ಸಂಘಟನೆಯಿಂದ ಸಮಸ್ಯೆಗಳಿಗೆ ಪರಿಹಾರ: ಉದಯ ಕುಮಾರ್ ಶೆಟ್ಟಿ ಕಿದಿಯೂರು
ಕುಂದಾಪುರ: ಛಾಯಾಗ್ರಹಣ ಎನ್ನುವುದು ಅದ್ಬುತ ಕಲೆ. ಕಠಿಣ ಪರಶ್ರಮ ಶೃದ್ದೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾದ್ಯ. ಜೀವನದಲ್ಲಿ ನಿರಾಶಾವಾದಕ್ಕೆ ಆಸ್ಪದ ನೀಡಬಾರದು. ಸಂಘಟನೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂದು ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಕಿದಿಯೂರು ಉದಯಕುಮಾರ್ ಶೆಟ್ಟಿ ನುಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ, ಉಡುಪಿ ಇದರ ಕುಂದಾಪುರ, ಬೈಂದೂರು ವಲಯದ ವತಿಯಿಂದ ಬೈಂದೂರಿನ ತೆಗ್ಗರ್ಸೆ ರೈತಮಿತ್ರ ಇಲ್ಲಿ ಆಯೋಜಿಸಿದ ಛಾಯಾ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಗ್ಗೆ ಹಿಂದೆ ತಿಳಿದಿದ್ದೆ. ಆದರೆ ಇಂದು ಈ ಕಾರ್ಯಕ್ರಮದ ಮೂಲಕ ಅದರ ವಿರಾಟ ರೂಪ ನೋಡುವ ಸೌಭಾಗ್ಯ ಒದಗಿದೆ. ಸಂಸ್ಥೆ ಇಷ್ಟೊಂದು ದೊಟ್ಟಮಟ್ಟಕ್ಕೆ ಬೆಳೆಯಬೇಕಾದರೆ ಇದರ ಹಿಂದೆ ಸಾಕಷ್ಟು ಜನರ ಪರಿಶ್ರಮವಿದೆ ಎಂದರು.
ಎಸ್.ಕೆ.ಪಿ.ಎ, ದ.ಕ-ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಬೈಂದೂರು ವಲಯದ ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಉಪ್ಪುಂದ, ಕಾರ್ಯದರ್ಶಿಯಾಗಿ ದಿನೇಶ್ ರಾಯಪ್ಪನ ಮಠ, ಕೋಶಾಧಿಕಾರಿಯಾಗಿ ಹರೀಶ್ ಪೂಜಾರಿ ಹಂಗಳೂರು ಇವರು ಅಧಿಕಾರ ಸ್ವೀಕರಿಸಿದರು.
ಸಾಧಕರಿಗೆ ಸನ್ಮಾನ:
ಕೊಳಲು ವಾದನದ ಮೂಲಕ ಸಾಧನೆ ಮಾಡಿದ ಮಾ| ಶಾಮ್ ಜಿ.ಎಸ್.ಪೂಜಾರಿ ಮತ್ತು ಕಂಬಳ ಕ್ಷೇತ್ರದ ಯುವಪ್ರತಿಭೆ ಕುಮಾರಿ ಚೈತ್ರಾ ಪರಮೇಶ್ವರ ಭಟ್ ಇವರನ್ನು ಸನ್ಮಾನಿಸಲಾಯಿತು.
ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ:
ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ನಡೆದ ಕಂಬಳದಲ್ಲಿ ಕುಂದಾಪುರ-ಬೈಂದೂರು ವಲಯದಿಂದ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಬಹುಮಾನ ವಿತರಿಸಿದರು.
ರೋಟರಿ ಕ್ಲಬ್ ಬೈಂದೂರಿನ ಪ್ರಸಾದ ಪ್ರಭು, ಲಯನ್ಸ್ ಕ್ಲಬ್ ಗಿರೀಶ್ ಶ್ಯಾನುಭಾಗ್, ಎಸ್.ಕೆ.ಪಿ.ಎ.ದ.ಕ-ಉಡುಪಿ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ವಾಸುದೇವ ರಾವ್, ಗಿರೀಶ್ ಜಿ.ಕೆ, ನಾಗರಾಜ್ ರಾಯಪ್ಪನ ಮಠ, ಗಣೇಶ್ ಬೆನಕ, ರಂಜಿತ್, ದೊಟ್ಟಯ್ಯ ಪೂಜಾರಿ, ಶ್ರೀಧರ ಹೆಗ್ಡೆ, ಸುರೇಶ್ ಜಮದಗ್ನಿ, ದಿನೇಶ್ ಗೋಡೆ ಮೊದಲಾದವರು ಉಪಸ್ಥಿತರಿದ್ದರು.
ಗೀತಾ ಬೈಂದೂರು ಪ್ರಾರ್ಥಿಸಿದರು, ದಿವಾಕರ ಶೆಟ್ಟಿ ಉಪ್ಪುಂದ ಸ್ವಾಗತಿಸಿದರು, ಹರೀಶ್ ಪೂಜಾರಿ ಹಂಗಳೂರು ವಂದಿಸಿದರು, ರಾಘು ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು.