‘ಶ್ರೀಕ್ಷೇತ್ರದ ಪ್ರಗತಿಪರತೆಗೆ ಪ್ರಧಾನಿ ಭೇಟಿಯಿಂದ ರಾಷ್ಟ್ರೀಯ ಮನ್ನಣೆ’: ವೀರೇಂದ್ರ ಹೆಗ್ಗಡೆ
ವರದಿ: ವಿ. ಬಸವ್ವ, ಉಜಿರೆ, ಚಿತ್ರ: ಅಭಿನಂದನ್ ಉಜಿರೆ
ಉಜಿರೆ: ಶ್ರೀಸಾಮಾನ್ಯರ ಹಿತರಕ್ಷಣೆಯ ಯೋಜನೆಗಳೊಂದಿಗೆ ಗುರುತಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಗತಿಪರ ಹೆಜ್ಜೆಗಳು ರಾಷ್ಟ್ರೀಯ ಮನ್ನಣೆ ಪಡೆದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚೆಗಿನ ಭೇಟಿ ಸಾಬೀತುಪಡಿಸಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಸೋಮವಾರ ಸಂಜೆ ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದವರೆಗೆ ಪಾದಯಾತ್ರೆಯ ಮೂಲಕ ಆಗಮಿಸಿ ಸಮಾವೇಶಗೊಂಡ ಭಕ್ತ ಸಮೂಹದ ಸಮ್ಮುಖ ಪ್ರಸಕ್ತ ವರ್ಷದ ಕಾರ್ತಿಕ ಮಾಸದ ಲಕ್ಷದೀಪೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು ಪ್ರಧಾನಿಯವರ ಇತ್ತೀಚೆಗಿನ ಧರ್ಮಸ್ಥಳ ಭೇಟಿಯನ್ನು ಅಭಿವೃದ್ಧಿಯ ಮಹತ್ವದ ಘಟ್ಟ ಎಂದು ಬಿಂಬಿಸಿದರು.
ಜನಸಾಮಾನ್ಯರ ಪರವಾದ ಅನುಕೂಲಕರ ಯೋಜನೆಗಳ ಅನುಷ್ಠಾನವೇ ಪ್ರಧಾನಿಯವರ ಭೇಟಿಗೆ ಕಾರಣವಾಯಿತು. ಪ್ರಧಾನಿಯವರು ಧರ್ಮಸ್ಥಳ ಭೇಟಿಯ ಸಂದರ್ಭದಲ್ಲಿ ಈ ಯೋಜನೆಗಳು ದೇಶಕ್ಕೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿಂದ ಆರಂಭವಾಗಿರುವ ಪ್ರಗತಿಪರ ಕಾರ್ಯಕ್ರಮಗಳನ್ನು ದೇಶದ ವಿವಿಧೆಡೆಯಲ್ಲೂ ಜಾರಿಗೆ ತರುವ ಸಂಕಲ್ಪ ತೊಟ್ಟರು. ಇದು ಶ್ರೀಕ್ಷೇತ್ರದ ಪ್ರಗತಿಪರ ಹೆಗ್ಗುರುತಿಗೆ ಸಿಕ್ಕ ರಾಷ್ಟ್ರೀಯ ಮನ್ನಣೆ ಎಂದು ನುಡಿದರು.
ಮೋದಿಯವರು ದೇಶದ ಅಭಿವೃದ್ಧಿಗಾಗಿ ಪ್ರಾರ್ಥನಾ ಸಂಕಲ್ಪಗೈದರು. ದೇಶಕ್ಕೆ ಒಳಿತಾಗಲಿ, ಶತೃತ್ವ ನಾಶವಾಗಲಿ ಎಂಬ ಸದಾಶಯದ ಆಲೋಚನೆಯೊಂದಿಗೆ ಪ್ರಾರ್ಥಿಸಿದರು. ರಾಷ್ಟ್ರದ ಉನ್ನತ ಹುದ್ದೆಯಲ್ಲಿದ್ದುಕೊಂಡು ಜನರು ಮತ್ತು ದೇಶದ ಒಳಿತನ್ನು ಬಯಸುವ ಪ್ರಾರ್ಥನಾ ಸಂಕಲ್ಪವು ಉದಾತ್ತವಾದುದಾಗಿದ್ದು, ಆ ಕಾರಣಕ್ಕಾಗಿಯೇ ಯಶಸ್ಸು ಸಿದ್ಧಿಸುತ್ತದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದಾರೆ. ಕ್ಷೇತ್ರದ ಜನಪರ ನಿಲುವುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿವಿಧ ವಲಯದ ಗಣ್ಯಮಾನ್ಯರ ಆಗಮನವು ಒಳಿತಿನ ಕೆಲಸಗಳನ್ನು ನಿರ್ವಹಿಸುವ ಹುಮ್ಮಸ್ಸು ಹೆಚ್ಚಿಸಿದೆ. ಶ್ರೀಕ್ಷೇತ್ರದ ಸಮಾಜಮುಖಿ ಹೆಗ್ಗುರುತಿನ ಪರಂಪರೆ ಮುಂದುವರೆಸಲು ಪ್ರೇರಣೆಯಾಗಿದೆ ಎಂದು ನುಡಿದರು. ಪಾದಯಾತ್ರೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಭಕ್ತರಿಗೆ ನುಡಿನಮನ ಸಲ್ಲಿಸಿದರು.
ಐದನೇ ವರ್ಷದ ಪಾದಯಾತ್ರೆ ಸಮಿತಿ ಮತ್ತು ಧರ್ಮಸ್ಥಳದ ಸ್ವಯಂಸೇವಕ ಸಂಘದ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಮಾತನಾಡಿದರು. ಶ್ರೀಮತಿ ಹೇಮಾವತಿ ಹೆಗ್ಗಡೆ ಉಪಸ್ಥಿತರಿದ್ದರು. ಖ್ಯಾತ ನ್ಯಾಯವಾದಿ ಪ್ರತಾಪಸಿಂಹ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.