ಸಂಚಾರಿ ನಿಯಮ ಪಾಲಿಸಿ ಅಮೂಲ್ಯ ಜೀವ ಉಳಿಸಿ – ಕಾರ್ಕಳ ಠಾಣಾಧಿಕಾರಿ ನಂಜಾ ನಾಯ್ಕ್
ಕಾರ್ಕಳ: ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ತಾಳ್ಮೆಯಿಂದ ವಾಹನ ಚಾಲನೆ ಮಾಡುವುದರಿಂದ ನಮ್ಮ ಅಮೂಲ್ಯ ಜೀವವನ್ನು ಉಳಿಸಬೇಕು ಎಂದು ಕಾರ್ಕಳ ನಗರ ಪೊಲೀಸ್ ಠಾಣೆ ಉಪನಿರೀಕ್ಷಕ ನಂಜಾ ನಾಯ್ಕ್ ಹೇಳಿದರು.
ವಾಹನಗಳ ವೇಗದ ಮಿತಿ ಕಡಿಮೆಗೊಳಿಸಿ ಪ್ರತಿಯೊಬ್ಬರು ತಾಳ್ಮೆಯಿಂದ ವಾಹನ ಚಾಲನೆ ಮಾಡಿದಾಗ ಎಷ್ಟೋ ಅಫಘಾತಗಳನ್ನು ತಡೆಯಲು ಸಾಧ್ಯವಿದೆ. ಯುವಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವುದರೊಂದಿಗೆ ರಸ್ತೆ ಸಂಚಾರಿ ಕಾನೂನುಗಳನ್ನು ತಿಳಿದುಕೊಂಡು ವಾಹನ ಚಾಲನೆ ಮಾಡುವುದು ಸೂಕ್ತ. ಕಾನೂನು ಉಲ್ಲಂಘನೆ ಆಗದಂತೆ ಪ್ರತಿಯೊಬ್ಬ ಚಾಲಕನೂ ಕೂಡ ಎಚ್ಚರ ವಹಿಸಬೇಕು ಎಂದರು.
ಕೆಲ ದ್ವಿಚಕ್ರ ಚಾಲಕರು ಹೆಲ್ಮೆಟ್ ಧರಿಸದೆ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸವಾರಿ ಮಾಡುವ ಸಂದರ್ಭದಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತ ವೇಗವಾಗಿ ಸವಾರಿ ಮಾಡುವವರನ್ನು ಕಂಡಾಗ ಜನರೇ ತಿರ್ಮಾನಿಸಿ ಇತನಿಗೆ ಅಪಘಾತವಾಗುವ ಸಂಭವವಿದೆ ಎಂಬ ಅರಿವು ಸವಾರನಿಗೂ ಕೂಡಾ ಅವಶ್ಯವಾಗಿದೆ. ಸವಾರರು ರಸ್ತೆ ಸಂಚಾರ ನಿಯಮ ಪಾಲಿಸುವದರ ಜೊತೆಗೆ ಹೆಲ್ಮೆಟ್ ಬಳಸಿ ಸುರಕ್ಷಿತ ಸವಾರಿ ಮಾಡಬೇಕೆಂದು ತಿಳಿಸಿದರು.
ರಸ್ತೆ ಸುರಕ್ಷತಾ ಕ್ರಮ ಹಾಗೂ ಸಂಚಾರ ನಿಯಮಗಳು ಕೇವಲ ಪೊಲೀಸರಿಗೆ ಸಂಬಂಧಿಸಿದ್ದಲ್ಲ. ಅದು ಸಾರ್ವಜನಿಕರ ಹೊಣೆಗಾರಿಕೆ. ಪ್ರತಿಯೊಬ್ಬರಲ್ಲೂ ರಸ್ತೆ ಸುರಕ್ಷತೆ ಬಗ್ಗೆ ಕನಿಷ್ಠ ಮಟ್ಟದ ತಿಳಿವಳಿಕೆ ಇದ್ದರೆ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.
ಕಾರ್ಕಳ ಸಂತ ಲಾರೆನ್ಸ್ ಚರ್ಚಿನ ಧರ್ಮಗುರುಗಳು, ಪಾಲನಾ ಸಮಿತಿಯ ಸದಸ್ಯರು ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.