ಶೋಭಾ ವಿರುದ್ದ ಅಪಪ್ರಚಾರ ನಡೆಸಲು ‘ಗೋ ಬ್ಯಾಕ್’ ಅಭಿಯಾನ ನಡೆಸುತ್ತಿದ್ದಾರೆ – ಪ್ರಮೋದ್ ಮಧ್ವರಾಜ್
ಚಿಕ್ಕಮಗಳೂರು: ನಾನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಅಭ್ಯರ್ಥಿಯ ಜನಪ್ರಿಯತೆ, ಕಾರ್ಯಕರ್ತರ ಅಭಿಪ್ರಾಯ, ಜನರೊಂದಿಗಿನ ಒಡನಾಟ ಮುಂತಾದ ಅಂಶಗಳಲ್ಲಿ ಮುಂಚೂಣಿಯಲ್ಲಿದ್ದರೆ ನನ್ನನ್ನೂ ಪರಿಗಣಿಸಿ ಅವಕಾಶ ಕೊಡಿ ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೊಮ್ಮೆ ಬಿಜೆಪಿ ಸಂಸದೀಯ ಮಂಡಳಿಯು ಬೇರೆಯವರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ ಹೊರತು ಬಿಜೆಪಿ ತೊರೆಯುವುದಿಲ್ಲ. ನನ್ನ ಉಸಿರು ಇರುವವರೆಗೂ ಬಿಜೆಪಿಯಲ್ಲಿ ಇರುವೆ ಎಂದರು.
ಲೋಕಸಭೆ ಟಿಕೆಟ್ಗೂ ಚಿಕ್ಕಮಗಳೂರಿನಲ್ಲಿ ಡಿ.ಸಿ.ಶ್ರೀಕಂಠಪ್ಪನವರ ಪ್ರತಿಮೆ ನಿರ್ಮಾಣಕ್ಕೂ ಸಂಬಂಧವಿಲ್ಲ. ಸ್ವಪ್ರೇರಣೆಯಿಂದ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ “ಗೋಬ್ಯಾಕ್ ಶೋಭಾ’ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಪ್ರಮೋದ್, ಇಂತಹ ಅಭಿಯಾನಗಳ ಮೇಲೆ ನನಗೆ ನಂಬಿಕೆಯಿಲ್ಲ. ಅವರ ವಿರುದ್ಧ ಅಪಪ್ರಚಾರ ನಡೆಸಲು ಇಂತಹ ಕೃತ್ಯ ಎಸಗಿದ್ದಾರೆ. ಇದು ಕಾರ್ಯಗತವಾಗುವುದಿಲ್ಲ ಎಂದರು.