ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಕಾರ್ಮಿಕರ ನೆರವಿಗೆ ಧಾವಿಸಿದ ಕೆಸಿಎಫ್

Spread the love

ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಕಾರ್ಮಿಕರ ನೆರವಿಗೆ ಧಾವಿಸಿದ ಕೆಸಿಎಫ್

ರಿಯಾದ್: ಇಲ್ಲಿಗೆ ಸಮೀಪದ ಎಕ್ಸಿಟ್ 7 ರ ಅಲ್ ರಶೀದ್ಎಂಬ ಕಂಪನಿಯೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಭಾರತೀಯರನ್ನೊಳಗೊಂಡಂತೆ ಸುಮಾರು ಇಪ್ಪತ್ತೈದು ಮಂದಿಯಿದ್ದ ತಂಡವೊಂದು ಕಂಪನಿ ಅಧಿಕೃತರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಒಳಗಾಗಿ ಸಮಸ್ಯೆಗೆ ಸಿಲುಕಿಕೊಂಡಿದ್ದು ಕೆಸಿಎಫ್ ರಿಯಾದ್ ಘಟಕದ ಸಾಂತ್ವನ ವಿಭಾಗವು ಈ ಮಂದಿಗೆ ಆಸರೆಯಾಗಿ ನಿಂತಿದೆ.

ಸೌದಿ ಅರೇಬಿಯಾದಲ್ಲಿ ಸದ್ಯಕ್ಕೆ ತಲೆದೋರಿರುವ ಆರ್ಥಿಕ ಬಿಕ್ಕಟ್ಟಿಗೆ ಹೆಚ್ಚಾಗಿ ವಿದೇಶೀ ಕಾರ್ಮಿಕರೇ ಬಲಿಯಾಗುತ್ತಿದ್ದು ಈ ನಿಟ್ಟಿನಲ್ಲಿ ರಿಯಾದ್ ಲ್ಲಿ ನಡೆದ ಈ ಘಟನೆ ಕೊನೆಯದು ಎನ್ನವಂತಿಲ್ಲ.

ಇಬ್ಬರು ಮಂಗಳೂರು ಕಡೆಯವರೂ ಸೇರಿದಂತೆ ಭಾರತೀಯರಾದ ಇಪ್ಪತ್ತೈದು ಮಂದಿ ಕಾರ್ಮಿಕರು ಕಳೆದ ನಾಲ್ಕು ತಿಂಗಳಿನಿಂದ ಅತ್ತ ಕೆಲಸವೂ ಇಲ್ಲದೆ ಇತ್ತ ಸಂಬಳವೂ ದೊರೆಯದೆ ಭಾರೀ ಸಮಸ್ಯೆಗೊಳಗಾಗಿದ್ದು ನರಕ ಯಾತನೆ ಅನುಭವಿಸುವಂತಾಗಿತ್ತು. ಇಕಾಮ ( ವಾಸ್ತವ್ಯ ದಾಖಲೆ) ದ ಅವಧಿ ಕೊನೆಗೊಂಡಿದ್ದರಿಂದ ಹೊರಗೆ ಹೋಗಲೂ ಸಾಧ್ಯವಾಗದೆ ತಗಡು ಶೀಟ್ ನಿಂದ ನಿರ್ಮಿಸಿದ ತಾತ್ಕಾಲಿಕ ಶೆಡ್ ಗಳಲ್ಲಿ ಜಾನುವಾರುಗಳಂತೆ ಕೂಡಿ ಹಾಕಲ್ಪಟ್ಟಿದ್ದರು. ಕಳೆದ ನಾಲ್ಲು ತಿಂಗಳಿನಿಂದ ವೇತನ ದೊರೆಯದೆ ಇದ್ದುದರಿಂದ ದಿನ ನಿತ್ಯದ ಖರ್ಚು ನಿಭಾಯಿಸುವುದಯ ಕೂಡ ಕಷ್ಟವಾಗಿತ್ತು.

ಈ ಮಂದಿಯ ದುಸ್ಥಿತಿಯ ಕುರಿತಂತೆ ಸ್ಥಳೀಯ ಕೆಸಿಎಫ್ ಕಾರ್ಯಕರ್ತರಿಗೆ ಯಾರೋ ಸುದ್ದಿ ಮುಟ್ಟಿಸಿದ್ದು, ಕೆಸಿಎಫ್ ಕಾರ್ಯಕರ್ತರು ಭೇಟಿ ನೀಡಿದಾಗ ಅಲ್ಲಿ ಕಂಡ ದೃಷ್ಯವು ನಿಜಕ್ಕೂ ಮನ ಕುಲುಕುವಂತಿತ್ತು. ಬಿಲ್ಲು ಪಾವತಿಸದೆ ಇರುವುದರಿಂದ ಕಳೆದ ಒಂದು ವಾರದಿಂದ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಸುಡು ಬಿಸಿಲಿಗೆ ಉರಿದು ಕೆಂಡವಾಗುವ ತಗಡು ಶೀಟಿನ ಅಡಿಯಲ್ಲಿ ಈ ಮಂದಿಯ ಬದುಕು ನಿಜಕ್ಕೂ ನರಕವೇ ಆಗಿತ್ತು. ಕೈಯಲ್ಲಿ ಹಣ ಇಲ್ಲದ್ದರಿಂದ ಈ ಮಂದಿ ಕಳೆದ ಕೆಲವಾರು ದಿನಗಳಿಂದ ಹೊಟ್ಟೆಗೆ ಊಟವನ್ನೇ ಮಾಡಿರಲಿಲ್ಲ. ನೀರಿನ ಬಾಟಲಿಗಳು ಖಾಲಿಯಾಗಿದ್ದು ನಗರಸಭೆ ಪೂರೈಸುವ ಉಪ್ಪು ನೀರು ಕುಡಿದು ಬದುಕುತ್ತಿದ್ದರು. ಕರೆಂಟು, ಏಸಿ ಇಲ್ಲದ್ದರಿಂದ ರಸ್ತೆ ಬದಿಯಲ್ಲಿ ಮಂಚ ಹಾಸಿ ಮಲಗುತ್ತಿದ್ದರು. ಈ ಮಂದಿಯ ಕರುಣಾ ಜನಕ ಸ್ಥಿತಿಯನ್ನು ಮನಗಂಡ ಕೆಸಿಎಫ್ ಸಾಂತ್ವನ ವಿಭಾಗದ ತಂಡ ಆರಂಭದಲ್ಲಿ ಒಂದು ತಿಂಗಳ ಅವಧಿಗೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಹಾಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಮುಂದಾಗಿದೆ. ತದನಂತರ ಸಂಸ್ಥೆಯ ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ಆರಂಭಿಕ ಯಶಸ್ಸು ದೊರೆತಿದ್ದು ಕಂಪನಿಯು ವಿದ್ಯುತ್ ಸಂಪರ್ಕ ಮರು ಜೋಡಣೆ ಮಾಡಿದೆ.

ಸಂತ್ರಸ್ತರು ಈಗಾಗಲೇ ತಮ್ಮ ವಿರುದ್ಧ ಕಂಪನಿ ತೋರಿದ ನಿರ್ಲಕ್ಷ್ಯ ಹಾಗೂ ದೌರ್ಜನ್ಯದ ವಿರುದ್ಧ ಇಲ್ಲಿನ ಕಾರ್ಮಿಕ ಪ್ರಾಧಿಕಾರಕ್ಕೆ ದೂರು ನೀಡಿದ್ದು ಈ ಕುರಿತಂತೆ ಕಾನೂನು ಹೋರಾಟಕ್ಕೆ ಬೆಂಬಲ ನೀಡುವುದಾಗಿ ಕೆಸಿಎಫ್ ತಿಳಿಸಿದೆ. ಮುಂದಿನ ದಿನಗಳಲ್ಲಿ ಸಂತ್ರಸ್ತರಿಗೆ ಭಾರತೀಯ ರಾಯಭಾರಿ ಕಛೇರಿಯ ನೆರವು ಒದಗಿಸುವುದು ಸೇರಿದಂತೆ ಕೈಲಾದ ಎಲ್ಲ ರೀತಿಯ ಸಹಾಯ ನೀಡಲಾಗುವುದು ಎಂದು ಸಂಘಟನೆ ಭರವಸೆ ನೀಡಿದೆ.

ಕೆಸಿಎಫ್ ರಿಯಾದ್ ಝೋನಲ್ ನ ಸಾಂತ್ವನ ವಿಭಾಗದ ಜೊತೆಗೆ ಮುಖಂಡರಾದ ನಝೀರ್ ಕಾಶಿಪಟ್ಣ, ಹಂಝ ಮೈಂದಾಳ, ನವಾಝ್ ಸಖಾಫಿ, ಇಸ್ಮಾಯೀಲ್ ಜೋಗಿಬೆಟ್ಟು, ಖಲಂದರ್ ಪಾಣೆ ಮಂಗಳೂರು, ರಮೀಝ್ ಕುಲಾಯಿ , ಹಸನ್ ಸಾಗರ ಮಂತಾದವರು ಶ್ರಮಿಸಿದ್ದು ಈ ನಿಟ್ಟಿನಲ್ಲಿ ಕೆಸಿಎಫ್ ನ ಶ್ರಮಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.
ವರದಿ : ಹನೀಫ್ ಬೆಳ್ಳಾರೆ


Spread the love