Home Mangalorean News Kannada News ಶಾಸಕ ಲೋಬೋರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿನಲ್ಲಿ ಅಶಾಂತಿ ಕಂಡಿತೇ? – ಡಿ.ವೇದವ್ಯಾಸ ಕಾಮತ್

ಶಾಸಕ ಲೋಬೋರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿನಲ್ಲಿ ಅಶಾಂತಿ ಕಂಡಿತೇ? – ಡಿ.ವೇದವ್ಯಾಸ ಕಾಮತ್

Spread the love

ಶಾಸಕ ಲೋಬೋರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿನಲ್ಲಿ ಅಶಾಂತಿ ಕಂಡಿತೇ? – ಡಿ.ವೇದವ್ಯಾಸ ಕಾಮತ್

ಮಂಗಳೂರು: ಎಲ್ಲವೂ ಕಾನೂನಾತ್ಮಕವಾಗಿ ನಡೆದು ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಲೈಟ್ ಹೌಸ್ ಹಿಲ್ ರಸ್ತೆಗೆ ಇಡುವ ಪ್ರಕ್ರಿಯೆ ಕೊನೆಯ ಹಂತದಲ್ಲಿ ಇರುವಾಗ ಅದಕ್ಕೆ ತಡೆಯಾಜ್ಞೆ ತರುವ ಮೂಲಕ ಶಾಸಕದ್ವಯರಾದ ಜೆ ಆರ್ ಲೋಬೋ ಹಾಗೂ ಐವನ್ ಡಿಸೋಜಾ ಅವರು ಸಮಾಜದ ಮಹಾಪುರುಷನೊಬ್ಬನ ಗೌರವಕ್ಕೆ ಕುಂದು ತರುವ ಕೆಲಸ ಮಾಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ವಿಜಯಾ ಬ್ಯಾಂಕ್ ವರ್ಕರ್ಸ್ ಯೂನಿಯನ್ ಮಂಗಳೂರು ಮಹಾನಗರ ಪಾಲಿಕೆಗೆ ಮನವಿ ಕೊಟ್ಟಾಗ ಅದನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆದು, ಪರಿಷತ್ ಸಭೆಯಲ್ಲಿಯೂ ಸಮ್ಮತಿ ಪಡೆದು ಬಳಿಕ ದ.ಕ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮೀಷನರ್ ಅವರಿಂದ ಶಾಂತಿ ಸುವ್ಯವಸ್ಥೆಗೆ ಭಂಗ ಬರುವುದಿಲ್ಲ ಎಂದು ಲಿಖಿತ ಅನುಮತಿ ಪಡೆದು ಸಾರ್ವಜನಿಕ ಆಕ್ಷೇಪಣೆಗಳಿಗಾಗಿ ಮಂಗಳೂರಿನ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ ನಂತರ ಒಂದು ತಿಂಗಳ ಕಾಲಾವಧಿಯಲ್ಲಿ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಬರದೇ ಇದ್ದುದರಿಂದ ಅಲ್ಲಿಂದ ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ವರದಿಯನ್ನು ಕಳುಹಿಸಿ ಕೊನೆಗೆ ಸುಧೀರ್ಘ ಪ್ರಕ್ರಿಯೆಯ ನಂತರ ಜುಲೈ 2 ಭಾನುವಾರ ನಾಮಫಲಕ ಅನಾವರಣ ಕಾರ್ಯಕ್ರಮ ಸಿದ್ಧವಾಗಿತ್ತು. ಆದರೆ ಏಕಾಏಕಿ ಜುಲೈ ಒಂದರ ಸಂಜೆಯೊಳಗೆ ಅದಕ್ಕೆ ತಡೆಯಾಜ್ಞೆ ತರುವ ಮೂಲಕ ಈ ಭಾಗದ ಶಾಸಕರುಗಳು ಸುಖಾಸುಮ್ಮನೆ ವಿವಾದ ಹುಟ್ಟು ಹಾಕಿದ್ದಾರೆ.

ಕಾನೂನುಬದ್ಧ ಪ್ರಕ್ರಿಯೆಗೆ ವಿರೋಧವಾಗಿ ತನ್ನ ಸಂಪೂರ್ಣ ಶ್ರಮ ಹಾಕಿ ಕೆಲವೇ ಗಂಟೆಗಳಲ್ಲಿ ತಡೆಯಾಜ್ಞೆ ಆದೇಶ ತರುವ ಶಾಸಕ ಲೋಬೋ ಅವರು ಸ್ಮಾರ್ಟ ಸಿಟಿ ಯೋಜನೆ, ಅಮೃತ ಯೋಜನೆ ಸೇರಿದಂತೆ ಮಂಗಳೂರಿನ ಅಭಿವೃದ್ಧಿ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಯಾವುದೇ ಆದೇಶಗಳನ್ನು ಕೆಲವೇ ಗಂಟೆಗಳಲ್ಲಿ ತರಲು ಒಂದು ದಿನವಾದರೂ ಶ್ರಮ ಹಾಕಿರುವರೇ? ಎಂದು ವೇದವ್ಯಾಸ ಕಾಮತ್ ಪ್ರಶ್ನಿಸಿದರು.

ಕೆಥೊಲಿಕ್ ಕ್ಲಬ್ ನಿಂದ ಬಾವುಟಗುಡ್ಡೆಯಾಗಿ ಅಂಬೇಡ್ಕರ್ ಸರ್ಕಲ್ ತನಕದ ರಸ್ತೆಯ ಯಾವುದೇ ಸಂಘ ಸಂಸ್ಥೆಯ ದಾಖಲೆಯಲ್ಲಿ ಅಂಗಡಿಗಳಲ್ಲಿ ಕಟ್ಟಡಗಳಲ್ಲಿ ಮೇಲಾಗಿ ಎಲೋಶಿಯಸ್ ಕಾಲೇಜಿಗೆ ಸಂಬಂಧಿಸಿದ ಎಲ್ಲ ಸಾರ್ವಜನಿಕ ಫಲಕಗಳಲ್ಲಿ ಲೈಟ್ ಹಿಲ್ ರಸ್ತೆ ಎಂದೇ ನಮೂದಾಗಿರುವುದನ್ನು ಕಾಣಬಹುದಾಗಿದೆ. ಹಾಗಿರುವಾಗ ಒಂದು ಸಮಾಜದ ಅಶಾಂತಿಗೆ ಕಾರಣವಾಗುವುದರಿಂದ ತಡೆಯಾಜ್ಞೆ ತಂದಿದ್ದೇನೆ ಎಂದು ಶಾಸಕರು ಹೇಗೆ ಹೇಳುತ್ತಾರೆ?

ಯಾವುದೇ ಜಾತಿ ಧರ್ಮಗಳಿಗೂ ಲೆಕ್ಕಿಸದೇ ಸಮಾಜದ ಅಷ್ಟೂ ಅಸಹಾಯಕರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದ ಸುಂದರರಾಮ ಶೆಟ್ಟರ ಹೆಸರು ಇಡುವುದು ಬೇಡಾ ಎಂದು ಲೋಬೋ ಅವರಿಗೆ ಅನಿಸಿದ್ದರೆ ಅವರದ್ದೇ ಪಕ್ಷದ ಆಳ್ವಿಕೆ ಇರುವ ಪಾಲಿಕೆಯಲ್ಲಿ ಈ ವಿಷಯ ಪ್ರಸ್ತಾಪ ಆದಾಗ ವಿರೋಧಿಸಬಹುದಿತ್ತು. ಆಗ ಸುಮ್ಮನಿದ್ದು ಎಲ್ಲಾ ರೀತಿಯ ಕಾನೂನಾತ್ಮಕವಾಗಿ ಒಪ್ಪಿಗೆ ಪಡೆದ ನಂತರ ಏಕಪಕ್ಷೀಯವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ತಡೆಯಾಜ್ಞೆ ತಂದಿರುವುದು ಉದ್ದೇಶಪೂರ್ವಕವಾಗಿ ಸುಂದರರಾಮ ಶೆಟ್ಟಿಯವರ ಹೆಸರಿಗೆ ಅವಮಾನ ಮಾಡಿದ್ದು ಸ್ಪಷ್ಟವಾಗಿದೆ.

ಈ ಹಿಂದೆ ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡುವ ಪ್ರಕ್ರಿಯೆಯನ್ನೂ ಸಹ ಇದೇ ಕಾಂಗ್ರೆಸ್ ಪಕ್ಷ ಪಾಲಿಕೆಯಲ್ಲಿ ವಿರೋಧಿಸಿದ್ದರ ಪರಿಣಾಮ ಆ ಕಾರ್ಯ ಮುಂದುವರಿಯಲೇ ಇಲ್ಲ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾನೂನಾತ್ಮಕ ಪ್ರಕ್ರಿಯೆಗೇ ಅಡ್ಡಗಾಲು ಹಾಕಿದ್ದಾರೆ. ಇದನ್ನು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ


Spread the love

Exit mobile version