ಸಂಘಟನೆಯಲ್ಲಿ ಸಹಕಾರ ಮನೋಭಾವದಿಂದ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ – ರೋಲ್ಫಿ ಡಿಕೋಸ್ತಾ
ಉಡುಪಿ: ಸಂಘಟನೆಯ ಪದಾಧಿಕಾರಿಗಳು ಪರಸ್ಪರ ಸಹಕಾರ ಮನೋಭಾವದಿಂದ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಆ ಸಂಘಟನೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾದ ರೋಲ್ಫಿ ಡಿಕೋಸ್ತಾ ಹೇಳೀದರು.
ಅವರು ಭಾನುವಾರ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಶೋಕಮಾತಾ ಚರ್ಚಿನ ಸಭಾಂಗಣದಲ್ಲಿ ಆಯೋಜಿಸಿದ ಆಮ್ಚೊ ಸಂದೇಶ್ ಪತ್ರಿಕಾ ಪ್ರತಿನಿಧಿಗಳಿಗೆ, ಕೋಶಾಧಿಕಾರಿಗಳಿಗೆ ಮತ್ತು ಮಾಧ್ಯಮ ಹಾಗೂ ಪ್ರಚಾರ ಸಮಿತಿಯ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕೆಥೊಲಿಕ್ ಸಭಾ ಸಂಘಟನೆ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಲಿಷ್ಠವಾಗಿ ಬೆಳೆದಿದ್ದರೆ ಅದಕ್ಕೆ ಕಾರಣ ಸದಸ್ಯರ ಮತ್ತು ಪದಾಧಿಕಾರಿಗಳ ಒಗ್ಗಟ್ಟು. ಈ ಒಗ್ಗಟ್ಟು ಮುರಿಯುವ ಪ್ರಯತ್ನ ಕೂಡ ನಡೆದಾಗ ಅದಕ್ಕೆ ಸ್ಪಷ್ಟ ಉತ್ತರ ಸದಸ್ಯರು ನೀಡಲು ಬದ್ದರಾದಾಗ ಅಂತಹ ಸಂಘಟನೆ ಬಹುಕಾಲ ಬಾಳಲು ಸಾಧ್ಯವಿದೆ ಎಂದರು.
ಆಮ್ಚೊ ಸಂದೇಶ್ ಪತ್ರಿಕೆಯ ಪ್ರತಿನಿಧಿಗಳಿಗೆ ಪತ್ರಿಕೆಯ ಸಂಪಾದಕ ವಿಲ್ಫ್ರೇಡ್ ಲೋಬೊ ಯಾವ ರೀತಿಯಲ್ಲಿ ಪತ್ರಿಕೆಯನ್ನು ಬೆಂಬಲಿಸಬೇಕು. ಹೆಚ್ಚು ಹೆಚ್ಚು ಚಂದಾದಾರರಾಗುವಂತೆ ಜನರನ್ನು ಪ್ರೇರೆಪಿಸುವಂತೆ ಮಾಡಬೇಕು ಎಂದರು.
ಘಟಕ, ವಲಯಗಳ ಕೋಶಾಧಿಕಾರಿಗಳು ಸಂಘಟನೆಯನ್ನು ಲೆಕ್ಕಪತ್ರವನ್ನು ಯಾವ ರೀತಿಯಲ್ಲಿ ಪಾರದರ್ಶಕವಾಗಿರಿಸಬೇಕು ಎಂದು ಹಿರಿಯ ಲೆಕ್ಕಪರಿಶೋಧಕರಾದ ಪ್ರೀತೇಶ್ ಡೆಸಾ ಮಾಹಿತಿ ನೀಡಿದರೆ, ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡಿನ ಬಗ್ಗೆ ಸಂಚಾಲಕರಾದ ವಿವಿಯನ್ ಕರ್ನೆಲಿಯೋ ಮತ್ತು ವೆರೋನಿಕಾ ಕರ್ನೆಲಿಯೋ ಮಾಹಿತಿಯನ್ನು ನೀಡಿದರು.
ಮಾಧ್ಯಮಗಳ ಉಪಯೋಗ ಯಾವ ರೀತಿಯಲ್ಲಿ ಮಾಡಬೇಕು, ಸಾಮಾಜಿಕ ಜಾಲತಾಣಗಳ ಬಗ್ಗೆ ಮತ್ತು ಫೇಕ್ ನ್ಯೂಸ್ ಬಗ್ಗೆ ವಹಿಸಬೇಕಾದ ಎಚ್ಚರಿಕೆ, ಕಾರ್ಯಕ್ರಮದ ವರದಿಯನ್ನು ಯಾವ ರೀತಿಯಲ್ಲಿ ತಯಾರಿಸಬೇಕು ಎಂಬ ಕುರಿತು ಉಡುಪಿ ಧರ್ಮಪಾಂತ್ಯದ ಮಾಧ್ಯಮ ಸಂಯೋಜಕ ಪತ್ರಕರ್ತ ಮೈಕಲ್ ರೊಡ್ರಿಗಸ್ ಮಾಹಿತಿ ನೀಡಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷ ರೋಬರ್ಟ್ ಮಿನೇಜಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ ಉಪಸ್ಥಿತರಿದ್ದರು.
ಸಶಕ್ತ ಸಮುದಾಯ ಟ್ರಸ್ಟ್ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು. ಅನಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.