ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶವ್ಯಾಪಿ ಮುಷ್ಕರಕ್ಕೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಬೆಂಬಲ

Spread the love

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶವ್ಯಾಪಿ ಮುಷ್ಕರಕ್ಕೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಬೆಂಬಲ

ಉಡುಪಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ವೈದ್ಯರಿಂದ ದೇಶವ್ಯಾಪಿ ಮುಷ್ಕರಕ್ಕೆ ಸೋಮವಾರ ಇಂಡಿಯನ್ ಮೆಡಿಕಲ್ ಎಸೊಶೀಯೇಶನ್ ಐಎಂಎ ಕರೆ ನೀಡಿದ್ದು ಈ ಹಿನ್ನಲೆಯಲ್ಲಿ ಉಡುಪಿಯಲ್ಲೂ ಮುಷ್ಕರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಆರೋಗ್ಯದಲ್ಲಿ ದೇಶದಲ್ಲೇ ಹೆಸರುವಾಸಿಯಾಗಿರುವ ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಖಾಸಗೀ ಆಸ್ಪತ್ರೆಗಳ ಓಪಿಡಿ ನಿಷ್ಯಬ್ಧವಾಗಿದೆ. ತುರ್ತು ಸೇವೆ ಬಿಟ್ಟರೆ ಯಾವುದೇ ಸೇವೆಗಳು ಖಾಸಗೀ ಆಸ್ಪತ್ರೆಗಳಲ್ಲಿ ಲಭ್ಯ ಆಗುತ್ತಿಲ್ಲ. 24 ಗಂಟೆಗಳ ಕಾಲ ಓಪಿಡಿ ಬಂದ್ ನಡೆಸಿ ಮುಷ್ಕರ ನಡೆಸಲಿರುವ ವೈದ್ಯರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಿದ್ದಾರೆ.

ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆಗಳನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಠಿಣ ಕಾನೂನು ಜಾರಿಗೊಳಿಸಬೇಕು. ವೈದ್ಯರಿಗೆ ಮುಕ್ತ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು. ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ವೈದ್ಯರು ಆಗ್ರಹಿಸಿದ್ದಾರೆ.

ಮಣಿಪಾಲ ಕೆ.ಎಂಸಿ ಸೇರಿದಂತೆ ಉಡುಪಿಯ ಪ್ರಮುಖ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಬಿಟ್ಟರೆ ಎಲ್ಲಾ ಸೇವೆ ಸ್ಥಗಿತವಾಗಿದೆ. ಆದ್ರೆ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಎಂದಿನಂತೆ ಎಲ್ಲಾ ಸೇವೆಗಳು ಲಭ್ಯವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹೊರ ರೋಗಿಗಳು ಚಿಕಿತ್ಸೆಗಾಗಿ ಆಗಮಿಸಿದ್ದಾರೆ. ಈಗಾಗಲೇ ಸರಕಾರಿ ಆಸ್ಪತ್ರೆಯ ಎಲ್ಲಾ ವೈದ್ಯರನ್ನು ಕಡ್ಡಾಯವಾಗಿ ಸೇವೆಗೆ ಬರುವಂತೆ ಆದೇಶ ನೀಡಲಾಗಿದೆ.

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಸಂಜೆ ಮಣಿಪಾಲ ವೈಧ್ಯಕೀಯ ವಿದ್ಯಾರ್ಥಿಗಳು ಮೋಂಬತ್ತಿ ಹಚ್ಚಿ ಪ್ರತಿಭಟನೆ ಮಾಡಲಿದ್ದಾರೆ. ಸುಮಾರು 5೦೦ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು ರ್ಯಾಲಿ ನಡೆಸಿ ವೈದ್ಯರ ಮೇಲಿನ ಹಲ್ಲೆಯನ್ನ ಖಂಡಿಸಲಿದ್ದಾರೆ.


Spread the love