Home Mangalorean News Kannada News ಸಂಪರ್ಕ ರಸ್ತೆ ಅಭಿವೃದ್ಧಿಗೆ ತುರ್ತು ಕ್ರಮಕೈಗೊಳ್ಳಿ- ಸಚಿವ ಯು ಟಿ ಖಾದರ್

ಸಂಪರ್ಕ ರಸ್ತೆ ಅಭಿವೃದ್ಧಿಗೆ ತುರ್ತು ಕ್ರಮಕೈಗೊಳ್ಳಿ- ಸಚಿವ ಯು ಟಿ ಖಾದರ್

Spread the love

ಸಂಪರ್ಕ ರಸ್ತೆ ಅಭಿವೃದ್ಧಿಗೆ ತುರ್ತು ಕ್ರಮಕೈಗೊಳ್ಳಿ- ಸಚಿವ ಯು ಟಿ ಖಾದರ್

ಮಂಗಳೂರು : ಪ್ರಸಕ್ತ ಸಾಲಿನಲ್ಲಿ ಜಿಲ್ಲೆ ಎದುರಿಸಿದ ಅತಿವೃಷ್ಠಿಯಿಂದಾಗಿ ಜಿಲ್ಲೆಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮಂಗಳೂರು ದಸರಾ ಆರಂಭವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯವರು ತಮ್ಮ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿಗೊಳಿಸಿ ವಾಹನ ಸವಾರರಿಗೆ, ಪ್ರವಾಸಿಗಳಿಗೆ ಸಂಚಾರದಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ ಜನರಿಂದ ರಸ್ತೆ ಸಂಪರ್ಕ ಕುರಿತು ಹಲವು ದೂರುಗಳು ಬರುತ್ತಿದ್ದು ಅಧಿಕಾರಿಗಳು ರಸ್ತೆ ದುರಸ್ತಿಯನ್ನು ಶೀಘ್ರವೇ ಅಭಿವೃದ್ಧಿಪಡಿಸಲು ಸೂಚಿಸಿದರು.

ಅತಿವೃಷ್ಠಿಯಡಿ ಪ್ರಸಕ್ತ ಸಾಲಿನಲ್ಲಿ ಇಲಾಖೆಗಳಿಗೆ ನೇರವಾಗಿ ಅನುದಾನ ಬಂದಿದ್ದು, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಅನುದಾನ ಮತ್ತು ಕಾರ್ಯಾನುಷ್ಠಾನ ಮಾಹಿತಿ ನೀಡಲು ಜಿಲ್ಲಾಧಿಕಾರಿ ಸಸಿರಾಜ್ ಸೆಂಥಿಲ್ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಬಿ.ಸಿ. ರೋಡಿನಿಂದ ಅಡ್ಡಹೊಳೆಯವರೆಗೆ ರಸ್ತೆ ಕಾಮಗಾರಿ ಅಭಿವೃದ್ಧಿಯಲ್ಲಿದ್ದು ಈ ಪ್ರದೇಶದಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಚಿವರು ಸೂಚಿಸಿದರು. ಭಾರೀ ವಾಹನಗಳು ಆರಂಭವಾದರೆ ರಸ್ತೆ ಅಗೆತ ಮತ್ತು ಕಾಮಗಾರಿಯಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು.

ಅಡ್ಡಹೊಳೆ -ಬಿ ಸಿ ರೋಡ್ ರಸ್ತೆಯ ಸಮಸ್ಯೆಗಳನ್ನು ಆಲಿಸಲು ದಿನ ನಿಗದಿಮಾಡಿ ಉಪ್ಪಿನಂಗಡಿಯಿಂದ ಜನರ ಸಮಸ್ಯೆ ಆಲಿಸಲಿದ್ದೇನೆ ಎಂದೂ ಸಚಿವರು ಹೇಳಿದರು. ಈ ರಸ್ತೆ ವ್ಯಾಪ್ತಿಯಲ್ಲಿ ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿಗಳ ಬಳಿ ಫ್ಲೈ ಓವರ್‍ನ್ನು ರಚಿಸಲು ಯೋಜನೆ ರೂಪಿಸಲಾಗಿದೆ ಹೆದ್ದಾರಿ ಅಧಿಕಾರಿ ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಬರುವ ಕುಲಶೇಕರ- ಕಾರ್ಕಳ, ಸಂಪಾಜೆ-ಬಿ.ಸಿರೋಡುಗಳ ದುರಸ್ತಿಗೆ ತಕ್ಷಣವೇ ಕ್ರಮಕೈಗೊಳ್ಳಲಾಗಿದೆ ಎಂದರು. ಸುಳ್ಯ ಸಂಪಾಜೆ ನಡುವೆ ವಾಹನ ಓಡಾಟಕ್ಕೆ ಅನುಕೂಲವಾಗುವಂತೆ ಯುದ್ದೋಪಾದಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು ಜನರಿಗೆ ಅನುಕೂಲವಾಗುವಂತೆ ಶೀಘ್ರದಲ್ಲೇ ರಸ್ತೆಯನ್ನು ತೆರೆಯಲಾಗುವುದೆಂದರು.

ಚಾರ್ಮಾಡಿ ತುರ್ತು ರಸ್ತೆ ದುರಸ್ತಿಗೆ 184 ಲಕ್ಷ ರೂ. ಗಳು ಬಿಡುಗಡೆಯಾಗಿದ್ದು ದುರಸ್ತಿ ನಡೆಸಲಾಗುವುದು. ಶಾಶ್ವತ ದುರಸ್ತಿ ಕಾಮಗಾರಿಗೆ 126 ಕೋಟಿಗಳ ಯೋಜನೆಯನ್ನು ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಬಳಿಕ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗುವುದು.

ಗುರುಪುರ ಸೇತುವೆಗೆ ಸಂಬಂಧಿಸಿದಂತೆ 37.84 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ಈ ಯೋಜನೆ ಎರಡು ವರ್ಷದೊಳಗೆ ಸಂಪೂರ್ಣಗೊಳ್ಳಲಿದೆ ಎಂದು ಇಂಜಿನಿಯರ್ ಸಚಿವರಿಗೆ ಉತ್ತರಿಸಿದರು.

ಇದೇ ವೇಳೆ ಹಳೆಯ ಸೇತುವೆ ಫಿಟ್‍ನೆಸ್ ವರದಿ ಇನ್ನಷ್ಟೇ ಬರಬೇಕಿದೆ ಎಂದರು. ಲೋಕೋಪಯೋಗಿ ಇಲಾಖೆ ರಸ್ತೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದ ಸಚಿವರು, ವಿಮಾನ ನಿಲ್ದಾಣ ರಸ್ತೆ ಮತ್ತು ವಿಶ್ವವಿದ್ಯಾನಿಲಯ ರಸ್ತೆ ಗುರುಪುರ ರಸ್ತೆಗೆ ಪ್ಯಾಚ್ ವರ್ಕ್ ನಡೆಸಿ ಡಾಮರೀಕರಣ ಸಾಧ್ಯವಿದ್ದಲ್ಲಿ ಅದನ್ನೂ ದಸರೆಗೆ ಮುಂಚೆಮಾಡಿ ಎಂದು ಸಚಿವರು ಸೂಚಿಸಿದರು.

ಮರಳು ಸಮಸ್ಯೆಗೆ ಸಂಬಂಧಿಸಿದಂತೆ ಲೋಕೋಪಯೋಗಿಇಲಾಖೆಯಡಿ ನಿರ್ವಹಿಸಲ್ಟಡುವ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಆದ್ಯತೆಯಡಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಳುಕೊರತೆ ಕಾಡದಂತೆ ಕ್ರಮವಹಿಸಿ ಎಂದು ಸಚಿವರು ಸೂಚಿಸಿದರು.

ಕೆಎಸ್ ಆರ್ ಟಿಸಿ ಯಿಂದ ಹೊಸ ಲೈಸನ್ಸ್ ಪಡೆಯಲು ಮುಂದಿನ ಆರ್ ಟಿ ಎ ಸಭೆಯಲ್ಲಿ ಕ್ರಮವಹಿಸಿ; ಜಿಲ್ಲೆಯಾದ್ಯಂತ ಸರ್ಕಾರಿ ಬಸ್‍ಗಳನ್ನು ಓಡಿಸಿ ಜನರಿಗೆ ಅನುಕೂಲ ಮಾಡಿಕೊಡಿ ಎಂದು ಸೂಚಿಸಿದರು.

ಮೆಸ್ಕಾಂನಡಿ ಅತಿವೃಷ್ಠಿಯಿಂದ ಹಾಳಾಗಿರುವುದನ್ನು ರಿಪೇರಿ ಮಾಡಲಾಗಿದ್ದು, ದೀನದಯಾಳ್ ಯೋಜನೆಯಡಿ 3005 ವಿದ್ಯುದ್ದೀಕರಣದಡಿ 1506 ಸಂಪರ್ಕ ನೀಡಲಾಗಿದೆ. ನಗರದಲ್ಲಿ ಮುಂದಿನ 30 ವರ್ಷಗಳಲ್ಲಿ ವಿದ್ಯುತ್ ಬೇಡಿಕೆಯನ್ನು ಪೂರೈಕೆ ಮಾಡಲು ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ಮತ್ತು ಕಾಮಗಾರಿಗಳನ್ನು ಆರಂಭಿಸಲಾಗಿರುವುದನ್ನು ಮೆಸ್ಕಾಂ ಇಂಜಿನಿಯರ್ ಮಾಹಿತಿ ನೀಡಿದರು.

ನಗರ ವಸತಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ಪಡೆದ ಸಚಿವರು, ಈ ಸಂಬಂಧ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಿದರು. ಸ್ಲಮ್‍ಬೋರ್ಡ್ ಸಾಧನೆ ಹಾಗೂ ಜಿಲ್ಲೆಯಲ್ಲಿ ಅಧಿಕೃತ ಸ್ಲಂಗಳ ಬಗ್ಗೆ ಮಾಹಿತಿಯನ್ನೂ ಪಡೆದರು. ವಸತಿ ಯೋಜನೆ ಅನುಷ್ಠಾನ ವೇಳೆ ಹೈರೈಸ್ ಬಿಲ್ಡಿಂಗ್ ನಿರ್ಮಾಣಕ್ಕೆ ಸಲಹೆ ಮಾಡಿದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯುವ ಯೋಜನೆಯನ್ನು ಈ ಸಾಲಿನಲ್ಲಿಯಾದರೂ ನಿಗದಿತ ಗುರಿಯನ್ನು ಸಮಯಮಿತಿಯೊಳಗೆ ಸಾಧಿಸಿ ಎಂದು ಸೂಚಿಸಿದರು. ಗಂಗಾಕಲ್ಯಾಣದಡಿ ಕೃಷಿಯಂತ್ರ ಯೋಜನೆಯಡಿ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಸವಲತ್ತುಗಳ ಸದ್ಬಳಕೆಯನ್ನು ಖಾತರಿಪಡಿಸಿ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅನುಷ್ಠಾನಗೊಳ್ಳುತ್ತಿರುವ ಹಾಗೂ ಅನುಷ್ಥಾನಗೊಂಡಿರುವ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಎಂಜಿಎನ್‍ಆರ್‍ಇಜಿಯಡಿ ಪ್ರಸಕ್ತ 36ಶೇಕಡ ಸಾಧನೆಯಾಗಿದ್ದು ಸಾಧನೆಯ ಹಾದಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.


Spread the love

Exit mobile version