ಶಾಸಕ ರಘುಪತಿ ಭಟ್ ಅವರ ಉಚಿತ ಬಸ್ ಸೇವೆಗೆ ಉಡುಪಿ ಜನತೆಯ ವ್ಯಾಪಕ ಬೆಂಬಲ
ಉಡುಪಿ: ಉಡುಪಿಯ ಜನತೆಗೆ ಶಾಸಕ ಕೆ. ರಘುಪತಿ ಭಟ್ ತಂಡ ಆಯೋಜಿಸಿದ ಉಚಿತ ಬಸ್ ಸೇವೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ 2115 ಮಂದಿ ಪ್ರಯಾಣಿಸಿದ್ದು, ಶಾಸಕರ ಈ ಸೇವೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
ಕೊರೋನ ಭೀತಿಯಿಂದ ಸ್ತಭ್ದವಾಗಿದ್ದ ಉಡುಪಿಯಲ್ಲಿ ಲಾಕ್ ಡೌನ್ ಸಡಿಲಗೊಂಡ ನಂತರ ನಿಧಾನವಾಗಿ ವ್ಯಾಪಾರ ವಹಿವಾಟು ಆರಂಭಗೊಂಡರೂ ಇಲ್ಲಿನ ಜನ ಬಹುವಾಗಿ ನಂಬಿಕೊಂಡಿರುವ ಖಾಸಗಿ ಬಸ್ಸು ಸಂಚಾರ ಇಲ್ಲದೆ ದಿನಂಪ್ರತಿಯ ಕೆಲಸಕ್ಕೆ ಹೋಗಬೇಕಾದ ಜನ ಸಾಮಾನ್ಯರು ಸಂಕಷ್ಟ ಪಡುತ್ತಿದ್ದರು. ಇದನ್ನು ಮನಗಂಡ ಕ್ಷೇತ್ರದ ಶಾಸಕರಾದ ಕೆ. ರಘುಪತಿ ಭಟ್ ಕೊರೋನ ಭೀತಿಯ ನಡುವೆ ಜನರ ಆರೋಗ್ಯ ಕಾಪಾಡುವ ಜತೆಯಲ್ಲಿ ಬಸ್ಸು ಸಂಚಾರ ಆರಂಭಿಸುವ ನಿರ್ಧಾರಕ್ಕೆ ಕೈ ಹಾಕಿದರು
ಗಣೇಶೋತ್ಸವ ಸಮಿತಿ (ರಿ) ಕಡಿಯಾಳಿ ತಂಡದ ಜತೆ ಸೇರಿಕೊಂಡು ನಗರ ಸಭಾ ಸದಸ್ಯರು, ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಪ್ರಾಯೋಗಿಕವಾಗಿ ಒಂದು ವಾರ ಉಚಿತ ಬಸ್ಸು ಸೇವೆ ಒದಗಿಸುವ ಕುರಿತು ತೀರ್ಮಾನ ಕೈಗೊಂಡರು.ಒಂದೆಡೆ ದಿನದಿಂದ ದಿನಕ್ಕೆ ಏರುತ್ತಿರುವ ಕೊರೋನ ಸೋಂಕಿನ ಪ್ರಕರಣದ ನಡುವೆ ಜನ ಸಾಮಾನ್ಯರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಬಸ್ಸಿನ ವ್ಯವಸ್ಥೆ ಕಲ್ಪಿಸುವ ಮಹತ್ತರವಾದ ಜವಾಬ್ದಾರಿಯನ್ನು ಮನಗಂಡು ಈ ಬಗ್ಗೆ ತನ್ನ ತಂಡದೊಂದಿಗೆ ಚರ್ಚಿಸಿ ಪ್ರಯಾಣಿಕರ ಸ್ಕ್ರೀನಿಂಗ್ ಮಾಡುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಗಮನಿಸುವುದು. ಪ್ರತಿ ಟ್ರಿಪ್ ನ ನಂತರ ಬಸ್ಸಿನ ಒಳಗೆ ಸಂಪೂರ್ಣವಾಗಿ ಸ್ಯಾನಿಟೈಸಿಂಗ್ ಮಾಡುವುದು. ಪ್ರತಿಯೊಬ್ಬ ಪ್ರಯಾಣಿಕರ ವಿವರಗಳನ್ನು ಪಡೆಯುವ ಬಗ್ಗೆ ನಿರ್ಧರಿಸಿ ಇದಕ್ಕಾಗಿ ಎಲ್ಲಾ ನಿಲ್ದಾಣಗಳಲ್ಲಿ ಇಬ್ಬರಂತೆ ಸ್ವಯಂ ಸೇವಕರನ್ನು ನೇಮಿಸಿ ವ್ಯವಸ್ಥಿತವಾಗಿ ಸೋಮವಾರ ಚಾಲನೆ ನೀಡಿದ್ದರು.
ಇದು ಕೇವಲ ಬಸ್ಸಿನ ಪ್ರಯಾಣ ಮಾತ್ರವಲ್ಲ ಜನ ತಮ್ಮ ರಕ್ಷಣೆಯೊಂದಿಗೆ ನಿರಾತಂಕವಾಗಿ ಓಡಾಡಬಹುದು ಎಂಬ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಶಾಸಕರು ಮಾಡಿದ್ದು ಶಾಸಕ ರಘುಪತಿ ಭಟ್ ಅವರ ಸೇವೆಗೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.