ಶಾಸಕ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಅನುಚಿತ ವರ್ತನೆ ವಿರುದ್ದ ದೂರು – ಐವನ್ ಡಿಸೋಜ
ಮಂಗಳೂರು: ನಗರದ ವೆಲೆನ್ಸಿಯಾದ ಶಾಲೆಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವೇದವ್ಯಾಸ ಕಾಮತ್ ಮತ್ತು ಶಾಸಕ ಭರತ್ ಶೆಟ್ಟಿ ಅವರು ವಿಚಾರಣೆಮಾಡಲು ಅವಕಾಶ ಕಲ್ಪಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದರ ಬದಲು ಅನುಚಿತವಾಗಿ ವರ್ತಿಸಿ ದ್ದಾರೆ. ಶಾಸಕರಾಗಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಶಾಸಕ ಹುದ್ದೆಯಿಂದ ವಜಾಗೊಳಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಹಾಗೂ ವಿಧಾನಸಭಾ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ಶಾಸಕರು ತಮ್ಮ ಹೊಣೆಗಾರಿಕೆ ಮರೆತು ವರ್ತಿಸಿದ್ದಾರೆ. ಅವರು ಶಾಸಕರಾಗಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಸುಮಾರು ಆರು ದಶಕಗಳ ಇತಿಹಾಸವಿರುವ ಸಂಸ್ಥೆಯ ಘನತೆಗೆ ಧಕ್ಕೆಯುಂಟುಮಾಡುವ ಕೆಲಸ ಶಾಸಕರಿಂದ ನಡೆದಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದರು
ಮಂಗಳೂರಿನಲ್ಲಿ ಈ ಹಿಂದೆ ಬಿಜೆಪಿಯ ಯೋಗಿಶ್ ಭಟ್, ಧನಂಜಯ ಕುಮಾರ್ ಜನಪ್ರತಿನಿಧಿಗಳಾಗಿದ್ದರು ಆದರೆ ಅವರುಗಳು ಈ ಇಬ್ಬರು ಶಾಸಕರ ರೀತಿ ಎಂದೂ ಕೂಡ ವರ್ತಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ ವಿ ಮೋಹನ್ ತಿಳಿಸಿದರು.
ಶಿಕ್ಷಕಿಯ ಮಾತುಗಳ ಬಗ್ಗೆ ಆಕ್ಷೇಪವಿದ್ದರೆ ಪೋಷಕರು ಶಾಲೆಗೆ ಬಂದು ದೂರು ನೀಡಲು ಅವಕಾಶವಿತ್ತು. ಈ ಬಗ್ಗೆ ವಿಚಾರಣೆ ನಡೆದು ಕ್ರಮ ಜರುಗಿಸಲು ಅವಕಾಶ ಇರುವಾಗ ಗೊಂದಲ ಸೃಷ್ಠಿಸಿ ಅದರ ಫೋಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಎಂ ಜಿ ಹೆಗಡೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಬ್ರಾಹಿಂ ಕೊಡಿಜಾಲ್, ಸದಾಶಿವ ಉಳ್ಳಾಲ್, ಎ ಸಿ ವಿನಾಯರಾಜ್, ನವೀನ್ ಡಿ ಸೋಜಾ, ಅಪ್ಪಿಲತಾ, ಜೆ ಅಬ್ದುಲ್ ಸಲೀಮ್, ಗಣೇಶ್ ಪೂಜಾರಿ, ಯು ಟಿ ಫರ್ಜನಾ, ವಿಕಾಸ್ ಶೆಟ್ಟಿ, ಇಮ್ರಾನ್ ಎ ಆರ್, ಶುಭೋದಯ ಆಳ್ವಾ, ಭಾಸ್ಕರ್ ರಾವ್ ಉಪಸ್ಥಿತರಿದ್ದರು.