ಉಡುಪಿ: ಮಕ್ಕಳು ಶಾಲೆಯಲ್ಲೊಂದು ಮನೆಯಲ್ಲೊಂದು ಗಿಡನೆಟ್ಟು ಪೋಷಿಸಬೇಕು. ಬರೆ ಗಿಡನೆಟ್ಟು ಬಿಟ್ಟರೆ ಸಾಲದು. ಅದರ ಪೋಷಣೆಯ ಜವಾಬ್ದಾರಿಯನ್ನೂ ವಿದ್ಯಾರ್ಥಿಗಳು ವಹಿಸಬೇಕು. ಗಿಡಗಳ ಬಗ್ಗೆ ಕಾಳಜಿ ವಹಿಸಬೆಕು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ವಾಹನಗಳ ಬಳಕೆ ಕಡಿಮೆ ಮಾಡಬೇಕು. ಆಗ ಮಾತ್ರ ಪರಿಸರ ಸಂರಕ್ಷಣೆಯ ಯೋಜನೆ ಸಫಲವಾಗುತ್ತದೆ. ಸ್ವಚ್ಛ ಗಾಳಿ, ಸ್ವಚ್ಛ ನೀರು ಸಿಗುತ್ತದೆ. ಜೀವನದಲ್ಲಿ ಉಲ್ಲಾಸ ಸಿಗುತ್ತದೆ. ಎಂದು ಉಡುಪಿ ಜಿಲ್ಲಾ ಸರ್ವ ಶಿಕ್ಷಣ ಅಭಿಯಾನದ ಉಪ ಸಮನ್ವಯಾಧಿಕಾರಿಗಳಾದ ಪಿ. ನಾಗರಾಜ್ ನುಡಿದರು.
ಅವರು ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆ ನಡೆದ ವಿಶ್ವ ಪರಿಸರ ದಿನಾಚರಣೆ ಸಮಾರಂಭದ ಸಭಾಧ್ಯಕ್ಷರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಲತಾ ಶಾಲಾ ತೋಟದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಹಿಸಿದ್ದ ಉಡುಪಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್. ಜಿ. ಭಟ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಿರ್ಮಲ ಬಿ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.
ಮಣಿಪಾಲ ಎಂ.ಐ.ಟಿ.ಯ ಪ್ರೊಫೆಸರ್ ಡಾ. ಉದಯಶಂಕರ್ ಪರಿಸರ ಸಂರಕ್ಷಣೆಯ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಉಡುಪಿ ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಚಿತ್ರಕಲಾಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿಗಳಾದ ಕೆ. ಕೀರ್ತಿಕುಮಾರ್ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ವಿವೇಕ್ ಕಾರ್ಯಕ್ರಮ ನಿರ್ವಹಿಸಿದರು. ಸ್ನೇಹ ಧನ್ಯವಾದವಿತ್ತರು.