ಸಂಪ್ರದಾಯದಂತೆ ಕೃಷ್ಣ ಜಯಂತಿ ಆಚರಣೆ – ಈಶಪ್ರಿಯತೀರ್ಥ ಸ್ವಾಮೀಜಿ
ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಮಠದ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಬಾರಿಯ ಕೃಷ್ಣಜಯಂತಿಯನ್ನು ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಸೆ. 10ರಂದು ಆಚರಿಸಲಾಗುವುದು. ಸೀಮಿತ ಭಕ್ತರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗನುಗುಣವಾಗಿ ನಡೆಸಲಾಗುತ್ತದೆ. ಆದರೆ, ಸೆ. 11ರಂದು ವಿಟ್ಲಪಿಂಡಿ (ಕೃಷ್ಣಲೀಲೋತ್ಸವ) ಆಚರಣೆ ಮಾತ್ರ ಜಿಲ್ಲಾಡಳಿತದ ನಿರ್ದೇಶನದಂತೆ ಮಾಡಲಾಗುವುದು ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸೆ. 10ರಂದು ಕೃಷ್ಣ ಜಯಂತಿಯಂದು ಮಧ್ಯರಾತ್ರಿ 12.16ಕ್ಕೆ ಶ್ರೀಕೃಷ್ಣನಿಗೆ ಅಘ್ರ್ಯ ಪ್ರದಾನ ನಡೆಸಲಾಗುವುದು. ಅಂದು ಬೆಳಿಗ್ಗೆ ಮಹಾಪೂಜೆ, ನೈವೇದ್ಯ, ವಿಶೇಷ ಪೂಜೆ ಇತ್ಯಾದಿಗಳೆಲ್ಲವೂ ಮಠದೊಳಗೆ ನಡೆಯುತ್ತದೆ. ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣ ಮೂಲಕ ಪ್ರಸಾರ ಮಾಡಲಾಗುವುದು. ಆದ್ದರಿಂದ ಭಕ್ತಾದಿಗಳು ತಮ್ಮ ಮನೆಗಳಲ್ಲೇ ಕೃಷ್ಣಮಠದ ಅಷ್ಟಮಿ ಉತ್ಸವ ವೀಕ್ಷಿಸಿ, ಕೃಷ್ಣಭಕ್ತಿ ಪ್ರದರ್ಶಿಸಬೇಕೆಂಬುದು ತಮ್ಮ ಅಪೇಕ್ಷೆ ಎಂದರು.
ಮರುದಿನ ಸೆ. 11ರಂದು ವಿಟ್ಲಪಿಂಡಿ ಉತ್ಸವ ಮಠದ ಹೊರಗೆ ರಥಬೀದಿಯಲ್ಲಿ ನಡೆಯುತ್ತದೆ. ಅಲ್ಲಿ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ನಿಯಮ ಪಾಲನೆ ಮತ್ತು ಅವಕಾಶ ಕೇಳಲಾಗುವುದು. ಈ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲಾಡಳಿತದ ಸೂಚನೆಯಂತೆಯೇ ಆಚರಿಸಲಾಗುತ್ತದೆ ಎಂದು ಪರ್ಯಾಯ ಶ್ರೀಪಾದರು ಸ್ಪಷ್ಟಪಡಿಸಿದರು.