Home Mangalorean News Kannada News ವ್ಯಸನಮುಕ್ತ ಸಮಾಜಕ್ಕಾಗಿ ಮಸೀದಿ ಜಮಾಅತ್ ಗಳಿಂದ ನೂರು ದಿನಗಳ ಆಂದೋಲನ

ವ್ಯಸನಮುಕ್ತ ಸಮಾಜಕ್ಕಾಗಿ ಮಸೀದಿ ಜಮಾಅತ್ ಗಳಿಂದ ನೂರು ದಿನಗಳ ಆಂದೋಲನ

Spread the love

ವ್ಯಸನಮುಕ್ತ ಸಮಾಜಕ್ಕಾಗಿ ಮಸೀದಿ ಜಮಾಅತ್ ಗಳಿಂದ ನೂರು ದಿನಗಳ ಆಂದೋಲನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಇಂದು ಮಾದಕ ವ್ಯಸನ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು, ಈ ಬಗ್ಗೆ ಜಿಲ್ಲೆಯ ಜನರಲ್ಲಿ, ಪೋಷಕರಲ್ಲಿ ಅರಿವು ಮೂಡಿಸಬೇಕಾದದ್ದು, ಅದಕ್ಕಾಗಿ ಇಲ್ಲಿನ ಎಲ್ಲ ಮಂದಿರ, ಮಸೀದಿ, ಚರ್ಚುಗಳ ಮೂಲಕ ಒಂದು ಜಾಗೃತಿ ಅಭಿಯಾನವನ್ನು ನಡೆಸಲಿದ್ದು, ಮೊದಲ ಹಂತವಾಗಿ ನೂರು ದಿನಗಳ ‘ವ್ಯಸನಮುಕ್ತ ಸಮಾಜಕ್ಕಾಗಿ ಮಸೀದಿ ಜಮಾಅತ್ ಗಳ ಆಂದೋಲನ’ವನ್ನು ನಾವು ಈಗ ಪ್ರಾರಂಭಿಸಲಿದ್ದೇವೆ ಎಂದು ಬ್ಯಾರೀಸ್ ಗ್ರೂಪ್ ನ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಅವರು, ಮಾದಕ ವ್ಯಸನದ ಬಗ್ಗೆ ಜಿಲ್ಲೆಯ ಎಲ್ಲ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಜನರಿಗೆ ಭಾವನಾತ್ಮಕವಾಗಿ ತಲುಪಲು ಸಾಧ್ಯವಿರುವ ಇಲ್ಲಿನ ಎಲ್ಲ ಮಂದಿರ, ಮಸೀದಿ, ಚರ್ಚುಗಳ ಮೂಲಕ ಒಂದು ಜಾಗೃತಿ ಅಭಿಯಾನವನ್ನು ನಡೆಸಬೇಕು ಎಂದು ನಾವು ನಿರ್ಧರಿಸಿದ್ದೇವೆ. ವ್ಯಸನಿಗಳಿಗೆ ಅದರಿಂದ ಮುಕ್ತರಾಗಲು ನೆರವಾಗುವುದು ಮತ್ತು ಹೊಸ ವ್ಯಸನಿಗಳು ಸೃಷ್ಟಿಯಾಗದಂತೆ ಪೋಷಕರಲ್ಲಿ, ವಿದ್ಯಾರ್ಥಿಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ನಮ್ಮ ಗುರಿ ಎಂದು ಅವರು ಹೇಳಿದರು.

ಮಾದಕ ವ್ಯಸನದಿಂದ ಶರೀರ ಮತ್ತು ಮನಸ್ಸು ನಾಶವಾಗುವುದು ಮಾತ್ರವಲ್ಲ, ವ್ಯಸನಿಯ ಭವಿಷ್ಯ, ಸಂಬಂಧಗಳು, ಕುಟುಂಬ, ಪರಿಸರ ಎಲ್ಲವೂ ಹಾಳಾಗುತ್ತದೆ. ಇಂದು ಜಗತ್ತಿನ ಮೂರು ಅತಿದೊಡ್ಡ ಉದ್ಯಮಗಳ ಪೈಕಿ ಪೆಟ್ರೋಲಿಯಂ ಉದ್ಯಮ ಮತ್ತು ಶಸ್ತ್ರಾಸ್ತ್ರಗಳ ಉದ್ಯಮಗಳು ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿದ್ದರೆ ಮಾದಕ ದ್ರವ್ಯಗಳ ಉದ್ಯಮವು ಮೂರನೆಯ ಸ್ಥಾನದಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಈ ಮಹಾ ಪಿಡುಗಿನ ವಿರುದ್ಧ ಜಿಲ್ಲೆ ಹಾಗು ನಗರದ ಪೊಲೀಸ್ ಇಲಾಖೆ ಬಹಳಷ್ಟು ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಿದೆ. ವಿವಿಧ ಸೇವಾ ಸಂಸ್ಥೆಗಳೂ ತಮ್ಮಿಂದ ಸಾಧ್ಯವಿರುವ ಕೆಲಸ ಮಾಡುತ್ತಿವೆ. ಆದರೆ ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಜಿಲ್ಲೆಯ ಜನರಲ್ಲಿ ವಿಶೇಷವಾಗಿ ಪೋಷಕರಲ್ಲಿ ಈ ಬಗ್ಗೆ ಸಾಕಷ್ಟು ಜಾಗೃತಿ ಇಲ್ಲದೇ ಇರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಯಾವುದೇ ಸಂದರ್ಭದಲ್ಲಿ ಈ ಮಾರಿ ನಮ್ಮ ಮನೆಯೊಳಗೆ ನಮಗೇ ಗೊತ್ತಿಲ್ಲದಂತೆ ಬಂದು ಬಿಡುತ್ತದೆ ಎಂಬ ಅರಿವು ಜಿಲ್ಲೆಯ ಎಲ್ಲ ಜನರಲ್ಲಿ, ಪೋಷಕರಲ್ಲಿ ಮೂಡಿಸಬೇಕಾದುದು ಈಗಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ನೂರು ದಿನಗಳ ‘ವ್ಯಸನಮುಕ್ತ ಸಮಾಜಕ್ಕಾಗಿ ಮಸೀದಿ ಜಮಾಅತ್ ಗಳ ಆಂದೋಲನ’ವನ್ನು ನಾವು ಈಗ ಪ್ರಾರಂಭಿಸಲಿದ್ದೇವೆ. ಜಿಲ್ಲೆಯ ಪ್ರತಿಯೊಂದು ಮಸೀದಿ ಜಮಾಅತ್ ಗಳ ಪದಾಧಿಕಾಗಳು ಹಾಗು ಧರ್ಮಗುರುಗಳ ಮೂಲಕವೇ ಆಯಾ ಜಮಾಅತ್ ವ್ಯಾಪ್ತಿಯಲ್ಲಿ ಈ ಬಗ್ಗೆ ವಿವಿಧ ಜಾಗೃತಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದು ಇದರ ಉದ್ದೇಶ. ಇದಕ್ಕಾಗಿ ಜಿಲ್ಲೆ ಹಾಗು ನಗರದ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲು ಒಪ್ಪಿಕೊಂಡಿದೆ. ಖಾಝಿಗಳಾದ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹಾಗು ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅವರು ಈ ಆಂದೋಲನಕ್ಕೆ ಆಶೀರ್ವದಿಸಿ, ಮಾರ್ಗದರ್ಶನ ನೀಡಲು ಒಪ್ಪಿಗೆ ನೀಡಿದ್ದಾರೆ ಎಂದರು.

ಜೊತೆಗೆ ಎಲ್ಲ ಧರ್ಮಗಳ ಧಾರ್ಮಿಕ ಗುರುಗಳು, ಜನಪ್ರತಿನಿಧಿಗಳು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ವ್ಯಸನ ವಿರೋಧಿ ಚಟುವಟಿಕೆ ನಡೆಸುತ್ತಿರುವ ಸೇವಾ ಸಂಸ್ಥೆಗಳು, ಸಲಹೆಗಾರರು, ತಜ್ಞ ವೈದ್ಯರು, ಸಾಮಾಜಿಕ ಕಾರ್ಯಕರ್ತರು, ಯುವಜನರ ಹಾಗು ಸೋಷಿಯಲ್ ಮೀಡಿಯಾ ಬಳಕೆದಾರರ ಸಹಕಾರವನ್ನು ಪಡೆದು ಈ ಆಂದೋಲನವನ್ನು ನಡೆಸಲು ಹಾಗು ನೂರು ದಿನಗಳ ಆಂದೋಲನದ ಕೊನೆಗೆ ಈ ಗಂಭೀರ ಸಮಸ್ಯೆಯನ್ನು ಎದುರಿಸಲು ಕೆಲವು ಶಾಶ್ವತ ಪರಿಹಾರ ಕ್ರಮಗಳನ್ನು ಗುರುತಿಸಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಈ ಮಹತ್ವದ ಆಂದೋಲನ ಯಶಸ್ವಿಯಾಗಲು ಮುದ್ರಣ, ದೃಶ್ಯ ಹಾಗು ಆನ್ ಲೈನ್ ಮಾಧ್ಯಮಗಳ ಸಂಪೂರ್ಣ ಸಹಕಾರ ಅತ್ಯಂತ ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಮಾಧ್ಯಮ ಮಿತ್ರರು ಹಾಗು ಸಂಸ್ಥೆಗಳು ಈ ಆಂದೋಲನವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಸಯ್ಯದ್ ಮೊಹಮ್ಮದ್ ಬ್ಯಾರಿ ವಿನಂತಿಸಿದರು.

 


Spread the love

Exit mobile version