ಸಂತ ಅಲೋಶಿಯಸ್ ರಸ್ತೆ; ಹೆಸರು ಉಳಿಸಿಕೊಳ್ಳಲು ಹಳೆ ವಿದ್ಯಾರ್ಥಿಗಳ ಕ್ರಿಯಾ ಸಮಿತಿ ರಚನೆ
ಮಂಗಳೂರು: ನಗರದ ಕೆಥೊಲಿಕ್ ಕ್ಲಬ್ ಬಳಿಯಿಂದ ಅಂಬೇಡ್ಕರ್ ವೃತ್ತದವರೆಗಿನ ರಸ್ತೆಯನ್ನು ಸಂತ ಅಲೋಶಯಸ್ ರಸ್ತೆ ಎಂದು ಉಳಿಸಿಕೊಳ್ಳುವ ಸಲುವಾರಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘವು ಕ್ರಿಯಾ ಸಮಿತಿಯೊಂದನ್ನು ರಚಿಸಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್ಚಿಬಾಲ್ಡ್ ಮಿನೇಜಸ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನ ಕ್ಯಥೋಲಿಕ್ ಕ್ಲಬ್ ನಿಂದ ಅಂಬೇಡ್ಕರ್ ವೃತ್ತದವರೆಗೆ “ಸಂತ ಅಲೋಶಿಯಸ್ ಕಾಲೇಜು ರಸ್ತೆ”ಯನ್ನು ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ಪುನರ್ ನಾಮಕರಣ ಮಾಡುವ ಪ್ರಕ್ರಿಯೆಗೆ ಸಂತ ಅಲೋಶಿಯಸ್ ಕಾಲೇಜು ತೀವ್ರ ವಿರೋಧ ವ್ಯಕ್ತ ಪಡಿಸಿ ಪ್ರತಿಭಟನೆ ಮಾಡಿದಾಗ ರಾಜ್ಯ ಸರಕಾರ ಈ ಹಿಂದೆ ನೀಡಿದ್ದ ಆದೇಶಕ್ಕೆ 1-07-2017 ರಂದು ತಾತ್ಕಾಲಿಕ ತಡೆಆಜ್ಞೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿಜಯಾ ಬ್ಯಾಂಕ್ ನೌಕರರ ಸಂಘ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ.
ಜಿಲ್ಲಾಡಳಿತ ಹಾಗೂ ಸಚಿವರು ಮತ್ತು ಶಾಸಕರುಗಳು ಮನವಿ ಮಾಡಿರುವುದಕ್ಕೆ ಗೌರವತೋರಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಪರಿಹರಿಸುವ ದೃಷ್ಟಿಯಿಂದ ಯಾವುದೇ ಗೊಂದಲಕ್ಕೆ ಆಸ್ಪದಕೊಡದೆ ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗಿದೆ.
ಆದಾಗ್ಯೂ ಕೆಲವು ಸಂಘಟನೆಗಳು ಮುಖ್ಯವಾಗಿ ಬಂಟರಯಾನೆ ನಾಡವರ ಸಂಘ ಅವ್ಯಾಹತವಾಗಿ ಸಂತ ಅಲೋಶಿಯಸ್ ಕಾಲೇಜಿನ ವಿರುದ್ಧ, ಜವಾಬ್ದಾರಿಯುತ ಶಾಸಕರುಗಳ ವಿರುದ್ಧ ಜಾತಿ ರಾಜಕಾರಣ ಮುಂತಾದ ಅಸಂಬದ್ಧ ಆರೋಪಗಳನ್ನು ಮಾಡುತ್ತಾ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಾ ಮಾತುಕತೆಗೆ ಸಹಕರಿಸುವ ಬದಲಾಗಿ ಸಂಘರ್ಷದ ವಾತಾವರಣ ನಿರ್ಮಾಣ ಮಾಡುತ್ತಿವೆ. ಪ್ರತಿಭಟನೆಯ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಅನಿವಾರ್ಯವಾಗಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವ ದೃಷ್ಟಿಯಿಂದ ಈ ಗೋಷ್ಟಿ ನಡೆಸಲಾಗಿದೆ.
ಅಲೋಶಿಯಸ್ ಸಂಸ್ಥೆ ಎಲ್ಲಾ ಸಮುದಾಯಗಳಿಗೆ ಸೇರಿದ ಸಂಸ್ಥೆ, ಅಲ್ಲಿರುವುದು ಸೌಹಾರ್ದತೆಯ ಅಲೋಶಿಯಸ್ ಸಮುದಾಯ ಮಾತ್ರ. ಯಾವತೂ ್ತಜಾತಿ, ಧರ್ಮದ ಹೆಸರಿನಲ್ಲಿ ಬೇಧ ಭಾವತೋರಿಲ್ಲ. ರಾಜಕಾರಣ ಮಾಡಿಲ್ಲ. ಇಲ್ಲ ಸಲ್ಲದ ಆಪಾದನೆಗಳನ್ನು ಮಾಡುವುದು ನೋವಿನ ಸಂಗತಿ. ವಿಪರ್ಯಾಸವೆಂದರೆ ಇಂತಹ ಆಪಾದನೆಗಳನ್ನು ಮಾಡುತ್ತಿರುವ ಸಂಘಟನೆಗಳ ಹಿನ್ನೆಲೆ ಹಾಗೂ ಕಳೆದ 15-20 ದಿವಸಗಳಿಂದ ನೀಡುತ್ತಿರುವ ಹೇಳಿಕೆಗಳು ಹಾಗೂ ಕೆಲವು ರಾಜಕೀಯ ಪಕ್ಷಗಳು ತಮಗೆ ಸಂಬಂಧವಿಲ್ಲದ ವಿಷಯದಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುತ್ತಿರುವುದನ್ನು ಗಮನಿಸಿದರೆ ಯಾರು ಜಾತಿ ರಾಜಕಾರಣ ಹಾಗೂ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದಕ್ಕೆ ಪ್ರತ್ಯೇಕ ಪುರಾವೆ ಬೇಕಿಲ್ಲ.
ಶಾಸಕರುಗಳು ಸಮಾಜದಲ್ಲಿ ಗೊಂದಲ ಉಂಟಾದಾಗ ಪರಿಹರಿಸುವ ದೃಷ್ಟಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರು ಹಾಗೂ ನಗರದ ಗೌರವಾನ್ವಿತ ಮೇಯರ್‍ರವರು ಸಂಧಾನಕ್ಕೋಸ್ಕರ ಮಾಡಿದ್ದ ಪ್ರಾಮಾಣಿಕ ಮನವಿಯನ್ನು ತಿರಸ್ಕರಿಸಿದ್ದ ಸಂಘಟನೆಗಳು ಈಗ ಆರೋಪಗಳನ್ನು ಮಾಡುತ್ತಿವೆ. ಕಾಲೇಜಿನವರು ಪ್ರತಿಭಟನೆ ಮಾಡಿದ್ದು ಸರಿಯಲ್ಲ ಎಂದು ಹಪಹಪಿಸುತ್ತಿದ್ದಾರೆ.
ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ಈ ಹಿಂದೆ ನಾಮಕರಣವಾಗಿತ್ತು ಎನ್ನುವ ಬಗ್ಗೆ 11 ಅಂಶಗಳ ವಾಸ್ತವಾಂಶಗಳ ಪಟ್ಟಿಯನ್ನು ತಮ್ಮ ಎದುರು ಮಂಡಿಸಲಾಗಿದೆ. ಕಳೆದ 137 ವರ್ಷಗಳಿಂದ ಸಂತ ಅಲೋಶಿಯಸ್ ಕಾಲೇಜು ತಂದಿರುವ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಪರಿವರ್ತನೆ, ವಿಶ್ವದ್ಯಾಂತ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪ್ರವಾಸಿ ಕೇಂದ್ರವಾಗಿ (ಹೆರಿಟೇಜ್ ವಿಭಾಗ) ಹಾಗೂ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ನಗರ ಹೆಮ್ಮೆ ಪಡಬಹುದಾದ ಸಂಸ್ಥೆಗೆ ಗೌರವ ತೋರಿಸುವ ಸೌಜನ್ಯದ ದೃಷ್ಟಿಯಿಂದ “ಸಂತ ಅಲೋಶಿಯಸ್ ರಸ್ತೆ”ನಾಮಕರಣವನ್ನು ಮುಂದುವರೆಸಬೇಕೆಂದು ನಮ್ಮ ಆಗ್ರಹ.
ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಗೆ ಸಹಕಾರ ನೀಡುವ ದೃಷ್ಟಿಯಿಂದ ಹಳೆ ವಿದ್ಯಾರ್ಥಿಗಳ ಸಂಘಟನೆ ನೇತೃತ್ವದಲ್ಲಿ ಈಗ ಕಲಿಯುತ್ತಿರುವ ವಿದ್ಯಾರ್ಥಿಗಳು, ಅಲೋಶಿಯಸ್ ಸಂಸ್ಥೆಯ ಅಭಿಮಾನಿಗಳು, ಹಿತೈಷಿಗಳು, ನಗರದಗಣ್ಯ ನಾಗರೀಕರನ್ನು ಒಟ್ಟುಗೂಡಿಸಿ ವಿಶಾಲ ವ್ಯಾಪ್ತಿಯ ಕ್ರಿಯಾ ಸಮಿತಿಯನ್ನು ರಚಿಸಲಾಗಿದೆ. ಅಲೋಶಿಯಸ್ ಕಾಲೇಜು ರಸ್ತೆ ಎಂದು ಹೆಸರಿಸಿರುವುದನ್ನು ಬದಲಾಯಿಸಲು ಯಾವುದೇ ಕಾರಣಕ್ಕೆ ಒಪ್ಪುವುದಿಲ್ಲ. ಆದರೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಮಾನಾಥರೈ, ಶಾಸಕರುಗಳಾದ ಶ್ರೀ ಜೆ.ಆರ್.ಲೋಬೊ, ಶ್ರೀ ಐವನ್ ಡಿಸೋಜಾ ಹಾಗೂ ಮಹಾನಗರಪಾಲಿಕೆ ಮೇಯರ್ ಮತ್ತು ಸದಸ್ಯರು ಎರಡೂ ಸಂಘಟನೆಗಳಿಗೆ ಸಮಾಧಾನ ತರುವಂತಹ ಪರಿಹಾರ ಸೂಚಿಸುತ್ತಾರೆ ಎನ್ನುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲಾಗುವುದು.
ಯಾವುದೇ ಪ್ರತಿಭಟನೆಯ ಬೆದರಿಕೆಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಪ್ರಜಾಸತ್ತಾತ್ಮಕವಾಗಿ ನಮ್ಮ ಹಕ್ಕುಗಳಿಗೆ ಹೋರಾಟ ನಡೆಸುವ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಯಾವುದೆ ಸಂಘಟನೆಯ ಹೆಸರಿನಲ್ಲಿ ಪ್ರತಿಭಟನೆ ನಡೆಸಿದರೆ, ಪ್ರತಿ ಹೋರಾಟವನ್ನು ಎಲ್ಲಾ ಹಂತದಲ್ಲಿಯೂ ನಡೆಸಲಾಗುವುದು. ಸಮಸ್ತ ನಾಗರೀಕರು ಅಲೋಶಿಯಸ್ ಕಾಲೇಜು ರಸ್ತೆ ಹೆಸರನ್ನು ಮುಂದುವರೆಸಲು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಮುದಾಯಗಳ ಬೆಂಬಲ ನಮಗಿದೆ ಎನ್ನುವುದು ಮಾಧ್ಯಮದಲ್ಲಿ ಸಾರ್ವಜನಿಕ ಅಭಿಪ್ರಾಯಗಳನ್ನು ಗಮನಿಸಿದಾಗ ವೇದ್ಯವಾಗುತ್ತದೆ ಎಂದರು.