ಶಾಲಾ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಪೊಲೀಸ್ ಇಲಾಖೆಯ ಸಭೆ

Spread the love

ಶಾಲಾ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಪೊಲೀಸ್ ಇಲಾಖೆಯ ಸಭೆ
 
ಮಂಗಳೂರು: ನಗರದ ಪ್ರಮುಖ ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಮುಖ್ಯಸ್ಥರು, ಶಾಲೆಗಳ ಮಕ್ಕಳ ಸುರಕ್ಷತಾ ಸಮಿತಿಯ ಸದಸ್ಯರು ಮತ್ತು ಶಾಲಾ ವಾಹನ ಚಾಲಕರ ಸಭೆಯು ಶುಕ್ರವಾರ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಆಯುಕ್ತ ಅನುಪಮ್ ಆಗರ್ವಾಲ್‌ರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಲಾ ವಾಹನಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಮೋಟಾರು ವಾಹನಗಳ (ಶಾಲಾ ಮಕ್ಕಳನ್ನು ಕರೆದ್ಯೊಯ್ಯುವ ವಾಹನಗಳ ಸ್ಥಿತಿಗತಿ) ನಿಯಮಗಳು-2012ರಲ್ಲಿ ಸೂಚಿಸಿರುವ ನಿಬಂಧನೆಗಳನ್ನು ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ತಿಳಿಸಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ವರದಿ ನೀಡುವಂತೆ ಸೂಚಿಸಲಾಯಿತು.

ಶಾಲಾ, ಕಾಲೇಜುಗಳು ಆರಂಭಗೊಳ್ಳುವ ಮತ್ತು ಬಿಡುವ ಸಮಯದಲ್ಲಾಗುವ ವಾಹನ ದಟ್ಟಣೆ ತಡೆಯಲು ಕ್ರಮ ಕೈಗೊಳ್ಳುವಂತೆ ಮತ್ತು ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ವಾಹನಗಳನ್ನು ನಿಲ್ಲಿಸಲು ಹಾಗೂ ವಿದ್ಯಾರ್ಥಿಗಳನ್ನು ಇಳಿಸಲು ಅಥವಾ ಹತ್ತಿಸಲು ಶಾಲಾ ಕಾಲೇಜುಗಳ ಆವರಣದೊಳಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆ, ವಾಹನ ಪಾರ್ಕಿಂಗ್ ಸ್ಥಳಾವಕಾಶವಿಲ್ಲದ ಶಾಲೆಗಳು ಶೀಘ್ರವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.

ಶಾಲಾ, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮತ್ತವರನ್ನು ಕರೆತರುವ ಪೋಷಕರು ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಿ ಶಾಲಾ, ಕಾಲೇಜು ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ಬಗ್ಗೆ ಚರ್ಚಿಸಲಾಯಿತು.

ಶಾಲಾ ಮತ್ತಿತರ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಸಾಗಿಸದಂತೆ, ವಾಹನಗಳಲ್ಲಿ ಕರ್ಕಶ ಹಾರ್ನ್‌ಗಳನ್ನು ಬಳಸದಂತೆ ಸೂಕ್ತ ಸೂಚನೆಯನ್ನು ನೀಡಿ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಆಯುಕ್ತರು ಸೂಚಿಸಿದರು.

ವಿದ್ಯಾರ್ಥಿಗಳಿಗೆ ಪೊಕ್ಸೊ ಕಾಯ್ದೆಗೆ ಸಂಬಂಧಿಸಿದಂತೆ ಆಗಾಗ ಮಾಹಿತಿ ನೀಡುವ ಬಗ್ಗೆ, ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ದಕ್ಕೆ ಆಗದಂತೆ ಶಾಲೆ, ಕಾಲೇಜುಗಳನ್ನು ಪ್ರಾರಂಭಿಸುವ ಹಾಗೂ ಬಿಡುವ ಸಮಯವನ್ನು ಬದಲಾಯಿಸಿಕೊ ಳ್ಳುವಂತೆ ತಿಳಿಸಲಾಯಿತು.

ವಿದ್ಯಾರ್ಥಿಗಳನ್ನು ಕರೆತರುವ ಶಾಲಾ ವಾಹನ ಸಹಿತ ಇತರ ಬಾಡಿಗೆ ವಾಹನಗಳಾದ ಆಟೊ, ಟ್ಯಾಕ್ಸಿ ಇತ್ಯಾದಿಗಳ ಚಾಲಕರ, ಸಹಾಯಕರ ಪೂರ್ವಾಪರ ಮಾಹಿತಿಯನ್ನು ಪೊಲೀಸ್ ಠಾಣೆಗಳ ಮೂಲಕ ಪರಿಶೀಲಿಸಿ ವರದಿ ಪಡೆಯುವಂತೆ ಸೂಚಿಸಲಾಯಿತು.

ಸಭೆಯಲ್ಲಿ ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪಾಯುಕ್ತ ಬಿ.ಪಿ. ದಿನೇಶ್ ಕುಮಾರ್ ಹಾಗೂ ಸಂಚಾರ ಉಪ ವಿಭಾಗದ ಪೊಲೀಸ್ ಸಹಾಯಕ ಆಯುಕ್ತೆ ನಜ್ಮಾ ಫಾರೂಕಿ ಹಾಗೂ ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕರಾದ ಕೃಷ್ಣಾನಂದ ಜಿ.ನಾಯ್ಕ, ಹುಲುಗಪ್ಪಡಿ, ದೀಪಕ್ ಎಂ.ಕೆ. ಉಪಸ್ಥಿತರಿದ್ದರು.


Spread the love