ವೈದ್ಯ ದಂಪತಿಯ ಪುತ್ರಿ ಅಮೂಲ್ಯ ಕಾಮತ್ ಗೆ ಇಂಜಿನಿಯರ್ ಆಗುವಾಸೆ
ಮಂಗಳೂರು: ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ನಗರದ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಮುಂದೆ ಇಂಜಿನಿಯರ್ ಶಿಕ್ಷಣದ ಗುರಿಯನ್ನು ಇರಿಸಿಕೊಂಡಿದ್ದಾರೆ.
‘ರ‍್ಯಾಂಕ್ ಬರುವ ನಿರೀಕ್ಷೆ ಇತ್ತು. ಕಾಲೇಜಿನಲ್ಲಿ ಉಪನ್ಯಾಸಕರೂ ನಿನ್ನಿಂದ ಸಾಧ್ಯ ಎಂದು ಹೇಳುತ್ತಿದ್ದರು. ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿ ಅಧ್ಯಯನ ಮಾಡಿರುವುದರಿಂದ ಮುಂದೆ ಇಂಜಿನಿಯರ್ ಆಗಬೇಕೆಂಬುದು ನನ್ನ ಬಯಕೆ. ಭರತನಾಟ್ಯದಲ್ಲಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತರಬೇತು ಪಡೆದಿದ್ದು, ಪುಸ್ತಕ ಓದುವುದೆಂದರೆ ತುಂಬಾ ಇಷ್ಟ’ ಎನ್ನುತ್ತಾರೆ ಅಮೂಲ್ಯ.
ಅಮೂಲ್ಯ ಕಾಮತ್‌ರವರ ತಂದೆ ಡಾ. ದಿನೇಶ್ ಕಾಮತ್‌ರವರು ನಗರದ ವೆನ್‌ಲಾಕ್ ಆಸ್ಪತ್ರೆಯಲ್ಲಿ ಡರ್ಮಟಾಲಜಿಸ್ಟ್ ಆಗಿ ಕಳೆದ ಸುಮಾರು 9 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೆ, ತಾಯಿ ಡಾ. ಅನುರಾಧ ಕಾಮತ್ ಬಿಸಿರೋಡ್‌ನಲ್ಲಿ ಖಾಸಗಿ ಕ್ಲಿನಿಕ್ ಹೊಂದಿದ್ದಾರೆ.
ಮೂಲತಃ ಬಂಟ್ವಾಳದವರಾದ ಡಾ. ದಿನೇಶ್ ಕಾಮತ್‌ರವರ ಹಿರಿಯ ಪುತ್ರಿಯೂ ಎಸೆಸೆಲ್ಸಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ಇದೀಗ ಬೆಂಗಳೂರಿನಲ್ಲಿ ಇಂಜಿನಿಯರ್ ಶಿಕ್ಷಣ ಪಡೆಯುತ್ತಿದ್ದಾರೆ.
‘ಅಮೂಲ್ಯ ರ‍್ಯಾಂಕ್ ಪಡೆಯುತ್ತಾಳೆ ಎನ್ನುವ ಬಗ್ಗೆ ಆಕೆಯ ತರಗತಿಯ ಉಪನ್ಯಾಸಕರಿಗೆ ಸಾಕಷ್ಟು ಭರವಸೆ ಇತ್ತು. ನಮ್ಮ ಮಕ್ಕಳಿಬ್ಬರಿಗೂ ಇಂಜಿನಿಯರ್‌ನಲ್ಲಿ ಆಸಕ್ತಿ, ಅವರ ಇಚ್ಚೆಯಂತೆ ಅವರಿಗೆ ಪ್ರೋತ್ಸಾಹ ನೀಡಿದ್ದೇವೆ. ಆಕೆ ಸ್ವಕಲಿಕೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದಳು. ಜತೆಗೆ ಆಕೆಯ ಪರಿಶ್ರಮದಲ್ಲಿ ಆಕೆಯ ಉಪನ್ಯಾಸಕರ ಪಾತ್ರ ಅತ್ಯುನ್ನತವಾದುದು’ ಎಂದು ಡಾ. ದಿನೇಶ್ ಕಾಮತ್ ಅಭಿಪ್ರಾಯಿಸಿದ್ದಾರೆ.