ಸಂಖ್ಯೆ ವೃದ್ಧಿಸಲು ಮಕ್ಕಳೇ ಆಗಬೇಕೆಂದಿಲ್ಲ, ಮತಾಂತರ ಮಾಡಿ: ಸೂಲಿಬೆಲೆ ವಿವಾದಾತ್ಮಕ ಭಾಷಣ
ಬೆಳ್ತಂಗಡಿ: ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸಬೇಕಿದೆ. ಸಂಖ್ಯೆ ವೃದ್ಧಿಸಲು ಮಕ್ಕಳೇ ಆಗಬೇಕೆಂದಿಲ್ಲ. ಮತಾಂತರ ಮಾಡಿ. ಈ ಸಂಬಂಧ ಸರಕಾರ ಮಾಡಿರುವ ಕಾನೂನನ್ನೇ ಅಸ್ತ್ರವಾಗಿ ಬಳಸಿಕೊಳ್ಳಿ ಎಂದು ಚಕ್ರವರ್ತಿ ಸೂಲಿಬೆಲೆ ವಿವಾದಾತ್ಮಕ ಭಾಷಣ ಮಾಡಿದ್ದಾರೆ.
ಅವರು ಉಜಿರೆಯಲ್ಲಿ ಶನಿವಾರ ನಡೆದ ‘ರಾಮೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. “ಹಿಂದೂಗಳ ಸಂಖ್ಯೆ ಜಾಸ್ತಿ ಮಾಡಲು ಇತ್ತೀಚೆಗೆ ಬಜರಂಗದಳದವರು ಒಂದು ಸಂಕಲ್ಪ ತಗೊಂಡಿದ್ದಾರೆ. ‘ಜನಸಂಖ್ಯೆ ಜಾಸ್ತಿ ಮಾಡಲು ಏನು ಐಡಿಯಾ ನಿಮ್ದು?’ ಎಂದು ಬಜರಂಗದಳದ ಮುಖಂಡರನ್ನು ಕೇಳಿದಾಗ ಹೆಚ್ಚು ಮಕ್ಕಳನ್ನು ಮಾಡುವಂತೆ ಜನರನ್ನು ಮನವಿ ಮಾಡಿಕೊಳ್ತೇವೆ ಎಂದು ಹೇಳಿದ್ರು. ಆದ್ರೆ ನಮ್ಮ ಜನ ಎರಡ್ಮೂರು ಮಕ್ಕಳನ್ನು ಎಲ್ಲಿ ಮಾಡ್ತಾರೆ? ಮಕ್ಕಳನ್ನು ಪಂಕ್ಚರ್ ಹಾಕಲು ಕಳುಹಿಸಲು ಅವರಿಗೆ ಇಷ್ಟ ಇಲ್ಲ. ಅವರಿಗೆ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಿ ಮಾಡಬೇಕು ಅನ್ನೋದಷ್ಟೇ ಇದೆ. ಹಾಗಾಗಿ ಓದಿಸುವ ಸಾಮರ್ಥ್ಯ ಇಲ್ಲದ ಕಾರಣ ಒಂದು ಸಾಕು, ಎರಡು ಸಾಕು ಅಂತಾರೆ. ಹಾಗಾಗಿ ಸರಕಾರ ನಮಗಾಗಿ ಮಾಡಿರುವ ಕಾನೂನುಗಳನ್ನು ಬಳಸಿಕೊಳ್ಳಿ” ಎಂದು ಸೂಲಿಬೆಲೆ ಹೇಳಿದ್ದಾರೆ.
“ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು. ಆದರೆ ಹೊಸ ಸರಕಾರ ಆ ಕಾನೂನನ್ನು ತೆಗೆದು ಹಾಕಿತು. ಅಂದರೆ ಅದರ ಅರ್ಥ ನೀವೂ ಮತಾಂತರ ಮಾಡಬಹುದು ಅಂತ. ಸರಕಾರವೇ ಅಧಿಕೃತವಾಗಿ ಹೇಳಿದೆ ಮತಾಂತರ ಮಾಡಿ ಅಂತ, ಹಾಗಿದ್ದಾಗ ನಾವು ಮಾಡಬೇಕಲ್ವಾ? ಮಾಡಲು ನಿಮಗೆ ಕಷ್ಟ ಏನು?” ಎಂದು ಅವರು ಪ್ರಶ್ನಿಸಿದ್ದಾರೆ.
“ಸಮಾಜದ ವಿವಿಧ ಜಾತಿಯ ಪ್ರಮುಖರು ನಿಮ್ಮ ನಿಮ್ಮ ಸಮಾಜದಿಂದ ಒಂದು ಘೋಷಣೆ ಹೊರಡಿಸಿ. ‘ಯಾರಾದರೂ ಮತಾಂತರವಾಗಲು ಬಯಸಿದರೆ ನಮ್ಮ ಸಮಾಜ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ ಬನ್ನಿ’ ಎಂದು ಕರೆಯಿರಿ. ಇದಕ್ಕಾಗಿ ನಿಮ್ಮ ಸಮಾಜದ ಸ್ವಾಮೀಜಿಗಳಿಂದ ಘೋಷಣೆ ಕೊಡಿಸಿ. ಈ ಹಿಂದೆ ನೀವು ಯಾವುದೇ ಜಾತಿಯಲ್ಲಿದ್ದರೂ ಸಮಸ್ಯೆ ಇಲ್ಲ, ನಮ್ಮ ಜಾತಿಗೆ ಸ್ವೀಕರಿಸುತ್ತೇವೆ ಎಂದು ಹೇಳಿ” ಎಂದು ಸೂಲಿಬೆಲೆ ಒತ್ತಾಯಿಸಿದ್ದಾರೆ.