ಶಾರ್ಟ್ ಸರ್ಕ್ಯೂಟ್ ಶಂಕೆ: ಹೆಮ್ಮಾಡಿಯ ‘ಅಮರ್ ಕಾರ್ ಕ್ಲಿನಿಕ್’ ಬೆಂಕಿಗಾಹುತಿ!
ಕುಂದಾಪುರ: ಆಕಸ್ಮಿಕವಾಗಿ ಕಾರು ಗ್ಯಾರೇಜ್ ಒಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸೊತ್ತು ಸುಟ್ಟು ಕರಕಲಾದ ಘಟನೆ ತಾಲೂಕಿನ ಹೆಮ್ಮಾಡಿಯಲ್ಲಿ ಶನಿವಾರ ತಡರಾತ್ರಿ ವರದಿಯಾಗಿದೆ.
ರಾ.ಹೆ-66 ರ ಸಂಜೀವಿನಿ ರಿಜಿಡ್ ಪೈಪ್ಸ್ ಬಳಿಯ ಅಮರ್ ಕಾರ್ ಕ್ಲಿನಿಕ್ ಹೆಸರಿನ ಗ್ಯಾರೇಜ್ನಲ್ಲಿ ಈ ಅವಘಡ ಸಂಭವಿಸಿದೆ. ಘಟನೆಗೆ ಶಾರ್ಟ್ ಸೆರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದ್ದು, ಗ್ಯಾರೇಜ್ಗೆ ರಿಪೇರಿಗೆ ತಂದಿದ್ದ ಮೂರು ಕಾರು ಹಾಗೂ ಒಂದು ಸ್ಕೂಟರ್ ಗೆ ಬೆಂಕಿ ತಗುಲಿ ಪರಿಣಾಮ ಸಂಪೂರ್ಣ ಸುಟ್ಟು ಕರಕಲಾಗಿದೆ.
ಸಟ್ವಾಡಿ ಸಮೀಪದ ನಿವಾಸಿ ಅಮರನಾಥ್ ಶೆಟ್ಟಿ ಮಾಲೀಕತ್ವದ ಗ್ಯಾರೇಜ್ ನಲ್ಲಿ ಕಾರು ರಿಪೇರಿ, ಡೆಂಟಿಂಗ್, ಪೇಂಟಿಂಗ್ ಕೆಲಸ ಮಾಡಲಾಗುತ್ತಿದ್ದು, ಮೂರು ಕಾರುಗಳು ರಿಪೇರಿಗೆ ಬಂದಿತ್ತು. ಇದರಲ್ಲಿ ಎರಡು ಕಾರುಗಳು ಸಂಪೂರ್ಣ ರಿಪೇರಿಯಾಗಿ ಭಾನುವಾರ ಗ್ಯಾರೇಜ್ ಗೆ ರಜೆ ಇದ್ದ ಕಾರಣ ಸೋಮವಾರ ವಾಹನ ಮಾಲೀಕರಿಗೆ ಕೊಡುವುದಿತ್ತು. ಆದರೆ ಅಷ್ಟರಲ್ಲಾಗಲೇ ಈ ದುರಂತ ಸಂಭವಿಸಿದೆ.
ಗ್ಯಾರೇಜ್ ಮೇಲ್ಬಾಗದ ಮೊದಲ ಮಹಡಿಯಲ್ಲಿ ಕಟ್ಟಡದ ಮಾಲೀಕರ ಮನೆ ಇತ್ತು. ಸುಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಕಟ್ಟಡ ಮಾಲೀಕರು ಕೆಳಗೆ ಬಂದು ನೋಡುವಾಗ ಬೆಂಕಿಯ ಕೆನ್ನಾಲಗೆ ಇಡೀ ಗ್ಯಾರೇಜ್ ತುಂಬಾ ವ್ಯಾಪಿಸಿತ್ತು. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಧಾವಿಸಿದ ಕುಂದಾಪುರ ಹಾಗೂ ಬೈಂದೂರು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಸಾಕಷ್ಟು ಹರಸಾಹಸಪಟ್ಟರು. ಕೊನೆಗೂ ಸ್ಥಳೀಯರ ಸಹಕಾರದಿಂದ ಶಟರ್ ಬಾಗಿಲು ತೆಗೆದು ನೀರು ಹಾಯಿಸಿ ಬೆಂಕಿಯನ್ನು ಹತೋಟಿಗೆ ತಂದರು.
ಕುಂದಾಪುರ, ಬೈಂದೂರು ಅಗ್ನಿಶಾಮಕ ದಳದ 13 ಮಂದಿ ಸಿಬ್ಬಂದಿಗಳು, ಸ್ಥಳೀಯರಾದ ಮೊಹಮ್ಮದ್ ಆಲಿ, ಶರ್ಫುದ್ದೀನ್, ರಮಾನಾಥ್, ಆಟೋ ಚಾಲಕ ಪ್ರದೀಪ್ ದೇವಾಡಿಗ ಕಾರ್ಯಾಚರಣೆಗೆ ಸಹಕರಿಸಿದರು. ಕುಂದಾಪುರ ನಗರ ಠಾಣೆಯ ಎಎಸ್ಐ ಸುಧಾಕರ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.