ಶಿಲಾಮಯವಾಗಿ ಅನಾವರಣಗೊಳ್ಳುತ್ತಿರುವ ತಲ್ಲೂರು ಗರೋಡಿ
39 ದೈವಗಳಿರುವ, ವಿಶಿಷ್ಠ ಆಚರಣೆ ನಡೆಯುವ ಇತಿಹಾಸ ಹೊಂದಿರುವ ದೈವ ಸ್ಥಾನ
ಕುಂದಾಪುರ: ಬ್ರಹ್ಮಾವರದಿಂದ ಬೈಂದೂರು ವರೆಗಿನ ಕೋಟಿ ಚನ್ನಯ್ಯ ಗರೋಡಿಗಳ ಪೈಕಿ ಮೊದಲ ಶಿಲಾಮಯ ಗರೋಡಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿರುವ ತಲ್ಲೂರಿನ ಶ್ರೀ ಬ್ರಹ್ಮ ಬೈದರ್ಕಳ ಮತ್ತು ಮುಡೂರು ಹಾ್ಐಗುಳಿ ಹಾಗೂ ಪರಿವಾರ ದೈವ ಸ್ಥಾನದಲ್ಲಿ ಜ.21 ರಿಂದ 28 ರವರೆಗೆ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ, ಕೆಂಡಸೇವೆ ಹಾಗೂ ದೈವ ದರ್ಶನಕ್ಕೆ ದಿನ ನಿಗದಿಯಾಗಿದ್ದು, ಪೂರ್ವ ಸಿದ್ದತಾ ಕಾರ್ಯಗಳು ಭರದಿಂದ ಸಾಗಿದೆ.
ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ತಲ್ಲೂರು ಗರೋಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಮತ್ತು ಮುಡೂರು ಹಾ್ಐಗುಳಿ , ಕೋಟಿ-ಚನ್ನಯ್ಯರು, ದೇಯಿ ಬೈದತಿ ಅಮ್ಮ, ನಂದಿಕೇಶ್ವರ, ದೊಟ್ಕಲ್ ಚಿಕ್ಕು, ಕರೆಬೆಟ್ಟು ಹಾ್ಐಗುಳಿ, ಮೋಗೇರ ಮನೆ ಬೊಬ್ಬರ್ಯ, ಬಲ್ಲಾಳಿ ಸೇರಿದಂತೆ ಸುಮಾರು 38 ದೈವಗಳು ಪ್ರತಿಷ್ಠಾಪಿಸಲಾಗಿದೆ. ಅಂದಾಜು 2 ಎಕ್ರೆ ವಿಸ್ತೀರ್ಣವಾದ ಪ್ರದೇಶದಲ್ಲಿ ಇರುವ ಗರೋಡಿಯಲ್ಲಿ ಹಿಂದೆ, ಷಡಿ ಸೇವೆಯನ್ನು ನಡೆಸಲಾಗುತ್ತಿತ್ತು ಎನ್ನುವ ಬಗ್ಗೆ ಐತಿಹ್ಯವಿದೆ.
ಆನಾದಿ ಕಾಲದಿಂದಲೂ ತಲ್ಲೂರು ದೊಡ್ಮನೆ ಕುಟುಂಬದವರ ಬಲ್ಲಾಳ ಶೆಟ್ರಾಗಿ ಆಡಳಿತ ವ್ಯವಸ್ಥೆಯ ಯಜಮಾನಿಕೆಯನ್ನು ನಿರ್ವಹಿಸುತ್ತಿದ್ದಾರೆ. ದೈವ ದರ್ಶನ ಹಾಗೂ ಪೂಜೆಯ ಸೇವೆಯನ್ನು ಬಿಲ್ಲವ ಸಮುದಾಯದವರು ಮಾಡುತ್ತಿದ್ದಾರೆ. ಬಂಟ, ಪೂಜಾರಿ (ಬಿಲ್ಲವ), ನಾಮಧಾರಿ, ಜಿಎಸ್ಬಿ (ಕೊಂಕಣಿ ), ವಿಶ್ವಕರ್ಮ ಹಾಗೂ ಪರಿಶಿಷ್ಠ ಸಮಾಜ ಬಂಧುಗಳು ಈ ದೈವ ಸ್ಥಾನವನ್ನು ಹೆಚ್ಚಾಗಿ ನಂಬಿಕೊಂಡು ಬಂದಿದ್ದು, ಉಳಿದಂತೆ ಊರ ಹಾಗೂ ಪರವೂರಿನ ದೊಡ್ಡ ಸಂಖ್ಯೆಯ ಭಕ್ತ ವರ್ಗ ಇದೆ. ಉಡುಪಿ, ಶಿವಮೊಗ್ಗ, ಕಾರವಾರ ಜಿಲ್ಲೆಗಳ ಅಂದಾಜು 1,500 ಕ್ಕೂ ಹೆಚ್ಚು ಕುಟುಂಬಗಳು ಈ ದೈವ ಸ್ಥಾನದ ಮೇಲೆ ಅಚಲವಾದ ನಂಬಿಕೆಯನ್ನು ಇಟ್ಟು, ಶೃದ್ಧೆಯಿಂದ ನಡೆದುಕೊಳ್ಳುತ್ತಾರೆ.
ವಾರ್ಷಿಕ ಉತ್ಸವ :
ಪ್ರತಿ ವರ್ಷದ ಜನವರಿ 27 ರಂದು ನಡೆಯುವ ವಾರ್ಷಿಕ ಹಬ್ಬ ಹಾಗೂ ಕೆಂಡ ಮುಹೂತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ಹಬ್ಬದ ದಿನ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ನಾಗ ದೇವರ ದರ್ಶನ ಪಾತ್ರಿಗಳನ್ನು ವೈಭವದ ಪುರ ಮೆರವಣಿಗೆಯ ಮೂಲಕ ದೊಡ್ಮನೆಯ ಮೂಲ ನಾಗ ಸನ್ನಿದಿಗೆ ಕರೆತರಲಾಗುತ್ತದೆ. ಅಲ್ಲಿ ಆಕರ್ಷಣೆಯಾದ ನಾಗ ಪಾತ್ರಿ, ಶ್ರೀ ಮಹಾಕಾಳಿ ಸನ್ನಿಧಿಗೆ ಬರುತ್ತಾರೆ, ಅಲ್ಲಿ ಕೆಂಡದ ಹಾ್ಐಗುಳಿ ಆಕರ್ಷಣೆಯಾದ ಬಳಿಕ ಜೋಡಿ ಪಾತ್ರಿಗಳು ಆಕರ್ಷಣೆಯಲ್ಲಿಯೇ ಷಡಿ ಕಟ್ಟೆಯ ಬಳಿ ಬಂದು ಪೂಜಾ ಕಾರ್ಯಗಳು ನಡೆಯುತ್ತದೆ. ಅಲ್ಲಿಂದ ನಾಗ ದೇವರ ಪಾತ್ರಿ ಮೂಲ ಸ್ಥಾನಕ್ಕೆ ಹಿಂತಿರುಗಿದ ಬಳಿಕ, ದೇವಸ್ಥಾನದ ಎದುರಿನಲ್ಲಿ ನಿರ್ಮಿಸಲಾದ ಗೆಂಡ ಸೇವೆ ( ಕೆಂಡ ಸೇವೆ ) ಹೊಂಡದಲ್ಲಿ ಉರಿಯುತ್ತಿರುವ ಕೆಂಡ ಮೇಲೆ ಕೆಂಡದ ಹಾ್ಐಗುಳಿ ಪಾತ್ರಿ ಪಾದ ಸ್ವರ್ಶವನ್ನು ಮಾಡಿದ ಬಳಿಕ ಭಕ್ತರಿಗೆ ಕೆಂಡ ತುಳಿಯಲು ಅವಕಾಶ ಕಲ್ಪಿಸಲಾಗುತ್ತದೆ. ತಡರಾತ್ರಿಯವರೆಗೂ ನಡೆಯುವ ಈ ಸೇವೆಯಲ್ಲಿ ಮದುವೆ, ಕಾಯಿಲೆ, ವ್ಯವಹಾರ, ಶಿಕ್ಷಣ ಹಾಗೂ ಮಕ್ಕಳಾಗುವ ಬಗ್ಗೆ ಹರಕೆ ಹೊತ್ತುಕೊಂಡಿದ್ದ ನೂರಾರು ಜನರು ತಮ್ಮ ಹರಕೆಯನ್ನು ತೀರಿಸುತ್ತಾರೆ.
ಜ.28 ರಂದು ಮುಡೂರು ಹಾ್ಐಗುಳಿ ಹಾಗೂ ಪರಿವಾರ ದೈವಗಳ ದರ್ಶನ ಸೇವೆ, ತುಲಾಭಾರ ಸೇವೆ ಹಾಗೂ ಇತರ ಪೂಜೆಗಳನ್ನು ನಡೆಸಿ ಪ್ರಸಾದ ವಿತರಣೆ ನಡೆಸಲಾಗುತ್ತದೆ. ಶ್ರೀ ಮಹಾಕಾಳಿ ಅಮ್ಮನವರು ಕೊಲ್ಲೂರಿನಿಂದ ಬಂದವರು ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ಕದಿರು ಹಬ್ಬದ ಆಚರಣೆ ನಡೆಯುತ್ತದೆ.
ಕೈದ ಪೂಜೆ :
ದೊಡ್ಮನೆ ಕಂಬಳದ ದಿನ ಗರೋಡಿಯಿಂದ ದೊಡ್ಮನೆಗೆ ಹಾಗೂ ಮರುದಿನ ದೊಡ್ಮನೆಯಿಂದ ಗರೋಡಿಗೆ ಎಳನೀರು ಹಾಗೂ ಕಬ್ಬಿನ ಜಲ್ಲೆಗಳನ್ನು ತೆಗೆದುಕೊಂಡು ಹೋಗುವ ವಿಶಿಷ್ಠ ಸಂಪ್ರದಾಯ ಇದೆ. ಕಂಬಳದ ಮಾರನೇ ದಿನ ಗರೋಡಿ ದೈವಗಳ ಪೂಜೆ ಮಾಡುವ ಪೂಜಾರಿಯವರು ವರ್ಷದ ಮೊದಲ ಹೊಸ ಅಕ್ಕಿಯ ಅನ್ನವನ್ನು ಊಟ ಮಾಡುವ ‘ ಕೈದ ‘ ಎನ್ನುವ ವಿಶಿಷ್ಠ ಕ್ರಮ ಇಲ್ಲಿದೆ. ನಿಗದಿ ಪಡಿಸಿದ ಮುಹೂರ್ತದಲ್ಲಿ ತುಳಸಿ ಕಟ್ಟೆ ವೃಂದಾವನ ಮಾಡಿ, ಅವಲು ಸೇವೆ ಹಾಗೂ ತುಳಸಿ ಪೂಜೆಯನ್ನು ಮಾಡಲಾಗುತ್ತದೆ. ದೊಡ್ಮನೆ ಕುಟುಂಬದವರು ನೀಡಿರುವ ಹೊಸ ಭತ್ತದ ಅಕ್ಕಿಯಲ್ಲಿ ಸಸ್ಯಹಾರದ ಅಡುಗೆ ಮಾಡಿ ದೈವಗಳಿಗೆ ಅಗಳು ಸೇವೆಯನ್ನು ಮಾಡಿ ಪ್ರಸಾದ ವಿತರಣೆ ನಡೆಯುತ್ತದೆ. ಹಿಂದೆಲ್ಲ ರಾತ್ರಿಪೂರ ನಡೆಯುತ್ತಿದ್ದ ಈ ಆಚರಣೆ, ಇದೀಗ ಮಾರನೇಯ ದಿನ ಮುಂಜಾನೆಯಿಂದ ಆರಂಭವಾಗಿ ಬಲ್ಲಾಳ್ ಶೆಟ್ರ ಆಗಮನದ ಬಳಿಕ ದೈವ ದರ್ಶನ ನಡೆಸಿ, ಪ್ರಸಾದ ವಿತರಣೆ ನಡೆಯುತ್ತದೆ. ಕೊಡಿ ಹಬ್ಬದ ಸಂಕ್ರಾಂತಿಯಂದು ದೊಡ್ಮನೆಗೆ ಬರುವ ಪುರೋಹಿತರು, ಕಂಬಳ ಹಾಗೂ ಕೈದ ಪೂಜೆಗೆ ದಿನ ಹಾಗೂ ಮುಹೂರ್ತ ನಿಗದಿ ಮಾಡುತ್ತಾರೆ.
ಜೀರ್ಣೋದ್ಧಾರ ಕಾರ್ಯಗಳು :
ಗರೋಡಿಯ ಬಲ್ಲಾಳ ಶೆಟ್ರಾಗಿರುವ ವಸಂತ ಆರ್ ಹೆಗ್ಡೆ, ಮುರಳೀಧರ ಶೆಟ್ಟಿ, ಜೀರ್ಣೋದ್ಧಾರ ಸಮತಿಯ ಅಧ್ಯಕ್ಷರಾಗಿರುವ ಟಿ.ಬಿ.ಶೆಟ್ಟಿ, ಪ್ರಧಾನ ಅರ್ಚಕ ಕುಮಾರ, ಪುರೋಹಿತ ಪ್ರಭಾಕರ ಭಟ್ ಹಾಗೂ ದೈವ ಪಾತ್ರಿ ರಾಜೀವ ಪೂಜಾರಿ ಅವರ ನೇತ್ರತ್ವದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದೆ. 2013-14 ನೇ ಸಾಲಿನಲ್ಲಿ ಗರೋಡಿಗೆ ತಾಗಿ ಕೋಡು ಇರುವ ಶ್ರೀ ಮಹಾಕಾಳಿ ಅಮ್ಮನವರ ಹಾಗೂ 7 ಪರಿವಾರ ದೈವಗಳಿರುವ ದೇವಸ್ಥಾನವನ್ನು ಅಂದಾಜು 45-50 ಲಕ್ಷ ರೂ. ವೆಚ್ಚದಲ್ಲಿ ತಾಮ್ರದ ಹೊದಿಕೆ ಸಹಿತವಾಗಿ ಪುನರ್ ನಿರ್ಮಾಣ ಮಾಡಲಾಗಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಭಕ್ತರ ಹಾಗೂ ಆಡಳಿತ ಮನೆತನದವರ ಸಂಕಲ್ಪದಂತೆ ಗರೋಡಿಯ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದೆ.
ಕೋಟ್ಯಾಂತರ ರೂ. ವೆಚ್ಚದಲ್ಲಿ ಗರೋಡಿಯನ್ನು ಶಿಲಾಮಯವಾಗಿ ಪುನರ್ ನಿರ್ಮಿಸಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಕೆಲ ದೈವಗಳ ಬಿಂಬವನ್ನು ಹೊಸದಾಗಿ ನಿರ್ಮಿಸಲಾಗಿದೆ. ಮಾಡಿಗೆ ಹಿತ್ತಾಳೆಯ ಹೊದಿಕೆ ಹಾಕಲಾಗಿದೆ. ಆಕರ್ಷಕ ಮರದ ಕೆತ್ತನೆಗಳುಳ್ಳ ಧ್ವಾರ ಬಾಗಿಲು, ಮೇಲ್ಛಾವಣೆ ನಿರ್ಮಿಸಲಾಗಿದೆ. ಈ ಭಾಗದಲ್ಲಿ ಬೈಂದೂರು ಹೊರತು ಪಡಿಸದರೆ ಶಿಲಾಮಯವಾಗುತ್ತಿರುವ ಗರೋಡಿ ಎನ್ನುವ ಹೆಗ್ಗಳಿಕೆಯೂ ಬಂದಿದೆ.
ದೊಡ್ಮನೆ ಕುಟುಂಬ :
ಹಿಂದೆ ರಾಜಾಶ್ರಯವನ್ನು ಹೊಂದಿದ್ದ ಬಂಟ ಯಾನೆ ನಾಡವರ ಸಮುದಾಯ ತಲ್ಲೂರಿನ ಪ್ರಸಿದ್ಧ ದೊಡ್ಮನೆ ಕುಟುಂಬದವರು, ನೂರಾರು ವರ್ಷಗಳಿಂದ ತಲ್ಲೂರು ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ದೇವಾಲಯ ಹಾಗೂ ದೈವ ಸ್ಥಾನಗಳ ಯಜಮಾನಿಕೆಯನ್ನು ಶೃದ್ಧೆಯಿಂದ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ತಲ್ಲೂರಿನ ಗ್ರಾಮ ದೇವಸ್ಥಾನವಾದ ಶ್ರೀ ಮಹಾಲಿಂಗೇಶ್ವರ, ಶ್ರೀ ವೆಂಕಟರಮಣ, ರಾಜಾಡಿಯ ಶ್ರೀ ರಕ್ತೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನ ಹಾಗೂ ಗರೋಡಿಗಳಲ್ಲಿನ ಯಜಮಾನಿಕೆಗಳು ಪಾರಂಪರಿಕವಾಗಿ ದೊಡ್ಮನೆ ಕುಟುಂದವರು ನಡೆಸಿಕೊಂಡು ಬರುತ್ತಿದ್ದಾರೆ. ಕೇವಲ ದೊಡ್ಮನೆ ಕುಟುಂಬದ ಪುರುಷರಲ್ಲದೆ, ಮಹಿಳೆಯರು ಕೂಡ ಯಶಸ್ವಿಯಾಗಿ ಯಜಮಾನಿಕೆಯನ್ನು ನಡೆಸಿಕೊಂಡು ಬಂದಿರುವ ಬಗ್ಗೆ ದಾಖಲೆಗಳು ಇದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಂಬಳಗಳಲ್ಲಿ ಒಂದಾಗಿರುವ ತಲ್ಲೂರು ದೊಡ್ಮನೆ ಕಂಬಳೋತ್ಸವದಲ್ಲಿ ಇಂದಿಗೂ ಕೂಡ ವಿಶಿಷ್ಠ ಪಾರಂಪರಿಕ ಧಾರ್ಮಿಕ ಕ್ರಮಗಳು ನಡೆಯುತ್ತಿದೆ. ಕಳೆದ ಒಂದು ವರ್ಷದ ಅವಧಿಯ ಒಳಗೆ ತಲ್ಲೂರಿನ ಶ್ರೀ ಮಹಾಲಿಂಗೇಶ್ವರ, ರಾಜಾಡಿಯ ಶ್ರೀ ರಕ್ತೇಶ್ವರಿ ಹಾಗೂ ಗರೋಡಿ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
ದೊಡ್ಮನೆ ಕುಟುಂಬದವರ ಮನೆಯ ಉಪ್ಪರಿಗೆ ಮೇಲೆ ನೆಲೆ ಇದ್ದ ಮುಡೂರು ಹಾ್ಐಗುಳಿಯನ್ನು ನಿರ್ದಿಷ್ಠ ಕಾರಣಗಳಿಗಾಗಿ ಗರೋಡಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎನ್ನುವ ನಂಬಿಕೆಗಳಿದ್ದು, ಈ ದೈವವನ್ನೆ ಇಲ್ಲಿನ ಪ್ರಧಾನ ದೈವವಾಗಿ ಆರಾಧಿಸಲಾಗುತ್ತಿದೆ.
ಇತಿಹಾಸವನ್ನು ಹೊಂದಿರುವ ತಲ್ಲೂರು ಗರೋಡಿಯನ್ನು ಸುಂದರವಾಗಿ ನಿರ್ಮಿಸಬೇಕು ಎನ್ನುವುದು ಇಲ್ಲಿನ ಭಕ್ತರ ಸಂಕಲ್ಪವಾಗಿತ್ತು. ಇದೀಗ ಎಲ್ಲರ ಸಹಕಾರದಿಂದ ಶಿಲಾಮಯ ದೈವ ಸ್ಥಾನವಾಗಿರುವುದು ಮನಸ್ಸಿಗೆ ಸಂತೋಷ ತಂದಿದೆ ಎಂದು ಗರೋಡಿಯ ಬಲ್ಲಾಳ ಶೆಟ್ರು ವಸಂತ ಆರ್ ಹೆಗ್ಡೆ ಹೇಳಿದರು.