ಸಂವಿಧಾನ ಉಳಿಸಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ – ನಿಕೇತ್ ರಾಜ್ ಮೌರ್ಯ

Spread the love

ಸಂವಿಧಾನ ಉಳಿಸಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ – ನಿಕೇತ್ ರಾಜ್ ಮೌರ್ಯ

ಕಾಪು: ಸಂವಿಧಾನ ನಮಗೆ ಬದುಕುವ ಹಕ್ಕನ್ನು ನೀಡಿದ್ದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರವಾಗಿದೆ. ಬೈಬಲ್, ಭಗವದ್ಗೀತೆ, ಕುರಾನ್ ಧರ್ಮಗೃಂಥಗಳಷ್ಠೆ ಸಂವಿಧಾನವೂ ಪವಿತ್ರವಾಗಿದೆ. ಇಂದಿನ ಯುವಜನರಿಗೆ ಅದರ ಭೋದನೆಯಾಗಬೇಕಿದೆ. ಈ ಸಂವಿಧಾನವನ್ನು ಉಳಿಸಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಅದಕ್ಕಾಗಿ ನಾವು ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸವಾಗಿದೆ ಎಂದು ಪ್ರಗತಿಪರ ಚಿಂತಕ ನಿಕೇತ್ ರಾಜ್ ಮೌರ್ಯ ಹೇಳಿದರು.

ರಕ್ಷಣಾಪುರ ಜವನೆರ್ ಕಾಪು ಇದರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳವಾರ ಕಾಪು ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಉಳಿಸಿ ಬೃಹತ್ ಜಾಥಾ ಮತ್ತು ಸಾರ್ವಜನಿಕ ಸಭೆಯಲ್ಲಿ ಅವರು ದಿಕ್ಕೂಚಿ ಭಾಷಣ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ನಮ್ಮ ಸಂವಿಧಾನ ನಮ್ಮ ಹಕ್ಕು ಡಾ| ಬಿ.ಆರ್. ಅಂಬೇಡ್ಕರ್ ಅವರು ಅರ್ಪಿಸಿದ ಸಂವಿಧಾನವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ನಾವೆಲ್ಲರೂ ಒಂದುಗೂಡಬೇಕಿದೆ. ಇದು ಸರ್ವಧರ್ಮಗಳ ಜನರ ಕರ್ತವ್ಯವೂ ಆಗಿದೆ. ಸಂವಿಧಾನ ಉಳಿಸಿ ಜಾಥಾ ಮೂಲಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದೇವೆ. ರಕ್ಷಣಾಪುರ ಜನವನೆರ್ ಸಂಘಟನೆಯೊಂದಿಗೆ ವಿವಿಧ ಸಂಘಟನೆಗಳು ಕೂಡಾ ಕೈ ಜೋಡಿಸುವ ಮೂಲಕ ಕಾರ್ಯಕ್ರಮದ ಉದ್ದೇಶವು ಸಾರ್ಥಕವಾಗಿದೆ ಎಂದರು.

ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಂವಿಧಾನ ನಮಗೆಲ್ಲರಿಗೂ ಸಮಾನತೆಯೊಂದಿಗೆ ಬದುಕುವ ಹಕ್ಕನ್ನು ಕೊಟ್ಟಿದೆ. ದೇಶ ಕೇವಲ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯಾದದ್ದಲ್ಲ. ಬದಲಿಗೆ ಕಳೆದ 70 ವರ್ಷಗಳಿಂದಲೂ ವಿವಿಧ ರೀತಿಯ ಅಭಿವೃದ್ಧಿಯ ಕ್ರಾಂತಿಯಾಗಿದೆ. ದೇಶದ ಅಭಿವೃದ್ಧಿಯ ಬಗ್ಗೆ ನಾವು ಅವಲೋಕನ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಪ್ರಗತಿಪರ ಚಿಂತಕ ಸುಧೀರ್ ಕುಮಾರ್ ಮುರೋಳಿ ಮಾತನಾಡಿ, ಭಾರತದ ಸಂವಿಧಾನ ಪವಿತ್ರವಾಗಿದೆ. ಅದರ ಪಾವಿತ್ರ್ಯತೆಯನ್ನು ಉಳಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಂವಿಧಾನ ಉಳಿಸಿ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಧಾರ್ಮಿಕ ಮುಖಂಡರಾದ ವೇ। ಮೂ| ಶ್ರೀನಿವಾಸ ತಂತ್ರಿ ಕಲ್ಯ, ಪೊಲಿಪು . ಜಾಮಿಯಾ ಮಸೀದಿಯ ಧರ್ಮಗುರು ಇರ್ಷಾದ್ ಸಅದಿ, ರೆ| ಫಾ| ವಿಲಿಯಂ ಮಾರ್ಟಿಸ್ ಆಶೀರ್ವಚನ ನೀಡಿದರು.

ಸಂವಿಧಾನ ಉಳಿಸಿ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ್ ತಂತ್ರಿ ಕಲ್ಯ, ರಾಘು ಪೂಜಾರಿ ಕಲ್ಮಂಜೆ, ಶೇಖರ ಹೆಜಮಾಡಿ, ಮಹೇಶ್ ಶೆಣೈ, ಸ್ಪೂರ್ತಿ ಶೆಟ್ಟಿ, ಜಾನಪದ ಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರನ್ನು ಸಮ್ಮಾನಿಸಿ, ಗೌರವಿಸಲಾಯಿತು.

ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಕಾಪು ಪೇಟೆಯವರೆಗೆ ಸಾಗಿ ಬಂದ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರೂ ಸೇರಿದಂತೆ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸುಂದರ ಮಾಸ್ತರ್, ಆನಂದ ಬ್ರಹ್ಮಾವರ, ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಳೆಬೈಲು, ನವೀನ್ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲು, ಕಾಪು ದಿವಾಕರ ಶೆಟ್ಟಿ, ನವೀನ್ಚಂದ್ರ ಜೆ. ಶೆಟ್ಟಿ, ಶಿವಾಜಿ ಎಸ್. ಸುವರ್ಣ, ಶಾಂತಲತಾ ಶೆಟ್ಟಿ, ಗೀತಾ ವಾಗ್ಲೆ, ವೆರೋನಿಕಾ ಕರ್ನೆಲಿಯೋ, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್, ಹರೀಶ್ ಕಿಣಿ, ರಮೇಶ್ ಕಾಂಚನ್, ದಿನಕರ ಹೇರೂರು ಮೊದಲಾದವರು ಉಪಸ್ಥಿತರಿದ್ದರು.

ಸಂಘಟನೆಯ ಅಧ್ಯಕ್ಷ ನವೀನ್ ಎನ್. ಶೆಟ್ಟಿ ವಂದಿಸಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್ ಕಾರ್ಯಕ್ರಮ ನಿರೂಪಿಸಿದರು.


Spread the love