ಸಂಘನಿಕೇತನದಲ್ಲಿ ಪೂಜ್ಯ ಸಾಧುಸಂತರ ‘ಧರ್ಮಸಂಸತ್’
ಮಂಗಳೂರು: ಧರ್ಮಜಾಗರಣ ಸಮನ್ವಯ ವಿಭಾಗ ಮಂಗಳೂರು ವತಿಯಿಂದ ಅವಿಭಜಿತ ಜಿಲ್ಲೆಗಳ ಪೂಜ್ಯ ಸಾಧುಸಂತರ ‘ಧರ್ಮಸಂಸತ್’ ಮಂಗಳವಾರ ನಗರದ ಸಂಘನಿಕೇತನದಲ್ಲಿ ಜರಗಿತು.
ಮತಾಂತರದ ಗಂಡಾಂತರ , ಪರಾವರ್ತನ (ಮರಳಿ ಮಾತೃಧರ್ಮಕ್ಕೆ ಕರೆತರುವುದು) ಮತ್ತು ಸಾಮರಸ್ಯ- ಸಂಸ್ಕಾರಗಳ ಕುರಿತು ಚರ್ಚೆ ನಡೆದು, ಬಳಿಕ ಹಿಂದು ಸಮಾಜದ ಹಿತರಕ್ಷಣೆಗಾಗಿ ಮಠ-ಮಂದಿರಗಳು ಮಾಡಬೇಕಾದ ಕಾರ್ಯಗಳ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ , ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಮಠದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಕೇಮಾರು ಸಾಂದೀಪನಿ ಮಠದ ಶ್ರೀಈಶವಿಠಲದಾಸ ಸ್ವಾಮೀಜಿ, ಶ್ರೀ ಕ್ಷೇತ್ರ ಬಲ್ಯೊಟ್ಟು ಶ್ರೀವಿಖ್ಯಾತಾನಂದ ಸ್ವಾಮೀಜಿ, ಮರಕಡ ಶ್ರೀ ಆದಿ ಪರಾಶಕ್ತಿ ಕೇಂದ್ರದ ಶ್ರೀನರೇಂದ್ರನಾಥ ಸ್ವಾಮೀಜಿ, ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದಜೀ, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ಬಾಳೆಕೋಡಿ ಕ್ಷೇತ್ರದ ಶಶಿಕಾಂತಮಣಿ ಸ್ವಾಮೀಜಿ, ಆನೆಗೊಂದಿ ಮಠದ ಶ್ರೀ ಕಾಳಹಸ್ತೇಂದ್ರನಾಥ ಸ್ವಾಮೀಜಿ ಭಾಗವಹಿಸಿದ್ದರು.
ಆರೆಸ್ಸೆಸ್‌ನ ಸಹಪ್ರಾಂತ ಸಂಘಚಾಲಕ್ ಡಾ. ವಾಮನ್ ಶೆಣೈ, ಆರೆಸ್ಸೆಸ್ ಕ್ಷೇತ್ರೀಯ ಸೇವಾಪ್ರಮುಖ್ ಗೋಪಾಲ್‌ಚೆಟ್ಟಿಯಾರ್, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ, ವಿಹಿಂಪ ಕರ್ನಾಟಕ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಉಡುಪಿ ಜಿಲ್ಲಾ ಸಂಘಚಾಲಕ್ ಶಂಭುಶೆಟ್ಟಿ, ಮಂಗಳೂರು ವಿಭಾಗ ಕಾರ್ಯವಾಹ ಹಾಗೂ ಧರ್ಮಜಾಗರಣ ಪ್ರಾಂತ ಸಂಯೋಜಕ ನ. ಸೀತರಾಮ, ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಎಸ್. ಆರ್.ರಂಗಮೂರ್ತಿ, ಧರ್ಮಜಾಗರಣದ ಪ್ರಾಂತ ಸಂಸ್ಕೃತಿ ಪ್ರಮುಖ್ ಶ್ರೀಧರ್ ಹಾಗೂ ಬಜರಂಗದಳ ಪ್ರಾಂತ ಸಹಸಂಚಾಲಕ ಶರಣ್ ಪಂಪ್‌ವೆಲ್ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಜಾಗರಣ ಪ್ರಾಂತ ಪ್ರಮುಖ್ ಮುನಿಯಪ್ಪ , ಆದಿಯಿಂದಲೂ ಧರ್ಮಮಾರ್ಗದಲ್ಲಿ ನಡೆದು ಸಮಾಜವನ್ನು ರಕ್ಷಿಸುವ ಸಂತಪರಂಪರೆ ಹಿಂದು ಸಮಾಜದ ಶಕ್ತಿಯಾಗಿದೆ. ದೇಶವನ್ನು ಧರ್ಮಮಾರ್ಗದಲ್ಲಿ ಮುನ್ನಡೆಸಬಲ್ಲ ಸಂತಶಕ್ತಿ ಹಿಂದು ಸಮಾಜ ರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿದೆ. ಭೋಗಮೆಟ್ಟಿ ತ್ಯಾಗ ಮೆರೆದ ಸಂತರೇ ಹಿಂದುಧರ್ಮಕ್ಕೆ ಶಕ್ತಿ ತುಂಬಿದವರು. ಅವರಿಂದಲೇ ಯುವಪೀಳಿಗೆಗೆ ಧರ್ಮ, ಸಂಸ್ಕೃತಿ, ಪರಂಪರೆಯ ಮಾರ್ಗದರ್ಶನವಾಗಬೇಕು. ಇಂದು ಮತಾಂತರ, ಲವ್‌ಜೆಹಾದ್, ಜನಸಂಖ್ಯಾ ವ್ಯತ್ಯಯದಂತಹ ಸವಾಲುಗಳು ಹಿಂದು ಸಮಾಜವನ್ನು ಅಪಾಯಕ್ಕೊಡ್ಡಿರುವ ಹಿನ್ನೆಲೆಯಲ್ಲಿ ಧರ್ಮಸಂಸತ್‌ನ್ನು ಆಯೋಜಿಸಲಾಗುತ್ತಿದೆ ಎಂದು ನುಡಿದರು.
20 ನೇ ಶತಮಾನ ಆಧ್ಯಾತ್ಮದ ಶತಮಾನವಾಗಿರಲಿದೆ. ದೇಶದ ಬಾಹ್ಯ ಹಾಗೂ ಆಂತರಿಕ ಸಮಸ್ಯೆಗಳಿಗೆ ಸಂತ ಶಕ್ತಿಯೇ ಉತ್ತರ ನೀಡಲಿದೆ. ಆಸೆ ಆಮಿಷದ ಮುಖಾಂತರ ನಡೆಯುವ ಮತಾಂತರ, ಈಗಾಗಲೇ ಮತಾಂತರಗೊಂಡ ಹಿಂದುಬಂಧುಗಳನ್ನು ‘ ಮರಳಿ ಮಾತೃಧರ್ಮಕ್ಕೆ’ ಮೂಲಕ ಪರಾವರ್ತನ ಹಾಗೂ ನಮ್ಮೊಳಗಿನ ಬೇಕಿರುವ ಸಾಮರಸ್ಯ ಹಾಗೂ ಅದಕ್ಕಿರುವ ಸಂಸ್ಕಾರಗಳಿಗೆ ಸಾಧುಸಂತರೇ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಹೆಣ್ಣುಮಕ್ಕಳ ವೇದಘೋಷದೊಂದಿಗೆ ದೀಪಬೆಳಗಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಾರೋಪದಲ್ಲಿ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ , ಹಿಂದು ಸಮಾಜದಲ್ಲಿ ಹಿಂದುಳಿದವರು-ಮುಂದುಳಿದವರೆಂದಿಲ್ಲ. ಇಂದು ಅಸ್ಪೃಶ್ಯರೆಂದು ಹೇಳಲ್ಪಟ್ಟವರಿಂದಲೇ ಹಿಂದು ಸಮಾಜ ಉಳಿದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಈಗ ನಾವು ಮೇಲರಿಮೆ-ಕೀಳರಿಮೆ ಹೊಂದದೆ ನಾವೆಲ್ಲ ಹಿಂದುಗಳು ಎಂಬ ಏಕೋ ಭಾವದಿಂದ ಧರ್ಮನಿಷ್ಠರಾಗಿ ಸವಾಲುಗಳಿಗೆ ಉತ್ತರಿಸಬೇಕಾಗಿದೆ . ಈ ಕಾರ್ಯಕ್ಕೆ ಸಂತರ ಮಾರ್ಗದರ್ಶನ ಬೇಕಾಗಿದೆ . ಸಂತರು ಈ ಕಾರ್ಯಕ್ಕೆ ಧುಮುಕಿದರೆ ಹಿಂದು ಸಮಾಜ ಎಲ್ಲ ದುರಿತಗಳಿಂದ ಮುಕ್ತಿಹೊಂದಲು ಸಾಧ್ಯ. ಸಂತರು ಈ ಕಾರ್ಯಕ್ಕೆ ವೇಗ ನೀಡಲು ಇಲ್ಲಿ ಸಂಕಲ್ಪ ತಳೆದಿರುವುದು ಹಿಂದು ಸಮಾಜದಲ್ಲಿ ಹೊಸ ಆತ್ಮವಿಶ್ವಾಸ ತುಂಬುವಂತೆ ಮಾಡಲಿದೆ ಎಂದರು.
ಧರ್ಮಜಾಗರಣದ ಪ್ರಾಂತ ನಿಧಿ ಪ್ರಮುಖ್ ಹರೀಶ್ ಪೂಂಜ ಸ್ವಾಗತಿಸಿದರು.ವಿಹಿಂಪದ ಜಿತೇಂದ್ರ ಕೊಟ್ಟಾರಿ ವಂದಿಸಿದರು.