Home Mangalorean News Kannada News ವೋಟ್ ಬ್ಯಾಂಕಿಗಾಗಿ ಜಾತಿಗಳನ್ನು ಒಡೆದ ಕಾಂಗ್ರೆಸ್ ಪಕ್ಷಕ್ಕೆ ತಡವಾಗಿ ಜ್ಞಾನೋದಯವಾಗಿದೆ – ಶೋಭಾ ಕರಂದ್ಲಾಜೆ

ವೋಟ್ ಬ್ಯಾಂಕಿಗಾಗಿ ಜಾತಿಗಳನ್ನು ಒಡೆದ ಕಾಂಗ್ರೆಸ್ ಪಕ್ಷಕ್ಕೆ ತಡವಾಗಿ ಜ್ಞಾನೋದಯವಾಗಿದೆ – ಶೋಭಾ ಕರಂದ್ಲಾಜೆ

Spread the love

ವೋಟ್ ಬ್ಯಾಂಕಿಗಾಗಿ ಜಾತಿಗಳನ್ನು ಒಡೆದ ಕಾಂಗ್ರೆಸ್ ಪಕ್ಷಕ್ಕೆ ತಡವಾಗಿ ಜ್ಞಾನೋದಯವಾಗಿದೆ – ಶೋಭಾ ಕರಂದ್ಲಾಜೆ

ಬೈಂದೂರು: ವೋಟ್ ಬ್ಯಾಂಕಿಗಾಗಿ ಕಾಂಗ್ರೆಸ್ ಪಕ್ಷದ ಮಂತ್ರಿಗಳನ್ನು ಛೂಬಿಟ್ಟು ಲಿಂಗಾಯತ ವೀರಶೈವರನ್ನು ಒಡಿಯುವ ಷಡ್ಯಂತ್ರ ಮಾಡಿದವರ ಪಕ್ಷದವರಿಗೆ ಇಂದು ಜ್ಞಾನೋದಯವಾಗಿದೆ. ಅದಕ್ಕೆ ಸರಿಯಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಾಯಿಯಿಂದ ಸತ್ಯ ಹೊರಬಿದ್ದಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಂದೂರು – ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಪ್ರಯುಕ್ತ ಆಗಮಿಸಿದ ವೇಳೆ ಬೈಂದೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಅವರದೇ ಮಂತ್ರಿಗಳನ್ನು ಛೂಬಿಟ್ಟು ಜಾತಿ-ಜಾತಿ ಒಡೆಯುವ ಪ್ರಯತ್ನ ಮಾಡಿದ ಡಿ.ಕೆ.ಶಿವಕುಮಾರ್ ಬಾಯಿಯಿಂದ ಈಗ ಸತ್ಯ ಹೊರಬಂದಿದೆ. ನಾವು ಮಾಡಿದಂತದ್ದು ತಪ್ಪಾಗಿದೆ, ಅಕ್ಷಮ್ಯ ಅಪರಾಧ ಆಗಿದೆ ಎಂಬ ಮಾತು ಹೇಳಿದ್ದಾರೆ ಕೊನೆಯಲ್ಲಾದರೂ ಜ್ಞಾನೋದಯ ಆಗಿದೆ ಎಂದರು.

ಕಳೆದ 70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು ದೇಶದಲ್ಲಿ ಜಾತಿ ಒಡೆಯುವುದನ್ನು ಮಾಡಿದ್ದಾರೆ. ಧರ್ಮವನ್ನು ಒಡೆದು ಅಧಿಕಾರದಲ್ಲಿ ಉಳಿಬೇಕು ಎಂಬ ದುರಾಸೆಯಲ್ಲಿದ್ದಾರೆ ರಾಜ್ಯದ ಜನಕ್ಕೆ ಇದರು ಅರ್ಥ ಆಗಿದ್ದು, ಕಾಂಗ್ರೆಸ್ ನಲ್ಲಿದ್ದ 120 ಸ್ಥಾನವನ್ನು 78ಕ್ಕೆ ಜನ ಇಳಿಸಿದ್ದಾರೆ ಈಗ 78 ಸ್ಥಾನ 8 ಕ್ಕೆ ಇಳಿಯುವ ಸೂಚನೆ ರಾಜ್ಯದಲ್ಲಿ ಕಂಡುಬರುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಿತ್ತಾಟ ತಾರಕಕ್ಕೆ ಏರುತ್ತಿದ್ದು ಎಲ್ಲವೂ ಸರಿಯಿಲ್ಲ ಎನ್ನುವುದು ಜಗತ್ತಿಗೆ ತಿಳಿದೆ. ಮಂತ್ರಿ ಆದವರಿಗೆ, ಆಗದವರಿಗೂ ಅಸಮಾಧಾನ ಅನ್ನುವ ಪರಿಸ್ಥಿತಿ ಇದೆ. ಎಂಬಿ ಪಾಟೀಲ್, ಕುಲಕರ್ಣಿ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಜಾತಿ ಒಡೆಯುವುದಕ್ಕೆ ಪ್ರಯತ್ನ ಮಾಡಿದರು ಆದರೆ ಇಂದು ಅದೇ ಎಂ.ಬಿ ಪಾಟೀಲ್ ಅವರನ್ನು ದೂರ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಕೇವಲ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ಸಿನದ್ದು ಯೂಸ್ ಆ್ಯಂಡ್ ಥ್ರೋ ಪಾಲಿಸಿಯಾಗಿದೆ. ಇದು ಇಡೀ ದೇಶದಲ್ಲಿಯೇ ಕಾಂಗ್ರೆಸ್ ಪಕ್ಷ ನಡೆಸಿಕೊಂಡು ಬಂದಿದ್ದು ಅದನ್ನೇ ಕರ್ನಾಟಕದಲ್ಲೂ ಕೂಡ ಪಾಲನೆ ಮಾಡುತ್ತಿದ್ದಾರೆ. ಮಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ಕಸದ ಬುಟ್ಡಿಗೆ ಹಾಕಲಿದ್ದಾರೆ ಎಂದರು.

ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎನ್ನುವ ವಿಚಾರದಲ್ಲಿ ಬಿಜೆಪಿ ಬದ್ದವಾಗಿದ್ದು ಒಂದು ವೇಳೆ ಸರಕಾರ ಆಚರಣೆ ಮಾಡಿದರೆ ಅದನ್ನು ನಾವು ವಿರೋಧ ಮಾಡುತ್ತೇವೆ. ಸಿದ್ದರಾಮಾಯ್ಯ ಸರ್ಕಾರ ಮಾಡಿದ ತಪ್ಪನ್ನು ಕುಮಾರಸ್ವಾಮಿ ಮಾಡಬಾರದು. ಟಿಪ್ಪು ಜಯಂತಿಯಿಂದ ಯಾರು ಉದ್ದಾರ ಆಗಿಲ್ಲ ಅಲ್ಲದೆ ಯಾರಿಗೂ ಲಾಭ ಆಗಿಲ್ಲ. ಟಿಪ್ಪು ಜಯಂತಿಯಿಂದಾಗಿ ಸಮಾಜ ಒಡೆದು ಸಂಘರ್ಷ ಉಂಟಾಗಲು ಕಾರಣವಾಗಿದೆ ಅಲ್ಲದೇ ಹಲವಾರು ಜನರ ಮೇಲೆ ಕೇಸುಗಳಿದ್ದು ಇದರಿಂದ ಹಲವಾರು ಮಂದಿ ಜೈಲಿಗೆ ಕೂಡ ಹೋಗಿದ್ದಾರೆ. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ಮತಾಂಧ ಟಿಪ್ಪುವಿನ ಜಯಂತಿ ಮಾಡಬಾರದು ಎಂದರು.

ಮೈಸೂರಿನಲ್ಲಿ ದಸರಾ ಸಂಬಂಧ ಜೆಡಿಎಸ್ ಮತ್ತು ಕಾಂಗ್ರೆಸಿನ ನಡುವೆ ಕಿತ್ತಾಟದ ರಾಜಕೀಯ ನಡೆಯುತ್ತಿದೆ. ಸಚಿವರಾದ ಸಾ.ರಾ.ಮಹೇಶ್ ಮತ್ತು ಜಿ.ಟಿ. ದೇವೆಗೌಡ ನಡುವೆ ದಸರಾ ಆಚರಣೆ ಸಂಬಂಧಿಸಿ ರಾಜಕೀಯ ಮೇಲಾಟವೇ ನಡೆಯುತ್ತಿದೆ. ದಸರಾ ಕಾರ್ಯಕ್ರಮದಲ್ಲಿ ಕಾಂಗ್ರೆಸಿನ ಯಾವುದೇ ಶಾಸಕರು ಭಾಗವಹಿಸದೇ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿ ದಸರಾ ಸಮಿತಿ ರಚನೆಯಾಗಿಲ್ಲ ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಕಿತ್ತಾಟ ಎಂದರು.

ಮೈಸೂರಿನಲ್ಲಿ ಸ್ಟ್ರೀಟ್ ಫೆಸ್ಟಿವಲ್ ಸಮಯದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗಿದ್ದು, 150 ಜನ ಹೆಣ್ಣುಮಕ್ಕಳು ನಮ್ಮಮೇಲೆ ಮೊಲೆಸ್ಟ್ರೇಷನ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಇವತ್ತಿನವರೆಗೂ ಒಂದೇ ಒಂದು ಕೇಸ್ ಪತ್ತೆ ಮಾಡಿಲ್ಲ. ಮೊದಲ ಬಾರಿ ತಾಯಿ ಚಾಮುಂಡೇಶ್ವರಿ ದಸರಾದಲ್ಲಿ ಈ ರೀತಿ ಹೆಣ್ಮಕ್ಕಳ ಮೇಲೆ ಕೈ ಮಾಡುವಂತದ್ದು ನಡೆದಿದೆ. ಇದಕ್ಕೆ ಈ ಸರ್ಕಾರನೇ ಜವಬ್ದಾರಿ ಹೊರಬೇಕು, ಸರ್ಕಾರ ಇದೆಯಾ ಸತ್ತಿದೆಯಾ ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ ಎಂದು ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.


Spread the love

Exit mobile version