ಶ್ರೀಶಾರದಾ ಪೀಠದಲ್ಲಿ ವೃದ್ದನನ್ನು ಎಳೆದಾಡಿದ ಪೇದೆ ಅಮಾನತು; ಕ್ಷಮೆ ಯಾಚಿಸಿದ ಅಣ್ಣಾಮಲೈ
ಚಿಕ್ಕಮಗಳೂರು: ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ವೃದ್ಧರೊಬ್ಬರನ್ನು ಪೊಲೀಸ್ ಪೇದೆಯೊಬ್ಬ ಅಮಾನವೀಯವಾಗಿ ಎಳೆದು ಹಾಕಿದ್ದು, ಆತನನ್ನು ಎಸ್ಪಿ ಕೆ.ಅಣ್ಣಾಮಲೈ ಸೋಮವಾರ ಅಮಾನತು ಮಾಡಿದ್ದಾರೆ.
ಶೃಂಗೇರಿ ಠಾಣೆಯ ಸುರೇಶ್ ಭಟ್ ಅಮಾನತಾದ ಮುಖ್ಯಪೇದೆ. ಈತ ಭಾನುವಾರ ಶ್ರೀಮಠದಲ್ಲಿ ಸಂಕ್ರಾಂತಿ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಸರತಿಯಲ್ಲಿದ್ದಾಗ ಮಧ್ಯದಲ್ಲಿ ಬಂದ ವೃದ್ಧನ ಕೊರಳ ಪಟ್ಟಿ ಹಿಡಿದು ಧರಧರೆನೆ ಎಳೆದುಕೊಂಡು ಹೋಗಿ ಹೊರ ಹಾಕಿದ್ದ. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯ ವನ್ನು ಮೊಬೈಲ್ ನಲ್ಲಿ ಚಿತ್ರಿಸಿಕೊಂಡು ಸಾಮಾಜಿಕ ಜಾಲತಾಣದ ಲ್ಲಿ ವೈರಲ್ ಮಾಡಿದ್ದರು.
ಶೃಂಗೇರಿ ಶಾರದಾಂಬ ದೇವಸ್ಥಾನದ ಮಹಾದ್ವಾರದಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು.
ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಅಣ್ಣಾಮಲೈ ಕ್ಷಮೆ ಯಾಚಿಸಿದ್ದು, ಪ್ರಕರಣದ ಬಗ್ಗೆ ಇಲಾಖಾ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು. ಪೊಲೀಸರು ಸಾರ್ವಜನಿಕ ರೊಂದಿಗೆ ಈ ರೀತಿ ವರ್ತಿಸುವುದು ಅಮಾನವೀಯ. ಪೊಲೀಸರು ಸಾರ್ವಜನಿಕ ರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದಿದ್ದಾರೆ