ಶೋಭಾಗೆ ಸತ್ಯ ಹೇಳಲು ಗೊತ್ತಿಲ್ಲ ನನಗೆ ಸುಳ್ಳು ಹೇಳುವುದು ಬರಲ್ಲ – ಪ್ರಮೋದ್ ಮಧ್ವರಾಜ್
ಕಾರ್ಕಳ: ನನ್ನ ಶಾಸಕತ್ವದ ಅಭಿವೃದ್ಧಿಯ ಕೆಲಸಗಳನ್ನು ಶೋಭಾ ಕರಂದ್ಲಾಜೆ ಅವರು ತಮ್ಮ ಅಭಿವೃದ್ಧಿಯ ಕೆಲಸಗಳನ್ನು ತಾನೇ ಮಾಡಿಸಿದ್ದು ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಬಿಜೆಪಿಗರಿಗೆ ಸತ್ಯ ಹೇಳುವುದು ಗೊತ್ತಿಲ್ಲ ಹಾಗೆ ಕಾಂಗ್ರೆಸಿಗರಿಗೆ ಸುಳ್ಳು ಹೇಳುವುದು ಗೊತ್ತಿಲ್ಲ ಇದೇ ಕಾಂಗ್ರೆಸ್ ಮತ್ತು ಬಿಜೆಪಿಗರ ನಡುವೆ ಇರುವ ವ್ಯತ್ಯಾಸ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಶುಕ್ರವಾರ ಕಾರ್ಕಳ, ಅಜೆಕಾರುಗಳಲ್ಲಿ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಿದ ಬಳಿಕ ಹೆಬ್ರಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ನಾನು ಶಾಸಕನಾಗಿದ್ದಾಗ ಕೇಂದ್ರದಲ್ಲಿ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರು ಉಡುಪಿಗೆ 30 ನರ್ಮ್ ಬಸ್ಸು ನೀಡುವುದಾಗಿ ಹೇಳೀದ್ದರು ಅದೇ ರೀತಿ ಉಪ್ಪೂರಿನಲ್ಲಿ 40 ಕೋಟಿ ವೆಚ್ಚದ ಜಿ ಟಿ ಟಿ ಸಿ ಕಾಲೇಜನ್ನು ನಾನು ಮಂಜೂರು ಮಾಡಿಸಿಕೊಂಡು ಬಂದಿದ್ದು ಇವೆಲ್ಲಾ ನನ್ನ ಶಾಸಕತ್ವದ ಅವಧಿಯ ಸಾಧನೆಗಳನ್ನು ತನ್ನ ಸಾಧನೆ ಎಂದು ಬಿಂಬಿಸುವ ಶೋಭಾ ಕರಂದ್ಲಾಜೆ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಸ್ತೂರಿರಂಗನ್ ವರದಿ ಅನುಷ್ಠಾನವಾದರೆ ಜಿಲ್ಲೆಯ ಅರ್ಧ ಭಾಗ ಅಭಿವೃದ್ಧಿಯಿಂದ ವಂಚಿತವಾಗಲಿದೆ. ಕೊಳವೆಬಾವಿ ಕೊರೆಯುವಂತಿಲ್ಲ, ವಸತಿ, ರಸ್ತೆ, ಚರಂಡಿ ನಿರ್ಮಿಸುವಂತಿಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಶೋಭಾ ಕರಂದ್ಲಾಜೆ ಧ್ವನಿ ಎತ್ತಿಲ್ಲ. ವರದಿ ಜಾರಿ ಬಗ್ಗೆ ಕೇಂದ್ರ ಸರ್ಕಾರ ಏರ್ಪಡಿಸಿದ್ದ ಸಂಸದರ ಸಭೆಗೆ ಅವರು ಗೈರಾಗುವ ಮೂಲಕ ಬೇಜವಾಬ್ದಾರಿತನ ತೋರಿದ್ದಾರೆ. ಅದರ ಪರಿಣಾಮವಾಗಿ ಕಸ್ತೂರಿರಂಗನ್ ವರದಿ ಈಗ ಅನುಷ್ಠಾನವಾಗುವ ಹಂತ ತಲುಪಿದೆ. ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
‘ಕಸ್ತೂರಿ ರಂಗನ್ ವರದಿ ಜನರ ಅಭಿವೃದ್ಧಿಗೆ ಮಾರಕವಾಗಲಿದೆ ಎನ್ನು ವುದನ್ನು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಅದಕ್ಕೆ ಅವರು ಸಕಾ ರಾತ್ಮಕವಾಗಿ ಸ್ಪಂದಿಸಿದಿದ್ದರು. ವರದಿ ತಿರಸ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು’ಎಂದರು.
ಈ ಚುನಾವಣೆ ಜಿಲ್ಲೆಯ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ. ಸಂಸದನಾಗಿ ಆಯ್ಕೆಯಾದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಹೋರಾಟ ಮಾಡುತ್ತೇನೆ. ಸಾಮಾನ್ಯ ಜನರ ಕೈಗೆ ಸಿಗುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕ್ಷೇತ್ರಕ್ಕೆ ಹೆಚ್ಚು ಅನುದಾನ ತರುತ್ತೇನೆ. ಪ್ರಜೆಗಳ ತೆರಿಗೆಯಲ್ಲಿ ಸಂಬಳ ಪಡೆಯುವ ಜನಪ್ರತಿನಿಧಿಯಾಗಿ ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾದ ಪ್ರಜೆಗಳ ಸೇವೆಯನ್ನು ಸೇವಕನಂತೆ ಮಾಡುತ್ತೇನೆ’ ಎಂದು ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.
‘ನಾನು ಉಡುಪಿ ಕ್ಷೇತ್ರದ ಶಾಸಕನಾಗಿದ್ದಾಗ ₹ 2ಸಾವಿರ ಕೋಟಿ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದೆ. ಆದರೆ, ಹಿಂದುತ್ವದ ಹೆಸರಿನಲ್ಲಿ, ಮೋದಿಯ ಹೆಸರಿನಲ್ಲಿ ನನಗೆ ಸೋಲಾಯಿತು. ಪ್ರಸ್ತುತ ಚುನಾವಣೆಯಲ್ಲಿ ಮತದಾರರು ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕೋ ಅಥವಾ ಕೆಲಸ ಮಾಡುವ ಪ್ರಮೋದ್ ಮಧ್ವರಾಜ್ ಬೇಕೋ ಎಂಬುದನ್ನು ನಿರ್ಧರಿಸಬೇಕು’ ಎಂದರು.
ದೇಶದಲ್ಲಿ 25 ಕೋಟಿ ಜನ ಬಡವರಿದ್ದು ಅವರನ್ನು ಬಡತನ ರೇಖೆಯಿಂದ ಮೇಲೆತ್ತಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂತಹ ಕುಟುಂಬ ಪ್ರತಿ ಮಹಿಳೆಗೆ ಮಾಸಿಕ ₹ 6ಸಾವಿರದಂತೆ ವಾರ್ಷಿಕ ₹ 72 ಸಾವಿರ ಆದಾಯ ನೀಡುವ ಮಹಾಕ್ರಾಂತಿಕಾರಕ ಘೋಷಣೆ ಮಾಡಿದ್ದಾರೆ. ಸಂಸದರು ತಮ್ಮ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಮೋದಿ ನೋಡಿ ಮತಹಾಕಿ ಎನ್ನುತ್ತಿದ್ದಾರೆ. ಆದರೆ, ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಲು ಮೋದಿ ಬರುವುದಿಲ್ಲ. ಹಾಗಾಗಿ ಸ್ಥಳೀಯವಾಗಿ ಲಭ್ಯವಾಗುವ ಅಭ್ಯರ್ಥಿಗಳನ್ನೇ ಅವರು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದರು.
ಉಡುಪಿ ಜಿಲ್ಲೆಯಲ್ಲಿ 9 ಲಕ್ಷ ಟನ್ ಮರಳು ತೆಗೆಯಲು ಅವಕಾಶ ಮಾಡಿಕೊಟ್ಟದ್ದು ಪ್ರಮೋದ್ ಮಧ್ವರಾಜ್ , 28 ಬ್ಲಾಕ್ ಗಳಲ್ಲಿ 165 ಜನರಿಗೆ ಮರಳು ತೆಗೆಯಲು ನಮ್ಮ ಸರಕಾರದ ಅವಧಿಯಲ್ಲಿ ಅನುಮತಿ ನೀಡುವ ಕೆಲಸ ಮಾಡಿದರೆ ಈಗಿನ ಶಾಸಕರು ಕೇವಲ ಪ್ರತಿಭಟನೆಯ ನಾಟಕವಾಡಿದ್ದು ಬಿಟ್ಟರೆ ಸಮಸ್ಯೆ ಪರಿಹಾರ ಮಾಡುವುದನ್ನು ಮರೆತಿದ್ದಾರೆ. ನನ್ನ ಶಾಸಕತ್ವದ ಅವಧಿಯಲ್ಲಿ ಉಡುಪಿ ಜಿಲ್ಲೆಯ ಮರಳು ಬೇರೆ ಜಿಲ್ಲೆಗೆ ಸಾಗಾಟವಾಗದಂತೆ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡುವ ಕೆಲಸ ಮಾಡಲಾಗಿತ್ತು. ರಘುಪತಿ ಭಟ್ಟರನ್ನು ಆಯ್ಕೆ ಮಾಡಿದರೆ ಒಂದು ತಿಂಗಳ ಒಳಗೆ ಮರಳಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದವರು 11 ತಿಂಗಳು ಕಳೆದರೂ ಕೂಡ ಮರಳಿನ ಸಮಸ್ಯೆ ಬಗೆಹರಿಸಲು ಅವರು ಶಕ್ತರಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿದ್ದಲ್ಲಿ ಜಿಲ್ಲೆಯ ಜನರಿಗೆ ಸರಾಗವಾಗಿ ಮರಳು ಲಭಿಸುವಂತೆ ಮಾಡುತ್ತೇನೆ ಅಲ್ಲದೆ ಮುಖ್ಯಮಂತ್ರಿಗಳ ಬಳಿ ಚುನಾವಣೆಯ ಬಳಿಕ ಸ್ವತಃ ತೆರಳಿ ಮರಳು ಸಮಸ್ಯೆ ಬಗೆಹರಿಸುವುದಾಗಿ ಪ್ರಮೋದ್ ಹೇಳಿದರು.
‘ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಕೆಲಸ ಮಾಡದಿದ್ದರೂ, ಬಿಜೆಪಿ ನಾಯಕರನ್ನು ಕಡೆಗಣಿಸಿದರೂ ಪರವಾಗಿಲ್ಲ. ನಾನು ಪ್ರಧಾನಿ ಮೋದಿ ಹೆಸರಿನಲ್ಲಿ ಗೆಲ್ಲುತ್ತೇನೆಂಬ ಭ್ರಮೆಯಲ್ಲಿ ಇದ್ದಾರೆ. ಆದರೆ ಅವರು ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಹಾಗೂ ಮೋದಿ ಸ್ಪರ್ಧೆಯಲ್ಲ. ಪ್ರಮೋದ್ ಹಾಗೂ ಶೋಭಾ ಪೈಪೋಟಿ ಎಂಬುವುದನ್ನು ತಿಳಿದುಕೊಳ್ಳಬೇಕು. ಮೋದಿ ಅಲೆಯಲ್ಲಿ ಗೆಲ್ಲುವ ಭರವಸೆ ಹೊಂದಿದ್ದರೆ ಅದು ಅವರ ಭ್ರಮೆ ಅಷ್ಟೇ. ಈಗ ಬದಲಾವಣೆಯ ಗಾಳಿ ಬೀಸುತ್ತಿದೆ’ ಎಂದರು.
ಉಡುಪಿ -ಚಿಕ್ಕಮಗಳೂರು ಕ್ಷೇತ್ರಕ್ಕೆ ಕೆಲಸ ಮಾಡುವ ನಿಷ್ಟಾವಂತ ಸಂಸದನ ಅಗತ್ಯವಿದ್ದು ಅಂತಹ ಬದಲಾವಣೆ ಈ ಬಾರಿಯ ಚುನಾವಣೆಯಲ್ಲಿ ನಡೆಯಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮೋಸ ಆಗಿದ್ದು ನಾನು ಕೆಲಸ ಮಾಡಿಯೂ ಕೂಡ ಸೋತಿದ್ದು ಈ ಬಾರಿ ಎಲ್ಲಾ ಕಾರ್ಯಕರ್ತರು ಸೇರಿಕೊಂಡು ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ.
‘ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಆದರೂ ಅನಗತ್ಯ ಅಪಪ್ರಚಾರದಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು. ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ನ ಕಾರ್ಯಕರ್ತರು ಬಿಜೆಪಿ ಸೋಲಿಸಲು ಪಣ ತೊಟ್ಟಿದ್ದಾರೆ. ಹಾಗಾಗಿ ಭಿನ್ನಾಭಿಪ್ರಾಯ ಮರೆತು ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಂದಾಗುತ್ತಾರೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಸಂಕಲ್ಪ ಮಾಡಿದ್ದಾರೆ’ ಎಂದು ತಿಳಿಸಿದರು.
ಮಾಜಿ ಸಚಿವ ಗೋಪಾಲ ಭಂಡಾರಿ, ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ್ ಶೆಟ್ಟಿ, ಮಂಜುನಾಥ್ ಪೂಜಾರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.