ಸಂತ ಜೋಸೆಫ್ ವಾಝ್ ದೇವರ ವಿಶೇಷ ಚೈತನ್ಯ ಮಹಾನ್ ವ್ಯಕ್ತಿ; ವಂ. ಕ್ಲಿಫರ್ಡ್ ಫೆರ್ನಾಂಡಿಸ್

Spread the love

ಸಂತ ಜೋಸೆಫ್ ವಾಝ್ ದೇವರ ವಿಶೇಷ ಚೈತನ್ಯ ಮಹಾನ್ ವ್ಯಕ್ತಿ; ವಂ. ಕ್ಲಿಫರ್ಡ್ ಫೆರ್ನಾಂಡಿಸ್

ಕುಂದಾಪುರ: ಸಂತ ಜೋಸೆಫ್ ವಾಝ್ ಅವರು ದೇವರ ವಿಶೇಷ ಚೈತನ್ಯವನ್ನು ಪಡೆದು ದೇವರ ಮಹಿಮೆಯನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ. ಅವರು ಕುಂದಾಪುರದ ನೆಲದಲ್ಲಿ 300 ವರ್ಷಗಳ ಹಿಂದೆ ನಡೆದಾಡಿದ್ದು ಅಂತಹ ಸ್ಥಳದಲ್ಲಿ ಬದುಕುತ್ತಿರುವ ನಾವು ಧನ್ಯರು ಎಂದು ಮಂಗಳೂರು ಸಂತ ಜೋಸೆಫ್ ಸೆಮನರಿಯ ಪ್ರಾಧ್ಯಾಪಕ ವಂ ಕ್ಲಿಫರ್ಡ್ ಫೆರ್ನಾಂಡಿಸ್ ಹೇಳಿದರು.

ಅವರು ಭಾನುವಾರ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಲಯ ಮಟ್ಟದಲ್ಲಿ ಆಯೋಜಿಸಿದ ಸಂತ ಜೋಸೆಫ್ ವಾಝ್ ಅವರ ವಾರ್ಷಿಕ ಮಹೋತ್ಸವದ ಪವಿತ್ರ ಬಲಿಪೂಜೆಯನ್ನು ಅರ್ಪಿಸಿ, ಭೋಧನೆಯನ್ನು ನೀಡಿ ಮಾತನಾಡಿದರು.

ದೇವರು ಕೆಲವರಿಗೆ ವಿಶೇಷ ಚೈತನ್ಯವನ್ನು ಕರುಣಿಸುತ್ತಾರೆ ಅಂತಹವರ ಸಾಲಿಗೆ ಸೇರಿದವರು ಜೋಸೆಫ್ ವಾಝ್ ಅವರು. ಅಂತಹ ಚೈತನ್ಯ ಹೊಂದಲು ದೇವರ ಅನುಗ್ರಹ ಅತ್ಯಗತ್ಯವಾಗಿದೆ. ದೀನ ಸ್ವಭಾವದ ಜೋಸೆಫ್ ವಾಝ್ ಎಲ್ಲರಿಗೂ ಮೆಚ್ಚವಂತಹವರಾಗಿದ್ದು, ಜೀತದಾಳಗಳನ್ನು ಧನಿಕರ ಕಪಿಮುಷ್ಠಿಯಿಂದ ಬಿಡಿಸಲು ಶ್ರಮ ಪಟ್ಟರು. ಮಾತೆ ಮರಿಯಮ್ಮನವರ ವಿಶೇಷ ಭಕ್ತಿಯನ್ನು ಹೊಂದಿದ ಜೋಸೆಫ್ ವಾಝ್ ಈ ಕರಾವಳಿ ಭಾಗದಲ್ಲಿ ಯೇಸು ಸ್ವಾಮಿಯ ಶುಭ ಸಂದೇಶವನ್ನು ಸಾರುವುದರೊಂದಿಗೆ ಸರ್ವರಿಗೂ ಮಾದರಿಯಾದ ಜೀವನ ಜೀವಿಸಿ ಇಂದು ಸಂತರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ ಎಂದರು.

ಕುಂದಾಪುರ ವಲಯದ ಎಲ್ಲಾ ಚರ್ಚುಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹೋತ್ಸವದಲ್ಲಿ ಭಾಗವಹಿಸಿದ್ದು, ಸಂತ ಜೋಸೆಫ್ ವಾಝ್ ಅವರ ವಿಶೇಷ ನೊವೆನಾ ಪ್ರಾರ್ಥನೆ ಜರುಗಿತು.

ಸಂತ ಜೋಸೆಫ್ ವಾಝ್ ಅವರು ಜೀವನ ಕಥನದ ಮೇಲೆ ಲೇಖಕ ವಿನೋದ್ ಗಂಗೊಳ್ಳಿ ಅವರು ನಿರ್ಮಿಸಿದ ಕೊಂಕಣಿ ಕಿರುಚಿತ್ರ ಜಿಣ್ಯೆ ದರ್ಶನ್ ಉದ್ಘಾಟಿಸಿ ಪ್ರದರ್ಶಿಸಲಾಯಿತು.

ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ ಅನಿಲ್ ಡಿಸೋಜಾ, ಸಹಾಯಕ ಧರ್ಮಗುರು ವಂ ಸಂದೀಪ್ ಜೆರಾಲ್ಡ್ ಡಿಮೆಲ್ಲೊ, ಸೈಂಟ್ ಮೇರಿಸ್ ಕಾಲೇಜಿನ ಪ್ರಾಂಶುಪಾಲ ವಂ ಪ್ರವೀಣ್ ಅಮೃತ್ ಮಾರ್ಟಿಸ್, ಅತಿಥಿ ಧರ್ಮಗುರುಗಳಾದ ವಂ ವಿಶಾಲ್ ಲೋಬೊ, ವಂ ಆಲ್ಬರ್ಟ್ ಕ್ರಾಸ್ತಾ, ವಂ ಜೋನ್ ಎ ಬಾರ್ಬೊಜಾ, ವಂ ಲಿಯೋ ಹಾಗೂ ಇತರರು ಉಪಸ್ಥಿತರಿದ್ದರು.

ಕುಂದಾಪುರ ವಲಯ ಪಾಲನಾ ಸಮಿತಿಯ ಕಾರ್ಯದರ್ಶಿ ಲೀನಾ ತಾವ್ರೊ ವಂದಿಸಿದರು. ಕುಂದಾಪುರ ಪಾಲನಾ ಸಮಿತಿಯ ಉಪಾಧ್ಯಕ್ಷ ಜಾಕೋಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜಾ ಸಹಕರಿಸಿದರು.


Spread the love