ಶಿರೂರು ರಾ. ಹೆದ್ದಾರಿ ಬಳಿ ಪಡಿತರ ಚೀಟಿಗಳ ಮೂಟೆ ಪತ್ತೆ;ಜಿಲ್ಲಾಧಿಕಾರಿ ಸ್ಪಷ್ಟೀಕರಣ
ಕುಂದಾಪುರ: ಶಿರೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಪಡಿತರ ಚೀಟಿಗಳನ್ನು ಒಳಗೊಂಡ ಮೂಟೆಯೊಂದು ಪತ್ತೆಯಾಗಿದೆ.
ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟ ಈ ಪಡಿತರ ಚೀಟಿಗಳನ್ನು ದೊಡ್ಡ ಸಿಮೆಂಟ್ ಚೀಲದಲ್ಲಿ ತುಂಬಿಸಿ ಶಿರೂರು ಗ್ರೀನ್‌ವ್ಯಾಲಿ ಶಾಲೆ ಎದುರಿನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಎಸೆಯಲಾಗಿತ್ತು. ಇಂದು ಅಪರಾಹ್ನ 12 ಗಂಟೆ ಸುಮಾರಿಗೆ ಮಾಹಿತಿ ಸಿಕ್ಕಿ ತಾವು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಅವುಗಳು ರದ್ದಾದ ಹಳೆಯ ಪಡಿತರ ಚೀಟಿಗಳಂತೆ ಕಂಡುಬಂದವು ಎಂದು ಬೈಂದೂರಿನ ತಹಶೀಲ್ದಾರ್ ತಿಳಿಸಿದರು.
2008ರಿಂದ 2015-16ರಲ್ಲಿ ನೀಡಲಾದ ಪಡಿತರ ಚೀಟಿಗಳು ಇದರಲ್ಲಿದ್ದು, ಅಂತ್ಯೋದಯ, ಬಿಪಿಎಲ್, ಎಪಿಎಲ್ ಎಲ್ಲಾ ವರ್ಗದ ಪಡಿತರ ಚೀಟಿಗಳು ಇದರಲ್ಲಿ ಇರುವುದು ಕಂಡುಬಂದಿದೆ ಎಂದು ಬೈಂದೂರಿನ ಕಂದಾಯ ನಿರೀಕ್ಷಕರು ತಿಳಿಸಿದ್ದಾರೆ.
ಹಳೆಯದಾದ ಈ ಪಡಿತರ ಚೀಟಿಗಳ ಮೂಟೆಯನ್ನು ಯಾರು, ಯಾವಾಗ, ಯಾಕಾಗಿ ಇಲ್ಲಿ ಎಸೆದುಹೋಗಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಬಂಟ್ವಾಳ ತಾಲೂಕು ಕಚೇರಿಗೆ ಮಾಹಿತಿ ನೀಡಲಾಗಿದೆ. ಅಲ್ಲಿಂದ ಉತ್ತರವನ್ನು ನಿರೀಕ್ಷಿಸಲಾಗಿದೆ ಎಂದವರು ತಿಳಿಸಿದರು.
ಬೈಂದೂರು ಪಿಎಸ್‌ಐ, ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲಿ ಸಿಕ್ಕಿದ ಎಲ್ಲಾ ವಸ್ತುಗಳ ಮಹಜರ್ ನಡೆಸಲಾಗಿದ್ದು, ಇವುಗಳನ್ನು ಮುಂದಿನ ಕ್ರಮಕ್ಕಾಗಿ ಕುಂದಾಪುರ ತಾಲೂಕು ಕಚೇರಿಯ ಆಹಾರ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಕಂದಾಯ ನಿರೀಕ್ಷಕರು ತಿಳಿಸಿದರು.
ಶಿರೂರು ಗ್ರಾಮದ ಗ್ರೀನ್‌ವ್ಯಾಲಿ ಶಾಲೆ ಎದುರಿನ ರಾ.ಹೆದ್ದಾರಿ ಪಕ್ಕದಲ್ಲಿ ಮೂಟೆಯೊಂದರಲ್ಲಿ ದೊರೆತ ಪಡಿತರ ಚೀಟಿಗಳನ್ನು ಬೈಂದೂರು ತಹಶೀಲ್ದಾರ್ ಕಚೇರಿಗೆ ತಂದು ಪರಿಶೀಲಿಸಲಾಗಿದೆ. ಗೋಣಿ ಚೀಲದಲ್ಲಿ ಸುಮಾರು 2,000 ಪಡಿತರ ಚೀಟಿಗಳಿದ್ದು, ಇವು ಹೊಸ ಪಡಿತರ ಚೀಟಿ ನೀಡುವಾಗ ಹಿಂದಕ್ಕೆ ಪಡೆದ ಹಳೆ ಪಡಿತರ ಚೀಟಿಗಳಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿಗೆ ಸಂಬಂಧಿಸಿದ ಪಡಿತರ ಚೀಟಿಗಳೆಂದು ಕಂಡುಬಂದಿದೆ.
ಈ ಪಡಿತರ ಚೀಟಿಗಳನ್ನು ಪಡೆದು ನಿಯಮಾನುಸಾರ ವಿಲೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪತ್ರಿಕಾ ಹೇಳಿಕೆ ಯೊಂದರಲ್ಲಿ ತಿಳಿಸಿದ್ದಾರೆ.