ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’ ಸರ್ವೋತ್ತಮ ಶೆಟ್ಟಿಯವರ ಕಿರೀಟಕ್ಕೆ ಒಂದು ಗರಿ

Spread the love

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ “ಮಯೂರ-ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಸರ್ವೋತ್ತಮ ಶೆಟ್ಟಿಯವರ ಕಿರೀಟಕ್ಕೆ ಒಂದು ಗರಿ

ಶಾರ್ಜಾ ಕರ್ನಾಟಕ ಸಂಘದ ಹದಿನೈದನೆಯ ವಾರ್ಷೀಕೋತ್ಸವ ಮತ್ತು ಪ್ರತಿಷ್ಠಿತ “ಮಯೂರ – ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಪ್ರಧಾನ ಸಮಾರಂಭ 2017 ನವೆಂಬರ್ 17ನೇ ತಾರೀಕು ಶುಕ್ರವಾರ ಶಾರ್ಜಾಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ವಿಜೃಂಬಣೆಯಿಂದ ನಡೆಯಲಿದೆ.

ಹೆಮ್ಮೆಯ ಅನಿವಾಸಿ ಭಾರತೀಯನಾಗಿ, ಕರಾವಳಿ ಕರ್ನಾಟಕದಅಪ್ಪಟಕನ್ನಡಿಗ ಕಳೆದ ನಾಲ್ಕು ದಶಕಗಳಿಂದ ಅರಬ್ ಸಂಯುಕ್ತ ಸಂಸ್ಥಾನದಲ್ಲಿಕನ್ನಡಧ್ವಜವನ್ನುಎತ್ತಿ ಹಿಡಿದ ಧೀಮಂತನಾಯಕ ಸರ್ವೋತ್ತಮ ಶೆಟ್ಟಿಯವರಿಗೆ ಶಾರ್ಜಾಕರ್ನಾಟಕ ಸಂಘದ ಪ್ರತಿಷ್ಠಿತ 2017ನೇ ಸಾಲಿನ “ಮಯೂರ-ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ”ನೀಡಿ ಸನ್ಮಾನಿಸಿ ಗೌರವಿಸಲಾಗುವುದು.

ಅಬುಧಾಬಿ ಕರ್ನಾಟಕ ಸಂಘದಸ್ಥಾಪಕರು, ಅಧ್ಯಕ್ಷರಾಗಿರುವ ಸರ್ವೋತ್ತಮ ಶೆಟ್ಟಿಯವರು ತನ್ನೊಳಗೆ ಇರುವ ಕಲೆ, ಸಂಸ್ಕೃತಿ, ಭಾಷೆ, ನಟನೆ, ಅಭಿಮಾನ, ವಾಕ್‍ಚಾತುರ್ಯತೆ, ಸೇವಾಮನೋಭಾವನೆ ಓರ್ವ ನಾಯಕನಿಗೆ ಇರಬೇಕಾದ ಎಲ್ಲಾ ಆರ್ಹತೆಗಳನ್ನು ಸಾಕ್ಷೀಕರಿಸಿದ ಆಕರ್ಷಕ ವ್ಯಕ್ತಿತ್ವದ ನಾಯಕರಾಗಿದ್ದಾರೆ.  ಗಲ್ಫ್‍ದೇಶದಲ್ಲಿ ಹಲವಾರು ನಾಯಕರನ್ನು ಸೃಷ್ಠಿಸಿರುವ ಕೀರ್ತಿ ಇವರದ್ದು. ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕರ್ನಾಟಕ ಪರ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲಾ ರೀತಿಯ ಮಾರ್ಗದರ್ಶನ, ಬೆಂಬಲ, ಪ್ರೋತ್ಸಾಹ ನೀಡುತ್ತಾಗಲ್ಫ್ ನಾಡಿನಲ್ಲಿಕನ್ನಡ ಭಾಷೆ ಸದಾ ಹಸಿರಾಗಿರಿಸಿದ್ದಾರೆ. ಎಳೆಯ ಮಕ್ಕಳಿಂದ  ವಿವಿದ ವಯೋಮಿತಿಯ ಪ್ರತಿಭೆಗಳಿಗೆ ವೇದಿಕೆಗಳನ್ನು ಕಲ್ಪಿಸಿ ಕಲೆಯನ್ನು ಅರಳಿಸಿರುವ ಕಲಾಪೋಷಕರಾಗಿದ್ದಾರೆ.

ಸರ್ವೋತ್ತಮ ಶೆಟ್ಟಿಯವರ ಹೆಜ್ಜೆ ಗುರುತುಗಳು….

ಭವ್ಯ ಭಾರತದ ಕರ್ನಾಟಕದ ತುಳುನಾಡಿನ ಕಡಲ ತಡಿಯ ಉಡುಪಿ ಜಿಲ್ಲೆ ಮಣಿಪಾಲದ ಹತ್ತಿರದ ಪರೀಕಾದಲ್ಲಿ ಸುಸಂಸ್ಕೃತ ಕುಟಂಬದ ಮಟ್ಟಾರ್ ಪರಾರಿ ದಿ.ಸೂರಪ್ಪ ಹೆಗ್ಡೆ ಮತ್ತು ಶ್ರೀಮತಿ ಸರಸ್ವತಿ ಶೆಟ್ಟಿ ದಂಪತಿಗಳ ಹಿರಿಯಮಗನಾಗಿ, ಉತ್ತಮ ಪರಿಸರದಲ್ಲಿ ಬೆಳೆದು ತನ್ನ ಪ್ರಾಥಮಿಕ, ಪದವಿಪೂರ್ವ ವಿದ್ಯಾಭ್ಯಾಸವನ್ನು ಪೆರ್ಡೂರು, ಹಿರಿಯಡ್ಕದಲ್ಲಿ ಮುಗಿಸಿ, ಮುಂಬೈಯಲ್ಲಿ ಆರ್. ಎ. ಪೊದ್ದಾರ್‍ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ಪಡೆದರು. ತಮ್ಮ ವಿದ್ಯಾರ್ಥಿ ಜೀವನದ ಅವಧಿಯಲಿ 1974 ರಿಂದ 1978ರ ಅವಧಿಯಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ ಇವರನ್ನು ಕಾಲೇಜಿನಿಂದ ಆಯ್ಕೆಯ ಮೂಲಕ, ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಪ್ರತಿನಿಧಿಯಾಗಿಯಾಗುವ ಅವಕಾಶ ದೊರೆಯಿತು. ಈ ಮೂಲಕ ನಾಯಕತ್ವದ ಶಕ್ತಿಯನ್ನು ಮೈಗೂಡಿಸಿ ಕೊಂಡಿದ್ದರು.

ಪ್ರಖ್ಯಾತ ನಾಟಕಕಾರ ಪರ್ವತವಾಣಿಯವರ ಕೃತಿ “ಹಗ್ಗದ ಕೊನೆ” ನಾಟಕದ ಮೂಲಕ ಅಂತರಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಮೊದಲ ಬಹುಮಾನಗಳನ್ನು ಪಡೆಯುವುದರೊಂದಿಗೆ ಕಲಾರಂಗದ ಪಯಣ ಮುಂದುವರಿಯಿತು. ತಮ್ಮ ವ್ಯಾಸಂಗದ ಅವಧಿಯಲ್ಲಿ ಪ್ರಥಮ ಬಾರಿಗೆ ಮುಂಬೈ ಆರ್. ಎ. ಪೊದ್ದಾರ್‍ ಕಾಲೇಜಿನಲ್ಲಿ ಕನ್ನಡ ಸಾಹಿತ್ಯಸಂಘಟನೆಯ ಸ್ಥಾಪನೆ. ಹಲವಾರು ನಾಟಕಗಳ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ಕನ್ನಡ ಚಲನಚಿತ್ರ ನಿರ್ದೆಶಕರಾದ ಶ್ರೀ ವಿಶು ಕುಮಾರ್‍ರವರಿಂದ ಪ್ರಶಸ್ತಿ ಸ್ವೀಕಾರ, ಕ್ರೀಡಾಕೂಟದಲ್ಲಿ ಮೆಲುಗೈ, ಕ್ರಿಕೆಟ್‍ ಆಟಗಾರರಾದ ಭಾರತದ ಸುನಿಲ್ ಗವಾಸ್ಕರ್, ಪಾಕಿಸ್ಥಾನದ ಬೌಲರ್ ಸಪ್ರ್ರಾಜ್‍ಖಾನ್‍ರವರಿಂದ ಬಹುಮಾನ ಪಡೆದ ಇವರು ಭಾರತ ತಂಡದ ಕ್ರಿಕೆಟ್ ಪಟು ವೆಂಗ್ ಸರ್ಕಾರ್, ಪ್ರಖ್ಯಾತ ರಾಜಕಾರಣಿ ಗುರುದಾಸ್‍ ಕಾಮತ್‍ಇವರ ಸಹಪಾಠಿಯಾಗಿದ್ದಾರೆ

1979ರಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ನಂತರ ಕಲೆಗೆ ಸೂಕ್ತ ವೇದಿಕೆಯನ್ನು ರೂಪಿಸಲು, ತನ್ನಕಾಲೇಜಿನ ಹವ್ಯಾಸಿ ಕಲಾವಿದರು, ಸ್ನೇಹಿತರೊಡಗೂಡಿ “ಕಲಾ ಜಗತ್ತು” ಕಲಾಸಂಸ್ಥೆ ಕಟ್ಟಿದರು. ಸ್ಥಾಪಕ ಅಧ್ಯಕ್ಷರಾಗಿ ಸೇವೆಸಲ್ಲಿಸುವುದರ ಮೂಲಕ ಕರ್ನಾಟಕದ ಕನ್ನಡ ತುಳು ಕಲಾ ಪರಂಪರೆಯ ಕೀರ್ತಿಪತಾಕೆ ಹೊರನಾಡಿನ ಮುಂಬೈಯಲ್ಲಿ ಎತ್ತಿ ಹಿಡಿದ್ದಾರೆ. “ಕಲಾ ಜಗತ್ತು” ಸಂಸ್ಥೆ ಕಳೆದ ನಾಲ್ಕು ದಶಕಗಳಿಂದಲೂ ಸತತವಾಗಿ ಕನ್ನಡ, ತುಳು ನಾಟಕಗಳನ್ನು ಪ್ರದರ್ಶಿಸುತ್ತಾ, ತುಳು ಚಲನಚಿತ್ರ ನಿರ್ಮಾಣದ ಮೂಲಕ ಮುಂಬೈ ನಗರದಲ್ಲಿ ಅಗ್ರಸ್ಥಾನದಲ್ಲಿದೆ.

ಮುಂಬೈಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಹತ್ತು ವರ್ಷಗಳ ಕಾಲ ಉದ್ಯೋಗದಲ್ಲಿದ್ದು ನಂತರ ಗಲ್ಪಿನತ್ತ ಪಯಣ, ಅಬುಧಾಬಿಯಲ್ಲಿ ಉನ್ನತ ಹುದ್ದೆಯೊಂದಿಗೆ ಗಲ್ಪಿನಲ್ಲಿ ಜೀವನ ಪ್ರಾರಂಭ, ಇಂಟರ್ ನ್ಯಾಶನಲ್ ಡಿಸ್ಟ್ರಿಬ್ಯೂಶನ್ ಸಂಸ್ಥೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಣೆ, ಸಂಸ್ಥೆಯ ಉನ್ನತಿಯಲ್ಲಿ ತನ್ನ 26 ವರ್ಷಗಳ ಸುಧೀರ್ಘ ಸೇವೆಯ ನಂತರ ಅಬುಧಾಬಿಯಲ್ಲಿ ಕಳೆದ  ಹದಿನಾಲ್ಕು ವರ್ಷಗಳಿಂದ ಸ್ವಂತ ಅಟೊಮೊಬೈಲ್ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿ ಕೊಂಡು ಬರುತಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಗಲ್ಫಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ತುಳು ಮತ್ತು ಪ್ರತಿಭೆಗಳಿಗೆ ಹಲವು ಸಂಘ ಸಂಸ್ಥೆಗಳ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಕೊಟ್ಟು ಪೋತ್ಸಾಹ ನೀಡಿದ್ದಾರೆ

ಸಂಘ ಸಂಸ್ಥೆಗಳ ಜವಬ್ಧಾರಿ…

1995-1996ರಲ್ಲಿ ಅಬುಧಾಬಿಯಲ್ಲಿರುವ ಪ್ರತಿಷ್ಠಿತ ಇಂಡಿಯಾ ಸೋಶಿಯಲ್ ಅಂಡ್‍ಕಲ್ಚರಲ್ ಸೆಂಟರ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ 1999-2000ರಲ್ಲಿ ಸರ್ವೋತ್ತಮ ಶೆಟ್ಟಿಯವರು ಅಂದಿನ 37 ವರ್ಷಗಳ ಇತಿಹಾಸದಲ್ಲಿ ಪ್ರಥಮ ಕನ್ನಡಿಗ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿ ದಾಖಲೆಯನ್ನು ಸೃಷ್ಠಿಸಿದರು.  ನಂತರ 2002-2003ರಲ್ಲಿ ಎರಡನೆಯ ಬಾರಿ ಅಧ್ಯಕ್ಷನಾಗಿ ಆಯ್ಕೆಯಾದ ತಮ್ಮ ಅಧಿಕಾರದ ಅವಧಿಗಳಲ್ಲಿ ಇಂಡಿಯಾ ಸೋಶಿಯಲ್ ಅಂಡ್‍ಕಲ್ಚರಲ್ ಸೆಂಟರ್‍ಗೆ ಕಟ್ಟದ ನಿರ್ಮಾಣ ಮಾಡಲು ಸ್ವಂತ ಸ್ಥಳ ಮತ್ತು ಯು.ಎ.ಇ. ಸರ್ಕಾರದಿಂದ ಅನುಮತಿ ಪಡೆದ ಫಲವಾಗಿ ಪ್ರಸ್ತುತ ಭವ್ಯ ವಾಸ್ತುಶಿಲ್ಪದ ಸಭಾಂಗಣ ನಿರ್ಮಾಣವಾಗಿದೆ. ಇದು ಕನ್ನಡಿಗ ಅಧ್ಯಕ್ಷನ ಸಾಧನೆ ಇಂಡಿಯಾ ಸೋಶಿಯಲ್ ಅಂಡ್‍ ಕಲ್ಚರಲ್ ಸೆಂಟರಿನಲ್ಲಿ ದಾಖಲಾಗಿದೆ.

7500 ಕಿಂತಲೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಅಬುಧಾಬಿ ಇಂಡಿಯನ್ ಸ್ಕೂಲಿನ ಆಡಳಿತ ನಿರ್ದೇಶಕ ಮಂಡಳಿಯಲ್ಲಿ 1997ರಿಂದ ನಿರ್ದೇಶಕರಾಗಿ ಗೌರವ ಪೂರ್ವಕ ಸ್ಥಾನ ಲಭಿಸಿ, ಶಾಲಾ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ. ಕ್ರೀಡೆಯಲ್ಲಿ ಮತ್ತು ಶಾಲಾ ಸರ್ವಾಂಗಿಕರಣ ಅಭಿವೃದ್ದಿಯಲ್ಲಿ ಅಪಾರ ಸೇವೆ ಸಲ್ಲಿಸುತಿದ್ದಾರೆ. ಶಾಲಾ ಆಡಳಿತ ಮಂಡಳಿಯ ಸ್ಪೋಟ್ರ್ಸ್‍ ಕಮಿಟಿಯ ಚೇರ್ಮನ್ ಆಗಿ ಸಹ ಸೇವೆ ಸಲ್ಲಿಸುತ್ತಿರುವ ಸರ್ವೋತ್ತಮ ಶೆಟ್ಟಿಯವರು ಅಲ್ ವತ್ ಬಾ ದಲ್ಲಿ ಶಾಲೆಯ ನೂತನ ಶಾಖೆ ನಿರ್ಮಾಣ ಮಂಡಲಿಯಲ್ಲಿ ಕಾರ್ಯನಿರ್ಹವಣೆಯ ಜವಬ್ಧಾರಿಯನ್ನು ವಹಿಸಿಕೊಂಡು ನಿರ್ಮಾಣವಾದ ಶಾಲೆ ಪ್ರಸ್ತುತ 3000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ.

2017ರಲ್ಲಿಇಂಡಿಯನ್ ಪ್ರೊಫೆಶನಲ್ಸ್‍ಅಂಡ್‍ಎಂಟೆಪ್ರ್ರಿನರ್ ಫೋರಂ ಮತ್ತುಇಂಡಿಅನ್ ಬಿಸ್ನೆಸ್ಸ್ ಪ್ರೊಫೆಶನಲ್ಸ್‍ಗ್ರೂಪ್ ನಲ್ಲಿಕಾರಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಬಂಟರ ಸಮೂದಾಯದ  “ಯು. ಎ. ಇ. ಬಂಟ್ಸ್” ಸಂಘಟನೆಯನ್ನು ಕಳೆದ ಮೂರುವರೆ ದಶಕಗಳಿಂದ ತಮ್ಮ ಸಂಘಟನಾಚತುರತೆಯಿಂದ ಸಾಂಗವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇವರು ಪ್ರತಿ ವರ್ಷ ನೂತನಕಾರ್ಯಕಾರಿ ಸಮಿತಿ ರಚಿಸಿ ಜವಬ್ದಾರಿಯನ್ನು ಹಂಚಿಕೊಡುತ್ತಾರೆ. ಜವಬ್ಧಾರಿ ವಹಿಸಿಕೊಂಡ ಸದಸ್ಯರು ಬಂಟರಸ್ನೇಹ ಮಿಲನ, ವಿಹಾರಕೂಟ, ಕ್ರೀಡಾಕೂಟ, ಪೂಜೆ, ರಕ್ತದಾನ ಶಿಬಿರದಂತಹ  ಕಾರ್ಯಕ್ರಮಗಳನ್ನು ವರ್ಷಂಪ್ರತಿ ವ್ಯವಸ್ಥಿತವಾಗಿ ನಡೆಸಿಕೊಂಡು ಪ್ರತಿಯೊಂದು ಸದಸ್ಯರು ನಾಯಕತ್ವಗುಣವನ್ನು ಹೆಚ್ಚಿಸಿಕೊಳ್ಳುವಲ್ಲಿ ಸರ್ವೋತ್ತಮ ಶೆಟ್ಟಿಯವರ ಪಾತ್ರ ಬಹುಮುಖ್ಯವಾಗಿರುತ್ತದೆ.

ಯು. ಎ. ಇ. ತುಳು ಕೂಟದಲ್ಲಿ ಕಳೆದ ಎರಡುವರೆ ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡು ತುಳುನಾಡಿನ ಕಲಾ ಸಂಸ್ಕೃತಿಯ, ತುಳುಪರ್ಬ, ಸ್ಥಬ್ದಚಿತ್ರಗಳ ಮೆರವಣಿಗೆ, ಕ್ರೀಡಾಕೂಟ, ನಾಟಕ, ಯಕ್ಷಗಾನದ ಪ್ರದರ್ಶನಗಳಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಉತ್ಸಾಹ ತುಂಬಿ ಯಶಸ್ವಿಯಾಗಿ ಮುನ್ನಡೆಸುವಲ್ಲಿ ಇವರ ಕೊಡುಗೆ ಅಪಾರ.

ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಯು.ಎ.ಇ. ಮಟ್ಟದ “ಕೂಸಮ್ಮ ಶಂಭು ಶೆಟ್ಟಿ ಸ್ಮರಣಾರ್ಥ ಮಹಿಳಾ ಮತ್ತು ಪುರುಷರ ಥ್ರೋಬಾಲ್ ಪಂದ್ಯಾಟ” ವನ್ನು ಪ್ರಾರಂಭಿಸಿ ಹತ್ತು ಹಲವಾರು ಮಹಿಳಾ ತಂಡಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಪ್ರತಿಷ್ಠಿತ ತಂಡಗಳಾಗಿ ಪೈಪೊಟಿಯಲ್ಲಿ ಚಮತ್ಕಾರಿಕಾ ಪ್ರದರ್ಶನ ನೀಡುವಲ್ಲಿ ಯಶಸ್ಸು ಕಂಡಿವೆ. ನೆರೆಯಕೊಲ್ಲಿ ರಾಷ್ಟ್ರಗಳಾದ ಕುವೈಟ್, ಒಮಾನ್, ಬಹೆರಿನ್, ಕತ್ತಾರ್ ತಂಡಗಳೊಂದಿಗೆ ಭಾರತದಿಂದ ತಂಡ ಗಲ್ಪ್ ನಾಡಿಗೆ ಬಂದು ಭಾಗವಹಿಸಿದ್ದು ಕ್ರೀಡಾಲೋಕದಲ್ಲಿ ಸಾಕ್ಷಿಯಾಗಿದೆ.

ಕರ್ನಾಟಕಕಡಲ ತೀರದ ಗಡಿನಾಡು ಕಾಸರಗೋಡಿನ ಬದಿಯಡ್ಕದಲ್ಲಿ 2016 ಡಿಸೆಂಬರ್ 9ರಿಂದ 13ರವರೆಗೆ ನಡೆದ ಐತಿಹಾಸಿಕ “ವಿಶ್ವ ತುಳುವೆರೆ ಆಯನೊ”ದ ತುಳು ಸಾಹಿತ್ಯ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಅಧ್ಯಕ್ಷರಾಗಿ ಜವಬ್ಧಾರಿ ವಹಿಸಿಕೊಂಡು ಯಶಸ್ವಿಯಾಗಿಸಿದ ಕೀರ್ತಿಇವರದ್ದಾಗಿದೆ.

2017 ಡಿಸೆಂಬರ್23 ಮತ್ತು24 ರಂದು ಪಿಲಿಕುಳದಲ್ಲಿ ನಡೆಯಲಿರುವ, ತುಳುನಾಡಿನ ಜಾತಿ ಮತ, ಭಾಷಾ ಸೌಹಾರ್ದ ನೆಲೆಗಟ್ಟಿನಲ್ಲಿ ನಡೆಯುವ” ತುಳುನಾಡೋಚ್ಚಯ 2017″ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸರ್ವೋತ್ತಮ ಶೆಟ್ಟಿಯವರಿಗೆ ಸಂದ ಗೌರವವಾಗಿದೆ.

ಪಟ್ಲಯಕ್ಷ ಫೌಂಡೆಶನ್‍ಯು.ಎ.ಇ. ಘಟಕದಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಆಶ್ರಯದಲ್ಲಿ 2017ರಲ್ಲಿ ಸ್ಥಾಪನೆಯಾಗಿರುವ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ.ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿ ಸನ್ಮಾನಗೌರವ…

ವಿದೇಶದಲ್ಲಿಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಯಲ್ಲಿ 1998ರಲ್ಲಿ ಹೊರನಾಡಕನ್ನಡಿಗ ಪ್ರತಿಷ್ಠಿತ ಕರ್ನಾಟಕರಾಜ್ಯೋತ್ಸವ ಪ್ರಶಸ್ತಿಯನ್ನು  ಅಂದಿನ  ಸನ್ಮಾನ್ಯ ಮುಖ್ಯಮಂತ್ರಿಜೆ ಹೆಚ್. ಪಟೆಲ್‍ರವರಿಂದ ಸರ್ವೋತ್ತಮ ಶೆಟ್ಟಿಯವರು ಸ್ವೀಕರಿಸಿದ್ದಾರೆ.  ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಕಾರಿ ಸಮಿತಿಯ ತಂಡದೊಂದಿಗೆ ಗಲ್ಪಿನಲ್ಲಿ ಕರ್ನಾಟಕದ  ಕಲೆ, ಭಾಷೆ, ಸಂಸ್ಕೃತಿಯನ್ನು ವೈಭವೀಕರಿಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ ಅದ್ಭುತ ಸಾಧನೆಗೆ ಸಾಕ್ಷಿಯಾಗಿದ್ದಾರೆ.

ವಿಶ್ವದಲ್ಲಿ ಪ್ರಥಮ ಬಾರಿಗೆ ಅಬುಧಾಬಿಯಲಿ”ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ” ಏರ್ಪಡಿಸಿ ಅಂದಿನ ಕರ್ನಾಟಕದ ಉಪ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯ ಮತ್ತುಕರ್ನಾಟಕ ಸರ್ಕಾರದ14 ಮಂದಿ ಗಣ್ಯರತಂಡ ವಿವಿಧದೇಶಗಳಿಂದ  ಪ್ರತಿನಿಧಿಗಳು ಸಹಸ್ರಾರು ಕನ್ನಡಿಗರ ಸಮಾವೇಶದಲ್ಲಿ ಪಾಲ್ಗೊಂಡು, ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆಕನ್ನಡ ಭಾಷೆಯ ಸಮ್ಮೇಳನ ದಾಖಲಾಯಿತು.

2006ರಲ್ಲಿ 25ವರ್ಷಗಳ ಯಶಸ್ವೀ ಹೆಜ್ಜೆಯೊಂದಿಗೆ ಮುನ್ನಡೆದ ಅಬುಧಾಬಿ ಕರ್ನಾಟಕ ಸಂಘದರಜತ ಮಹೋತ್ಸವವನ್ನು  ಸನ್ಮಾನ್ಯ ಹೆಚ್. ಡಿ. ಕುಮಾರಸ್ವಾಮಿಯವರು ಉದ್ಘಾಟಿಸಿದ್ದು ಕರ್ನಾಟಕದಿಂದ 50ವರ್ಷದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿಯೊಬ್ಬರು ಗಲ್ಫ್ ನಾಡಿಗೆ ಆಗಮಿಸಿದ್ದು, ಗಲ್ಪಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಮರೆಯಲಾರದ ಉತ್ಸವವಾಗಿತ್ತು.

ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ 2006ರಲ್ಲಿ ನಡೆದ ಅಬುಧಾಬಿ ಕರ್ನಾಟಕ ಸಂಘದ ರಜತ ಮಹೋತ್ಸವ ವರ್ಷದಲ್ಲೆ ಪ್ರತಿಷ್ಠಿತ “ಸುವರ್ಣಕರ್ನಾಟಕರಾಜ್ಯೋತ್ಸವ ಪ್ರಶಸ್ತಿ”ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರಿಂದ ಸರ್ವೋತ್ತಮ ಶೆಟ್ಟಿಯವರು ಸ್ವೀಕರಿಸಿದ್ದಾರೆ.

ಸಮಾಜ ಸೇವೆಗಾಗಿ 2009ರಲ್ಲಿ ಸರ್ವೋತ್ತಮ ಶೆಟ್ಟಿಯವರು ಪ್ರತಿಷ್ಠಿತ’ಆರ್ಯಭಟ ಪ್ರಶಸ್ತಿ”ಯನ್ನು  ಬೆಂಗಳೂರಿನಲ್ಲಿ ಸ್ವೀಕರಿಸಿದರು.

ಬೆಂಗಳೂರಿನಲ್ಲಿ “ಕಿರೀಟ ಪ್ರಶಸ್ತಿ”ಯನ್ನು ಕರ್ನಾಟಕ ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯನವರಿಂದ ಸ್ವೀಕಾರ

ಕುವೈಟಿನಲ್ಲಿ ನಡೆದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ರಾಷ್ಟ್ರಕವಿ ಶ್ರೀ ಶಿವರುದ್ರಪ್ಪನವರಿಂದ “ವಿಶ್ವಮಾನ್ಯ ಪ್ರಶಸ್ತಿ” ಸ್ವೀಕಾರ, ನಾರಾಯಣ ಹೃದಯಾಲಯದಲ್ಲಿಡಾ// ದೇವಿ ಪ್ರಸಾದ್ ಶೆಟ್ಟಿಯವರಿಂದ ಸನ್ಮಾನ, ಸನ್ಮಾನನೀಡಿರುವಇನ್ನಿತರ ಸಂಘ ಸಂಸ್ಥೆಗಳು – ಅಲ್‍ಐನ್ ಬುರೈಮಿಕನ್ನಡ ಸಂಘ, ಬಹೆರಿನ್‍ಕನ್ನಡ ಸಂಘ,  ಅಬುಧಾಬಿ ಕರ್ನಾಟಕ ಸಂಘ, ದುಬಾಯಿಕರ್ನಾಟಕ ಸಂಘ ಬೆಂಗಳೂರು  ಯು.ಎ.ಇ.ಬಂಟ್ಸ್, ಬಂಟ್ಸ್‍ಥ್ರೋಬಾಲ್‍ ದುಬಾಯಿ, ದೆಹಲಿ ಬಂಟ್ಸ್ ಸಂಘ, ದೆಹಲಿ ತುಳು ಸಿರಿ, ಪೂನ ಕನ್ನಡ ಸಂಘ, ಪೂನ ಬಂಟರ ಸಂಘ, ಪೂನಾ ತುಳು ಕೂಟ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ, ಪಿಂಪ್ರಿಚಿಂಚ್ಯಾಡ್ ತುಳು ಕೂಟ, ಕಲಾಜಗತ್ತು ಮುಂಬೈ, ಮುಂಬೈ ಬಂಟರ ಸಂಘ, ಬಂಟರ ಮಾತೃ ಸಂಘ ಮಂಗಳೂರು, ಸಾಂಗ್ಲಿತುಳುಕೂಟ ಬೆಳ್ಳಿಹಬ್ಬ, ನಾಸಿಕ್ ಬಂಟರ ಸಂಘ, ಕತ್ತಾರ್ ತುಳುಕೂಟ, ಕುವೈಟ್‍ತುಳುಕೂಟ, ಕುವೈಟ್ ಬಂಟರ ಸಂಘ, 2016ರಲ್ಲಿ ಸುಂದರ್‍ರಾಮ್ ಶೆಟ್ಟಿ ಪ್ರಶಸ್ತಿ,  ಇತ್ಯಾದಿ ಹತ್ತು ಹಲವು ಪ್ರಶಸ್ತಿಗಳ ಸರಮಾಲೆಯನ್ನು ಸರ್ವೋತ್ತಮ ಶೆಟ್ಟಿಯವರು ಧರಿಸಿರುವರು.

ಸರ್ವೋತ್ತಮ ಶೆಟ್ಟಿಯವರ ಸಹಾಯ ಹಸ್ತ ಚಾಚುವಲ್ಲಿ ಎತ್ತಿದ ಕೈ. ಸಾಮಾಜಿಕ ಕಳಕಳಿ ಇರುವ ಅಪಘಾತಕ್ಕೆ ಒಳಗಾದವರಿಗೆ, ಸಂಕಷ್ಟದಲ್ಲಿ ಇರುವವರಿಗೆ, ನಿಧನರಾದವರ ಮನೆಗೆತೆರಳಿ ನೆರವು ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿರುವ ನೈಜಮಾನವ.

ಸಹಸ್ರಾರು ಸಂಖ್ಯೆಯಲ್ಲಿ ವಿಳಾಸ, ದೂರವಾಣಿ ಸಂಖ್ಯೆ, ಇ-ಮೈಲ್,ವಾಟ್ಸೆಪ್‍ ವಿಳಾಸ ಹೊಂದಿರುವ ಇವರು ಗಲ್ಪ್ ನಾಡಿನಲ್ಲಿ ನಡೆಯುವ, ಕಾರ್ಯಕ್ರಮ, ಸಲಹೆ, ಸಹಾಯ, ವೈದ್ಯಕೀಯಶಿಬಿರ, ರಕ್ತಧಾನ ಶಿಬಿರ, ನೌಕರಿ, ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಸಹಾಯ ಇತ್ಯಾದಿ ಹತ್ತು ಹಲವು ವಿಚಾರಗಳನ್ನು ಗಲ್ಪಿನಾದ್ಯಂತ ಇರುವ ಬಂಧು ಮಿತ್ರರಿಗೆ ತಿಳಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ.

ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ, ಸಭೆ ಸಮಾರಂಭಗಳಲ್ಲಿ ಮುಖ್ಯ ಅತಿಥಿಯಾಗಿ, ಕಾರ್ಯಕ್ರಮ ನಿರೂಪಕರಾಗಿ, ಕ್ರೀಡಾಕೂಟದಲ್ಲಿ, ವಿಹಾರಕೂಟದಲ್ಲಿ ತಲೆಯ ಮೇಲೊಂದುದೊಡ್ಡ ಹ್ಯಾಟ್ ಹಾಕಿ ಕೈಲೊಂದು ಮೈಕ್ ಹಿಡಿದು ಮಾತನಾಡಿದರೆ ಕಂಚಿನ ಕಂಠದ ಸ್ವರ ತುಳು ಕನ್ನಡಆಂಗ್ಲ ಭಾಷೆಯಲ್ಲಿ ಪ್ರತಿಧ್ವನಿಸುವ ವ್ಯಕ್ತಿತ್ವದ ಸರ್ವೋತಮಣ್ಣ ಎಲ್ಲರ ಅಚ್ಚುಮಚ್ಚಿನ ಕೇಂದ್ರ ಬಿಂದು ಆಗಿರುತ್ತಾರೆ

ಸದಾ ಗಣ್ಯರೊಂದಿಗೆ ಒಡನಾಟದಲ್ಲಿರುವ, ಎಲ್ಲಾ ಸಂಘಟನೆಗಳ ಮುಖ್ಯಸ್ಥರೊಂದಿಗೆ,ಸದಸ್ಯರೊಂದಿಗೆ ನಗುಮೊಗದಿಂದ ಸ್ನೇಹ ಜೀವಿಯಾಗಿರುವ ಸರ್ವೋತ್ತಮ ಶೆಟ್ಟಿಯವರು 1984ರಲ್ಲಿ ಶ್ರೀಮತಿ ಉಷಾರವರನ್ನು ಬಾಳಾಸಂಗಾತಿಯನ್ನಾಗಿ ಮಾಡಿಕೊಂಡು, ಪುತ್ರ ಸಮರ್ಥ್, ಸೊಸೆ ಶೃತಿ, ಪುತ್ರಿ ಸಂಯುಕ್ತರೊಂದಿಗೆ ಸುಖಿ ಜೀವನ ನಡೆಸುತ್ತಿರುವ ಇವರು 2009ರಲ್ಲಿ ತಮ್ಮ ದಾಂಪತ್ಯ ಜೀವನದ ರಜತ ವರ್ಷಾಚರಣೆಯನ್ನು ನೂರಾರು ಆತ್ಮೀಯರೊಂದಿಗೆ ಆಚರಿಸಿದ ಸಮಾರಂಭ ಆತ್ಮೀಯ ಲೋಕವನ್ನು ಸೃಷ್ಠಿಸಿತ್ತು.

ಜೀವನದ ಯಶಸ್ವಿ ಹೆಜ್ಜೆಯಲ್ಲಿ ಎರಡು ಮಹಾನ್ ವ್ಯಕ್ತಿಗಳು ಇವರಿಗೆ ಮಾದರಿಯಾಗಿದ್ದಾರೆ. ಭಾರತೀಯ ಹೆಮ್ಮೆಯ ವರಪುತ್ರ ಸರಳ ಸಜ್ಜನಿಕೆಯ ಸಕಾರ ಮೂರ್ತಿ, ತುಳು ಮಣ್ಣಿನ ಮಗ ಪದ್ಮಶ್ರೀ ಪುರಸ್ಕೃತ ಡಾ! ಬಿ. ಆರ್. ಶೆಟ್ಟಿಯವರು ಮತ್ತು ಗುಲಾಮ ಗಿರಿಯಿಂದ ಮಾನವ ಕೋಟಿಯನ್ನು ಮುಕ್ತಗೊಳಿಸಿದ ವಿಶ್ವ ಮೆಚ್ಚಿದ ನಾಯಕನೆಲ್ಸನ್ ಮಂಡೆಲಾ.

ಸರ್ವರಲ್ಲಿ ಉತ್ತಮ “ಸರ್ವೋತ್ತಮ” ಆತ್ಮೀಯರ ಅಭಿಮಾನದ ಸರ್ವೋತ್ತಮಣ್ಣನವರು ಗಲ್ಪ್ ನಾಡಿನಲ್ಲಿ ನೆಲೆಸಿರುವ ಅಪ್ಪಟ ಅನಿವಾಸಿ ಭಾರತೀಯ, ಕನ್ನಡಿಗ, ತುಳುಮಣ್ಣಿನ ತುಳುಮಾತೆಯ ಪುತ್ರ. ಜಾತಿ ಮತಧರ್ಮದಎಲ್ಲೆಯನ್ನು ಮೀರಿ, ವಿಶ್ವಮಾನವ ತತ್ವವನ್ನು ತನ್ನಲ್ಲಿ ಅಳವಡಿಕೊಂಡಿರುವ ಆತ್ಮೀಯರಿಗೆ ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ “ಮಯೂರ – ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಯಗರಿ  ಸರ್ವೋತ್ತಮ ಶೆಟ್ಟಿಯವರ ಕೀರಿಟವನ್ನು ಅಲಂಕರಿಸುವ ಸುಮಧುರ ಕ್ಷಣಕ್ಕೆ ಯು.ಎ.ಇ. ಯ ಎಲ್ಲಾ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರು, ಕಳೆದ ಹದಿನಾಲ್ಕು ವರ್ಷಗಳಿಂದ  “ಮಯೂರ – ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ” ಪಡೆದಿರುವ ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಕನ್ನಡಿಗರು ಸಾಕ್ಷಿಯಾಗಲಿದ್ದಾರೆ. ಸಮಸ್ಥ ವಿಶ್ವಕನ್ನಡಿಗರ ಪರವಾಗಿ ಕೋಟಿ ಕೋಟಿ ಅಭಿನಂದನೆಗಳು.

ಬಿ. ಕೆ. ಗಣೇಶ್‍ರೈ
ಪೂರ್ವಅಧ್ಯಕ್ಷ- ಕರ್ನಾಟಕ ಸಂಘ ಶಾರ್ಜಾ, ಅರಬ್ ಸಂಯುಕ್ತ ಸಂಸ್ಥಾನ


Spread the love