ಶಿಕ್ಷಣ ಸಂಸ್ಥೆಗಳ ಪರಿಸರದಲ್ಲಿ ತಂಬಾಕು ಮಾರಿದರೆ ಅಂಗಡಿ ಲೈಸನ್ಸ್ ರದ್ದುಗೊಳಿಸಲು ಸೂಚನೆ

Spread the love

ಶಿಕ್ಷಣ ಸಂಸ್ಥೆಗಳ ಪರಿಸರದಲ್ಲಿ ತಂಬಾಕು ಮಾರಿದರೆ ಅಂಗಡಿ ಲೈಸನ್ಸ್ ರದ್ದುಗೊಳಿಸಲು ಸೂಚನೆ

ಮಂಗಳೂರು: ಶಾಲಾ ಕಾಲೇಜುಗಳ 100 ಮೀಟರ್ ಅಂತರದ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಂಡು ಪರವಾನಿಗೆಯನ್ನು ನವೀಕರಿಸದೆ, ರದ್ದುಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಸೂಚಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2024-25ರ ಸಾಲಿನ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಹೊಸ ತಂಬಾಕು ಪರವಾನಿಗೆ ನೀತಿಯು ಮಹಾನಗರ ಪಾಲಿಕೆಯಲ್ಲಿ ಜಾರಿಯಾದ ತಕ್ಷಣ ಶಾಲಾ ಕಾಲೇಜು ಗಳ 100 ಅಂತರದ ಒಳಗೆ ತಂಬಾಕು ಮಾರಾಟ ಮಾಡುತ್ತಿದ್ದಲ್ಲಿ ಪರವಾನಿಗೆಯನ್ನು ರದ್ದು ಪಡಿಸುವಂತೆ, ಹಾಗೂ ಇನ್ನಿತರ ಸ್ಥಳಗಳಲ್ಲಿ ತಂಬಾಕು ಮಾರಾಟ ಮಾಡುವವರು ಕಡ್ಡಾಯವಾಗಿ ಪಾಲಿಕೆಯಿಂದ ಪರವಾನಿಗೆಯನ್ನು ಪಡೆಯುವಂತೆ ಪ್ರತಿ ತಿಂಗಳ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವಂತೆ ನಗರಪಾಲಿಕೆ ಅಧಿಕಾರಿಗಳಿಗೆ ಅವರು ತಿಳಿಸಿದರು.

ಕಾರ್ಮಿಕರಲ್ಲಿ ತಂಬಾಕು ಸೇವನೆಯು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ವೆನ್ಲಾಕ್ ಆಸ್ಪತ್ರೆಯ ಸಹಭಾಗಿತ್ವದೊಂದಿಗೆ ಕಾರ್ಮಿಕರ ಕಾಲೋನಿಗಳಿಗೆ ತೆರಳಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ಪಿಡಿಒಗಳು ತಂಬಾಕು ನಿಯಂತ್ರಣ ಬಗ್ಗೆ ನಿರಂತರ ಕಾರ್ಯಾಚರಣೆ ಮಾಡಬೇಕು. ತಮ್ಮ ವ್ಯಾಪ್ತಿಯ ಸುತ್ತಮುತ್ತಲಿನ ಶಾಲಾ ಕಾಲೇಜು, ಧಾರ್ಮಿಕ ಕೇಂದ್ರಗಳು, ಅಂಗನವಾಡಿ ಕೇಂದ್ರಗಳ 100 ಮೀಟರ್ ವ್ಯಾಪ್ತಿಯ ಒಳಗೆ ತಂಬಾಕು ಮಾರಾಟವಾಗುತ್ತಿದ್ದಲ್ಲಿ ರೈಡ್ ಮಾಡಿ ಪರವಾನಿಗೆಯನ್ನು ರದ್ದುಗೊಳಿಸುವಂತೆ ತಿಳಿಸಿದರು.

ಮಹಾನಗರಪಾಲಿಕೆ, ಅಬಕಾರಿ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ತಂಬಾಕು ಮಾರಾಟಗಳು ನಡೆಯುತ್ತಿದ್ದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚಿಸಿದರು.

ಆಹಾರ ಸುರಕ್ಷತೆ ಗುಣಮಟ್ಟ ಅಂಕಿತ ಅಧಿಕಾರಿ ಪ್ರವೀಣ್ ಅವರು ಮಾತನಾಡಿ ಈಗಾಗಲೇ ರಾಜ್ಯ ಸರ್ಕಾರದಿಂದ ಆಹಾರಗಳಲ್ಲಿ ಕೃತಕ ಬಣ್ಣವನ್ನು ಬಳಸುವುದನ್ನು ನಿಷೇಧಿಸಲಾಗಿದೆ. ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಆಹಾರ ಘಟಕಗಳಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿದ್ದಲ್ಲಿ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಶಾಲಾ ಕಾಲೇಜುಗಳಿಗೆ ರವಾನೆಯಾಗುವ ಬಿಸಿ ಊಟ, ಹಾಸ್ಟೆಲ್, ಅಂಗನವಾಡಿಗಳಲ್ಲಿ, ಕ್ಯಾಂಟೀನ್ಗಳಲ್ಲಿ ನೀಡಲಾಗುವ ಆಹಾರಗಳನ್ನು ಕಾಯಿದೆ ಅಡಿ ನೋಂದಣಿ ಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್. ಆರ್ ತಿಮ್ಮಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್, ಸೈಬರ್ ಕ್ರೈಂ ಡಿವೈಎಸ್ಪಿ ಮಂಜುನಾಥ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love