Home Mangalorean News Kannada News ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವ ಮತ್ತು ಹೊಸ ಕಟ್ಟಡಕ್ಕೆ ಶಿಲಾನ್ಯಾಸ 

ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವ ಮತ್ತು ಹೊಸ ಕಟ್ಟಡಕ್ಕೆ ಶಿಲಾನ್ಯಾಸ 

Spread the love

ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವ ಮತ್ತು ಹೊಸ ಕಟ್ಟಡಕ್ಕೆ ಶಿಲಾನ್ಯಾಸ 
ಮಂಗಳೂರು :ಅತೀ ವಂದನೀಯ ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ, ಮಂಗಳೂರು ಧರ್ಮಾಧ್ಯಕ್ಷರು : ಸಾಯಾಂಕಾಲ 6 ಗಂಟೆಗೆ ಮಿಲಾಗ್ರಿಸ್ ಚರ್ಚ್ನಲ್ಲಿ ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆ ಅರ್ಪಿಸಿದರು.
ಧರ್ಮಾಧ್ಯಕ್ಷರು ತಮ್ಮ ಸಂದೇಶದಲ್ಲಿ ಸಂತ ಆಂತೋನಿಯವರಂತೆ ಜನರಲ್ಲಿ ಅನುಕಂಪ ತೋರುವಂತೆ ಕರೆ ಕೊಟ್ಟರು. ಸಂತ ಆಂತೋನಿಯವರು ಜೀವಿಸಿದ್ದು ಕೇವಲ 36 ವರುಷ. ಆದರೆ ಆ ಚಿಕ್ಕ ಜೀವಿತಾವಧಿಯಲ್ಲಿ ಅವರು ತಮ್ಮ ಸ್ನೇಹಮಯೀ ಜೀವಿತದ  ಮೂಲಕ ನಮಗೆ ಬಿಟ್ಟು ಹೋದ ಸ್ಮರಣೆ ಹೆಮ್ಮೆ ಪಡುವಂತಹದು ಮತ್ತು ಅನುಕರಣೆ ಮಾಡುವಂತಹದು. ದೇವರು ಅವರಿಗೆ ನೀಡಿದ ಪ್ರವಚನ ಮತ್ತು ಪವಾಡ ಮಾಡುವ ವಿಶೇಷ ಶಕ್ತಿಯನ್ನು ತನಗೋಸ್ಕರ ಕಿಂಚಿತ್ತು ಉಪಯೋಗಿಸದೆ ಜನರ ಏಳಿಗೆ ಮತ್ತು ಒಳಿತಿಗಾಗಿ ವಿನಿಯೋಗಿಸಿದರು. ಸಂತ ಆಂತೋನಿಯವರು ಇಹ ಲೋಕ ತ್ಯಜಿಸಿ ಎಂಟು ಶತಮಾನಗಳು ಕಳೆದರೂ ಪ್ರಪಂಚದೆಲ್ಲೆಡೆ ಜನರು ಸಂತ ಆಂತೋನಿಯವರಲ್ಲಿ ಬರುತ್ತಾರೆ, ತಮ್ಮ ಕಷ್ಟ-ಸಂಕಷ್ಟಗಳನ್ನು ತೋಡಿಕೊಳ್ಳುತ್ತಾರೆ. ಮತ್ತು ಸಂತ ಆಂತೋನಿಯವರು ದೇವರಲ್ಲಿ ಕೋರಿ ತಮ್ಮ ಭಕ್ತರ ಆಶೋತ್ತರಗಳನ್ನು ಪೂರೈಸುತ್ತಾರೆ. ಸಂತ ಆಂತೊನಿಯವರ ಹಬ್ಬವನ್ನು ಆಚರಿಸುತ್ತಿರುವಾಗ ಅವರ ಮೂಲಕ ಪಡೆದ ಆಶೀರ್ವಾದಗಳನ್ನು ಅಗತ್ಯದಲ್ಲಿರುವ ಇತರರಲ್ಲಿ ಕೂಡ ಹಂಚಿ ಕೊಳ್ಳಲು ಧರ್ಮಾಧ್ಯಕ್ಷರು ಕರೆ ನೀಡಿದರು.
ಬೆಳಗ್ಗೆ 10.30 ಗಂಟೆಗೆ ಧರ್ಮಾಧ್ಯಕ್ಷರು ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ವಿಶೇಷ ಬಲಿಪೂಜೆ ಅರ್ಪಿಸಿದರು. ಬಲಿಪೂಜೆಯ ಬಳಿಕ ಪುಣ್ಯ ಕ್ಷೇತ್ರದ 120 ನೇ ವರ್ಷದ ಸವಿ ನೆನಪಿಗಾಗಿ ಮನೋರೋಗಿಗಳಿಗಾಗಿ ನಿರ್ಮಿಸಲಿರುವ 100 ಹಾಸಿಗೆಯ ಸುಸಜ್ಜಿತ ಕಟ್ಟಡದ ಶಂಕು ಸ್ಥಾಪನೆ ನಡೆಸಿದರು. ಮುಖ್ಯ ಅತಿಥಿಯಾಗಿ ಹಾಜರಿದ್ದ ಕರ್ನಾಟಕ ಸರಕಾರ ವಿಧಾನ ಪರಿಷತ್ನ ಸದಸ್ಯರು ಮತ್ತು ಮುಖ್ಯ ಸಚೇತಕರಾದ ಶ್ರೀ ಐವನ್ ಡಿ’ಸೋಜರವರು ನಿರ್ಮಿಸಲಿರುವ ನೂತನ ಕಟ್ಟಡದ ನಕಾಶೆಯನ್ನು ವೇದಿಕೆಯಲ್ಲಿನ ಪರದೆ ಮೇಲೆ ನೂತನ ರೀತಿಯಲ್ಲಿ ಮೂಡಿ ಬರುವಂತೆ ಮಾಡಿದರು. ಇದೇ ಸಂದರ್ಭದಲ್ಲಿ ಸರಕಾರದ ವತಿಯಿಂದ 5 ಲಕ್ಷ ನೆರವು ನೀಡುವುದಾಗಿ ಘೋಷಣೆ ಮಾಡಿದರು.
ತದನಂತರ ಮೊಗಾಚಿ ಲಾರ್ಹಾಂ ಖ್ಯಾತಿಯ ಶ್ರೀ ವಿನ್ಸೆಂಟ್ ಫೆರ್ನಾಂಡಿಸ್ರವರು ರಚಿಸಿದ ಮತ್ತು ಜೋನ್ ಎಮ್. ಪೆರ್ಮಾನ್ನೂರುರವರು ಬರೆದು ನಿರ್ದೇಶನ ಮಾಡಿದ ಸಾಂತ್ ಆಂತೊನ್ ಅಚರ್ಯಾಂಚೊ ಸಾಂತ್(ಪವಾಡ ಪುರುಷ ಸಂತ ಆಂತೋನಿ) ಕೊಂಕಣಿ ನಾಟಕ ಪ್ರದರ್ಶಿಸಿದರು.
ಬೆಳಗ್ಗೆ 8.15 ಗಂಟೆಗೆ ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು, ಧರ್ಮಪ್ರಾಂತ್ಯದ ಶ್ರೇಷ್ಠಗುರುಗಳು ಮಿಲಾಗ್ರಿಸ್ ಚರ್ಚ್ನಲ್ಲಿ  ಹಬ್ಬದ ಮೊದಲ ಬಲಿ ಪೂಜೆ ಅರ್ಪಿಸಿದರು. ಸಾಯಾಂಕಾಲ 4.30 ಕ್ಕೆ ಫಾ. ಜೇಕಬ್ ಮಿಲ್ಟನ್ ಮಲಯಾಳಂ ಭಾಷೆಯಲ್ಲಿ ಬಲಿ ಪೂಜೆ ಅರ್ಪಿಸಿದರು.
ಸಂಸ್ಥೆಯ ನಿರ್ದೇಶಕರಾದ ಫಾ. ಒನಿಲ್ ಡಿ’ಸೋಜರವರು ಸಹ ಗುರುಗಳಾದ ಫಾ. ಫ್ರಾನ್ಸಿಸ್ ಡಿ’ಸೋಜ ಮತ್ತು ಫಾ. ತ್ರಿಶಾನ್ ಡಿ’ಸೋಜರವರ ಪರವಾಗಿ ಎಲ್ಲಾ ದಾನಿ, ಸ್ವಯಂ-ಸೇವಕರನ್ನು ಹೃತ್ಫೂರ್ವಕವಾಗಿ ವಂದಿಸಿದರು. ಎಲ್ಲಾ ಭಕ್ತಾಧಿಗಳ ಮೇಲೆ ದೇವರ ಆಶೀರ್ವಾದ ಕೋರಿದರು. ಸುಮಾರು ಮೂರು ಸಾವಿರ  ಜನರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.



Spread the love

Exit mobile version