ಶಿರಾಡಿ ಘಾಟಿಯಲ್ಲಿ ಭೂಕುಸಿತ. ಸಂಚಾರ ಬಂದ್, ಕೆಸರಿನಲ್ಲಿ ಹೂತುಹೋದ ವಾಹನಗಳು

Spread the love

ಶಿರಾಡಿ ಘಾಟಿಯಲ್ಲಿ ಭೂಕುಸಿತ. ಸಂಚಾರ ಬಂದ್, ಕೆಸರಿನಲ್ಲಿ ಹೂತುಹೋದ ವಾಹನಗಳು
 

ಮಂಗಳೂರು: ಕೇರಳದ ವಯನಾಡಿನ ಬೆನ್ನಲ್ಲೇ ಕರ್ನಾಟಕದ ಹಾಸನದ ಶಿರಾಡಿ ಘಾಟ್ ರಸ್ತೆಯಲ್ಲೂ ಮಂಗಳವಾರ ಅಪರಾಹ್ನ ಭಾರೀ ಭೂಕುಸಿತ ಸಂಭವಿಸಿದ್ದು ಹಲವು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ.

ಮಂಗಳೂರು ಬೆಂಗಳೂರಿನ ಕೊಂಡಿಯಾಗಿರುವ ಈ ರಸ್ತೆ ಇನಷ್ಟು ಕುಸಿತದ ಆತಂಕ ಎದುರಾಗಿದೆ. ಬೆಂಗಳೂರು- ಮಂಗಳೂರು ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಮತ್ತೆ ಬೃಹತ್‌ ಭೂಕುಸಿತವಾಗಿದೆ. ಕನಿಷ್ಠ ಎರಡು ಕಾರುಗಳು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಇದರಡಿ ಸಿಲುಕಿಕೊಂಡಿವೆ. ಮುಂಜಾಗೃತಾ ಕ್ರಮವಾಗಿ ಘಾಟಿಯಲ್ಲಿ ವಾಹನ ಸಂಚಾರ ಪೂರ್ತಿ ರದ್ದುಗೊಳಿಸಲಾಗಿದೆ. ಕಾರ್ಯಾಚರಣಾ ಸಿಬ್ಬಂದಿ ಜೆಸಿಬಿ ಮೂಲಕ‌ ಮಣ್ಣು ತೆರವು ಮಾಡುತ್ತಿದ್ದು, ಸ್ಥಳದಲ್ಲಿ ಆತಂಕ ಹೆಚ್ಚಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ನಡೆಯುವ ಭೀತಿಯಿದೆ. ಸಾಗರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನ ನಡೆಯುತ್ತಿದೆ.

ಶಿರಾಡಿ ಘಾಟ್‌ ಬಳಸಿ ವಾಹನ ಓಡಾಟ ನಡೆಸದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್‌ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ಆದೇಶವರೆಗೆ ಈ ರಸ್ತೆಯನ್ನು ಬಂದ್‌ ಮಾಡಿ ಆದೇಶ ನೀಡಲಾಗಿದೆ. ಸಾರ್ವಜನಿಕರು ಈ ರಸ್ತೆಯನ್ನು ಓಡಾಟಕ್ಕೆ ಬಳಸದಂತೆ ಮನವಿ ಮಾಡಲಾಗಿದೆ. ಇನ್ನು ಭೂಕುಸಿತ ಸ್ಥಳದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.


Spread the love