ಶಿರ್ವ : ಕಾರಿನಲ್ಲಿ ಅಕ್ರಮ ಗೋ ಸಾಗಾಟ – ಮೂರು ದನಗಳ ರಕ್ಷಣೆ , ಆರೋಪಿಗಳು ಪರಾರಿ, ಕಾರು ವಶ
ಉಡುಪಿ: ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ದನಗಳನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಶಿರ್ವ ಪೊಲೀಸರು ತಡೆದು ದನಗಳನ್ನು ರಕ್ಷಿಸಿದ ಘಟನೆ ಭಾನುವಾರ ಬೆಳಿಗ್ಗೆ ಮೂಡುಬೆಳ್ಳೆ ಸಮೀಪ ನಡೆದಿದೆ.
ಶನಿವಾರ ರಾತ್ರಿ ಶಿರ್ವ ಠಾಣಾಧಿಕಾರಿ ಶ್ರೀ ಶೈಲ್ ಡಿ ಎಂ ಅವರು ರಾತ್ರಿ ರೌಂಡ್ಸ್ ನಲ್ಲಿದ್ದು ಭಾನುವಾರ ಬೆಳಿಗ್ಗಿನ ಜಾವ ಎಡ್ಮೆರು ಎಂಬಲ್ಲಿ ಪಳ್ಳಿ ಕಡೆಯಿಂದ ಒಂದು ಕಾರು ವೇಗವಾಗಿ ಬೆಳ್ಳೆ ಕಡೆಗೆ ಹೋಗಿದ್ದು, ಕೂಡಲೇ ಕಾರನ್ನು ಹಿಂಬಾಲಿಸಿ ಕೊಂಡು ಹೋಗಿದ್ದು, ಕಟ್ಟಿಂಗೇರಿ ನಾಲ್ಕು ಬೀದಿ ಜಂಕ್ಷನ್ ಅಡ್ಡ ಹಾಕಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರು ಕಾರನ್ನು ಅಲ್ಲಿಯೇ ಬಿಟ್ಟು ಕತ್ತಲಿನಲ್ಲಿ ಓಡಿ ಪರಾರಿಯಾಗಿದ್ದು, ಕಾರನ್ನು ಪರಿಶೀಲಿಸಲಾಗಿ ಕಾರಿನೊಳಗೆ 3 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಕಟ್ಟಿರುವುದು ಕಂಡು ಬಂದಿರುತ್ತದೆ
ಕಾರಿನ ಆರ್.ಸಿ ಮಾಲಕ ಉಮ್ಮರ್ ಮೊಯಿದ್ದೀನ್ ಮತ್ತು ಇತರ 3 ಜನರು ಕಾರಿನಲ್ಲಿ ಜಾನುವಾರುಗಳನ್ನು ಕದ್ದು ತಂದು ಅದರ ಕಾಲುಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಿಂದ ಮಾಂಸ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ದನಗಳನ್ನು ಕಾರಿನಲ್ಲಿ ತುಂಬಿಸಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸಾಗಾಟ ಮಾಡುತ್ತಿರುವುದು ತನಿಖೆಯಿಂದ ಕಂಡುಬಂದಿದೆ.
3 ಜಾನುವಾರುಗಳನ್ನು, ಕಾರು ಮತ್ತು ಕಾರಿನೊಳಗಿದ್ದ ಜಾನುವಾರುಗಳನ್ನು ಕಟ್ಟಿದ ಹಗ್ಗ , 1 ಚಾಕು ಮತ್ತು 2 ಹಳದಿ ಬಣ್ಣದ ನಂಬರ್ ಪ್ಲೇಟ್ ಮತ್ತು ಕಾರಿನ ದಾಖಲಾತಿಗಳನ್ನು ಶಿರ್ವ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.