Home Mangalorean News Kannada News ಶಿಶುಮರಣ ಹೆಚ್ಚಳ: ಸಮಗ್ರ ವರದಿ ನೀಡಿ – ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ

ಶಿಶುಮರಣ ಹೆಚ್ಚಳ: ಸಮಗ್ರ ವರದಿ ನೀಡಿ – ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ

Spread the love

ಶಿಶುಮರಣ ಹೆಚ್ಚಳ: ಸಮಗ್ರ ವರದಿ ನೀಡಿ – ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ

ಉಡುಪಿ: ಏಪ್ರಿಲ್‌ನಲ್ಲಿ 7 ಶಿಶುಗಳು ಸಾವನ್ನಪ್ಪಿದ್ದು, ಪ್ರತಿಯೊಂದು ಪ್ರಕರಣದಲ್ಲೂ ಕೂಲಂಕಷ ಪರಿಶೀಲನೆ ನಡೆಸಿ ಸಮಗ್ರ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ನೀಡಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಘಟಕಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾಗುತ್ತಿರುವುದು ಆಂತಕಕಾರಿ ಬೆಳವಣಿಗೆ. ಯಾವ ಪ್ರದೇಶದಲ್ಲಿ, ಯಾವ ಕಾರಣಕ್ಕೆ ಶಿಶುಮರಣ ಹೆಚ್ಚಾಗಿದೆ ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಆದೇಶಿಸಿದರು.

ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ಸಾವನ್ನಪ್ಪಿದ 7 ಶಿಶುಗಳಲ್ಲಿ 4 ಹೆಣ್ಣು ಶಿಶುಗಳು ಇರುವುದು ಗಂಭೀರ ವಿಚಾರ. ಕಳೆದ ಡಿಸೆಂಬರ್‌ನಿಂದ ಇಲ್ಲಿಯವರೆಗೂ 7 ಮಹಿಳೆಯರು ಪ್ರಸವ ಸಂಬಂಧಿ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂದರ್ಭ ಅವಶ್ಯವಾದ ತುರ್ತು ಸೌಲಭ್ಯಗಳು ಇರುವಂತೆ ಗಮನಹರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಮಲೇರಿಯಾ, ಡೆಂಗಿ ಪ್ರಕರಣಗಳ ಬಗ್ಗೆ ಮುಂಜಾಗೃತಾ ಕ್ರಮಕೈಗೊಳ್ಳಲು ಆಶಾ ಕಾರ್ಯಕರ್ತೆಯರು ತಿಂಗಳಿಗೊಮ್ಮೆ ಮನೆ–ಮನೆಗೆ ಭೇಟಿ ನೀಡಿ. ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು.

ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸ್ವಚ್ಚತೆಯ ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಲಾರ್ವ ಪತ್ತೆ ಹಚ್ಚುವಿಕೆ ಬಗ್ಗೆ ಶಿಕ್ಷಣ ನೀಡಿ ಮನೆಗಳಲ್ಲಿ ವಾರಕ್ಕೊಂದು ಬಾರಿ ಲಾರ್ವಾ ಪತ್ತೆ ಕಾರ್ಯಗತಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಈವರೆಗೆ 306 ಎಚ್1 ಎನ್1 ಪ್ರಕರಣಗಳು ಪತ್ತೆಯಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 14 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.

ಸ್ವಚ್ಚ ಭಾರತ್ ಅಭಿಯಾನ ದಡಿಯಲ್ಲಿ ಮಳೆಗಾಲದಲ್ಲಿ ಪ್ರತಿ ವಾರ ಗ್ರಾಮೀಣ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಮಾಡುವವರ ಆರೋಗ್ಯ ಇಲಾಖೆ ಯಿಂದ ಎನ್‍ಒಸಿಯನ್ನು ಪಡೆದು ಕೊಳ್ಳಬೇಕು ಎಂದು ನಿರ್ದೇಶಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಆಶ್ರಯದಲ್ಲಿ ವಾರಕ್ಕೊಂದು ಬಾರಿ ವಾಟರ್ ಟ್ಯಾಂಕ್ ಸ್ವಚ್ಛತೆ ಹಾಗೂ ಅಂಗನವಾಡಿ, ಶಾಲೆಗಳಲ್ಲಿ ಕೈತೊಳೆಯುವ ಕಾರ್ಯಕ್ರಮ ನಡೆಸಬೇಕು. ಕಾರ್ಯಕ್ರಮಗಳು ಕ್ರಿಯಾತ್ಮಕವಾಗಿರಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ತಾಲ್ಲೂಕು ಪಂಚಾಯತ್ ಇಒ ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಥಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌, ಆರೋಗ್ಯ ಇಲಾಖೆ ಅಧಿಕಾರಿ ಡಾ.ಪ್ರಶಾಂತ್ ಭಟ್, ಡಾ.ಎಂ.ಜಿ. ರಾಮ, ಡಾ.ರಾಮರಾವ್‌ ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

Exit mobile version