ಶಿವಮೊಗ್ಗ ಉಪಚುನಾವಣೆಗೆ ಕಂಡವರ ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿಲ್ಲ – ಭೋಜೇಗೌಡ
ಉಡುಪಿ: ‘ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಂಡವರ ಮಕ್ಕಳನ್ನು ತಂದು ನಿಲ್ಲಿಸಿಲ್ಲ. ಶಾಸಕರಾಗಿದ್ದ, ಪ್ರಸ್ತುತ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ಮಧು ಬಂಗಾರಪ್ಪ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ’ ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ತಿರುಗೇಟು ನೀಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮನಗರದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕನನ್ನು ಪಕ್ಷಕ್ಕೆ ಸೆಳೆದು ಚುನಾವಣೆಗೆ ನಿಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ದೀಪಾವಳಿಯ ಉಡುಗೊರೆಯನ್ನು ಪಡೆದುಕೊಂಡಿದ್ದಾರೆ’ ಎಂದು ಭೋಜೇಗೌಡ ವ್ಯಂಗ್ಯವಾಡಿದರು.
ಕಣದಿಂದ ಹಿಂದೆ ಸರಿದ ಚಂದ್ರಶೇಖರ್‌ಗೆ ಹಣದ ಆಮಿಷವೊಡ್ಡಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಅವರನ್ನು ಪಕ್ಷಕ್ಕೆ ಸೆಳೆಯುವಾಗ ನೀವು ಹಣದ ಆಮಿಷವೊಡ್ಡಿರಲಿಲ್ಲವೇ’ ಎಂದು ಭೋಜೇಗೌಡ ಪ್ರಶ್ನಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಿರಿಯ ನಾಯಕರು ಮೈತ್ರಿ ಸರ್ಕಾರದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿ ಮಧು ಬಂಗಾರಪ್ಪ ಗೆಲ್ಲುವುದು ಖಚಿತ’ ಎಂದರು.
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಕರಾವಳಿ ಭಾಗದ ಶಾಸಕರನ್ನು ಕರೆಸಿ ವಿಧಾನಸೌಧರಲ್ಲಿ ಸಭೆ ನಡೆಸಿದ್ದಾರೆ. ಈ ಸಂದರ್ಭ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಧಿಕಾರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆಯನ್ನೂ ನೀಡಿದ್ದರು. ಇಷ್ಟಾದರೂ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಸಿಎಂ ವಿರುದ್ಧ ಟೀಕೆ ಮಾಡಿರುವುದು ಖಂಡನೀಯ’ ಎಂದರು.
ಚುನಾವಣೆ ಸಂದರ್ಭ ಜನರ ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕೋಟ ಅವರಿಗೆ ಮಾತಿನ ಮೇಲೆ ಎಚ್ಚರ ಇರಲಿ. ಮರಳುಗಾರಿಕೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಜನರಿಗೆ ಮರಳು ಕೊಡಿಸುವ ಗುರಿಯೊಂದಿಗೆ ಹೋರಾಟ ನಡೆಸಬೇಕು’ ಎಂದರು.
ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ವಿಚಾರದಲ್ಲಿ ಬಿಜೆಪಿ ಮುಖಂಡರು ಕೇಂದ್ರದ ಸಚಿವರನ್ನು ಭೇಟಿಮಾಡಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಧರಣಿಯಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು’ ಎಂದರು.
2011ಕ್ಕಿಂತ ಮುಂಚಿತವಾಗಿ ಜಿಲ್ಲೆಯಲ್ಲಿ 93 ಮಂದಿ ಸಾಂಪ್ರದಾಯಿಕ ಮರಳು ತೆಗೆಯುವವರು ಇದ್ದಾರೆ. 2011ರ ನಂತರ 171 ಮಂದಿಯನ್ನು ಪಟ್ಟಿಗೆ ಸೇರಿಸಲಾಗಿದೆ. ಹಳೆಯ ಪಟ್ಟಿಯಲ್ಲಿ ಅನರ್ಹರಿದ್ದರೆ ಅವರನ್ನು ಕೈಬಿಡುವ ಹಾಗೂ ಹೊಸಪಟ್ಟಿಯಲ್ಲಿ ಸಾಂಪ್ರದಾಯಿಕ ಮರಳುಗಾರರಿದ್ದರೆ ಅವರನ್ನು ಹಳೆಯ ಪಟ್ಟಿಗೆ ಸೇರಿಸಲು ಸರ್ಕಾರದ ಜತೆ ಚರ್ಚಿಸುತ್ತೇನೆ’ ಎಂದರು.
ಜಿಲ್ಲಾಧಿಕಾರಿ ಕೂಡ ಮರಳಿನ ಸಮಸ್ಯೆ ಬಗೆಹರಿಸಲು ಕಾನೂನುಗಳನ್ನು ಗಂಭೀರವಾಗಿ ಹೇರದೆ, ನಿಯಮಗಳನ್ನು ಸಡಿಲಗೊಳಿಸಬೇಕು’ ಎಂದು ಭೋಜೇಗೌಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮುಖಂಡ ಜಯಕುಮಾರ್ ಪರ್ಕಳ, ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ಪ್ರದೀಪ್ ಇದ್ದರು.