ್ಗದ ರೇಖಾ

ದಕ್ಷಿಣಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ವೆನ್ಲಾಕ್​ನಲ್ಲಿ 176 ವರ್ಷಗಳ ಇತಿಹಾಸದಲ್ಲಿ ಇಂದು ಮೊದಲ ಬಾರಿಗೆ ಅಂಗಾಂಗ ದಾನ ನಡೆದಿದ್ದು, ಮೆದುಳು ನಿಷ್ಕ್ರಿಯವಾದ ಮಹಿಳೆಯ ಎರಡು ಕಣ್ಣು ಮತ್ತು ಲಿವರ್ ದಾನ ಪ್ರಕ್ರಿಯೆ ನಡೆಯಿತು.

ಶಿವಮೊಗ್ಗ ರಾಗಿಗುಡ್ಡೆಯ ರೇಖಾ (41) ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ಜನವರಿ 6 ರಂದು ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದ ರೇಖಾ ಅವರ ಮೆದುಳು ನಿಷ್ಕ್ರಿಯವಾಗಿದ್ದರಿಂದ ಆಸ್ಪತ್ರೆಯ ವೈದ್ಯರು ಅಂಗಾಂಗ ದಾನದ ಸಲಹೆ ನೀಡಿದ್ದು, ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು.

ರೇಖಾ ಅವರ ಕಣ್ಣು ಮತ್ತು ಲಿವರ್ ತೆಗೆದು ದಾನ ಪ್ರಕ್ರಿಯೆ ನಡೆಸಲಾಯಿತು. ಎರಡು ಕಣ್ಣನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಲಿವರ್​ ಅನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ಕಳುಹಿಸಲಾಯಿತು. ಈ ಮೂಲಕ ಮೃತ ಮಹಿಳೆ ರೇಖಾ ಮೂರು ಮಂದಿಯ ಬಾಳಿಗೆ ಬೆಳಕಾದರು.

ಈ ಬಗ್ಗೆ ಮಾತನಾಡಿದ ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ಶಿವಪ್ರಕಾಶ್, ”ರೇಖಾ ಅವರು‌ ಜನವರಿ 6ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೆದುಳು ನಿಷ್ಕ್ರಿಯವಾದ ಪರಿಣಾಮ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಕಣ್ಣು ಮತ್ತು ಲಿವರ್ ದಾನ ಮಾಡಲಾಗಿದೆ. ಇದು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 176 ವರ್ಷಗಳ ಇತಿಹಾಸದಲ್ಲಿ ನಡೆದ ಮೊದಲ ಅಂಗಾಂಗ ದಾನವಾಗಿದೆ” ಎಂದರು.


Spread the love
Subscribe
Notify of

0 Comments
Inline Feedbacks
View all comments