Home Mangalorean News Kannada News ಸಂವಿಧಾನ ಉಳಿಸಿ ಮುಂದಿನ ಪೀಳಿಗೆಗೆ ಒಯ್ಯಬೇಕಾಗಿದೆ – ಡಾ.ಜಿ.ವಿ.ವೆನ್ನೆಲ ಗದ್ದರ್

ಸಂವಿಧಾನ ಉಳಿಸಿ ಮುಂದಿನ ಪೀಳಿಗೆಗೆ ಒಯ್ಯಬೇಕಾಗಿದೆ – ಡಾ.ಜಿ.ವಿ.ವೆನ್ನೆಲ ಗದ್ದರ್

Spread the love

ಸಂವಿಧಾನ ಉಳಿಸಿ ಮುಂದಿನ ಪೀಳಿಗೆಗೆ ಒಯ್ಯಬೇಕಾಗಿದೆ – ಡಾ.ಜಿ.ವಿ.ವೆನ್ನೆಲ ಗದ್ದರ್

ಉಡುಪಿ: ದೇಶದ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಿ ಮುಂದಿನ ಪೀಳಿಗೆಗೆ ಒಯ್ಯುಬೇಕಾದ ಅಗತ್ಯ ಇದೆ. ನಾವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಕ್ಕುಗಳನ್ನು ರಕ್ಷಿಸಿದರೆ ಮಾತ್ರ ನಮ್ಮನ್ನು, ಈ ದೇಶವನ್ನು ಸೇರಿದಂತೆ ಇಡೀ ಜಗ ತ್ತನ್ನು ರಕ್ಷಿಸಲು ಸಾಧ್ಯ ಎಂದು ಸಿಕಂದರಾಬಾದ್ನ ಸಾಹಿತಿ, ಹೋರಾಟಗಾರ್ತಿ ಡಾ.ಜಿ.ವಿ.ವೆನ್ನೆಲ ಗದ್ದರ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಉಡುಪಿ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ‘ಸೊಲ್ಮೆಲು ಸಿರಿಯ ನಾಡಿಗೆ, ಮೈತ್ರಿಯೆಡೆಗೆ ನಮ್ಮ ನಡಿಗೆ’ ಹಕ್ಕೋತ್ತಾಯ ಜಾಥವನ್ನು ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮಾಜದಲ್ಲಿ ಮಹಿಳೆಯ ಕಾಳಜಿ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಪುರುಷರ ಬಗ್ಗೆ ಕೂಡ ಇರುತ್ತದೆ. ಮಹಿಳೆಯರು ಕೇವಲ ಹೆಣ್ಣು ಗಂಡಿನ ಬಗ್ಗೆ ಚಿಂತನೆ ಮಾಡದೇ ಇಡೀ ಪರಿಸರ, ಪ್ರಾಣಿ, ಪಕ್ಷಿ ಇಡೀ ಜಗತ್ತಿನ ಬಗ್ಗೆ ಚಿಂತನೆ ಮಾಡುತ್ತಾರೆ. ಇದುವೇ ಆಕೆಯ ನಿಜವಾದ ಸೌಂದರ್ಯ. ನಾವು ಖಂಡಿತವಾಗಿ ಮುಂದಿನ ಜನಾಂಗಕ್ಕಾಗಿ ಸಮಾನತೆ, ಶಾಂತಿ ಹಾಗೂ ಪ್ರೀತಿಯ ಸಮಾಜವನ್ನು ಸೃಷ್ಟಿಸುತ್ತೇವೆ ಎಂದರು.

ಚಿಂತಕಿ ಅಮೃತಾ ಆತ್ರಾಡಿ ಮಾತನಾಡಿ, ನಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ನಾವು ಮೌನವಾಗಿದ್ದರೆ ನಮ್ಮ ಮೇಲೆ ಹೆಚ್ಚು ಹೆಚ್ಚು ದೌರ್ಜನ್ಯಗಳು ನಡೆಯು ತ್ತವೆ. ಸಾವಿರಾರು ವರ್ಷಗಳಿಂದ ಈ ಪುರುಷ ಸಮಾಜ, ಆಳುವ ವರ್ಗ, ಧರ್ಮಗಳು ನಮ್ಮ ನಾಲಗೆಗೆ ಅಲ್ಲ, ನಮ್ಮ ಕಿರುನಾಲಿಗೆಗೆ ಬಂಧನ ಹಾಕಿದೆ. ಆ ಕಿರು ನಾಲಿಗೆಯ ಬಂಧನವನ್ನು ನಾವೇ ಬಿಡಿಸಿಕೊಳ್ಳಬೇಕಾಗಿದೆ. ಅದಕ್ಕೆ ನಾವು ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ಆ ಬಂಧನದಿಂದ ಬಿಡಿಸಿ ಕೊಂಡಾಗ ನಾವು ಎಲ್ಲ ಬಂಧನದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ರೈತ ಹೋರಾಟಗಾರ್ತಿ ಅನಸೂಯಮ್ಮ ಅಳಾಳುಸಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಮುಂದಿನ ವರ್ಷದ ಒಕ್ಕೂಟದ ಮಹಿಳಾ ದಿನಾಚರಣೆಯ ಜವಾಬ್ದಾರಿಯನ್ನು ವಿಜಯನಗರದ ತಂಡಕ್ಕೆ ಹಸ್ತಾಂತರಿಸಲಾಯಿತು. ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನಾಗಮ್ಮ ಡೋಲು ಬಾರಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆಯು ಜೋಡುಕಟ್ಟೆ, ಕೋರ್ಟ್ ರೋಡ್, ಕೆಎಂ ಮಾರ್ಗ, ಕ್ಲಾಕ್ ಟವರ್, ಕೆಎಂ ಮಾರ್ಗ, ಮಿಷನ್ ಕಂಪೌಂಡು ಮಾರ್ಗದ ಮೂಲಕ ಬಾಸೆಲ್ ಮಿಷನ್ ಚರ್ಚ್ ಹಾಲ್ನಲ್ಲಿ ಸಮಾಪ್ತಿಗೊಂಡಿತು. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಾವಿರಾರು ಮಂದಿ ಮಹಿಳೆಯರು ಈ ಜಾಥದಲ್ಲಿ ಪಾಲ್ಗೊಂಡಿದ್ದರು.

ಜಾಥಾದ ಬಳಿಕ ದೌರ್ಜನ್ಯ ವಿರೋಧಿ ಒಕ್ಕೂಟ ಉಡುಪಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಉಡುಪಿ ಬಾಸೆಲ್ ಮಿಷನ್ ಚರ್ಚ್ ಹಾಲ್ನ ರತ್ನಾ ಅಮ್ಮಣ್ಣ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿರುವ ಲಿಂಗ ಅಸಮಾನತೆಯನ್ನು ಭೇದಿಸಲು ಮಹಿಳೆಯರು ರಾಜಕೀಯವಾಗಿ ಮುಂದೆ ಬರುವುದು ತುಂಬಾ ಅಗತ್ಯವಾಗಿದೆ. ಆದರೆ ರಾಜಕೀಯದಲ್ಲಿ ಮಹಿಳೆಯರ ಪ್ರಯಾಣ ಸುಲಭವಲ್ಲ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಮನೋಭಾವ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು ಕೂಡ ಸಮಸ್ಯೆಯಾಗಿದೆ.

ಈ ಸಮಾಜ ಮಹಿಳೆಯರಿಗೆ ಎರಡನೇ ದರ್ಜೆಯ ಸ್ಥಾನಮಾನವನ್ನು ನೀಡಿದೆ. ಆದರೆ ಮಹಿಳೆಯರೇ ತಮ್ಮ ಸ್ಥಾನಮಾನ ಏರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ತಮ್ಮ ಮನೆ, ಹಳ್ಳಿ, ಗುಡ್ಡಗಾಡು, ನಗರಗಳಲ್ಲಿ ಮಾಡಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಇಂದಿರಾ ಗಾಂಧಿಯಿಂದ ಹಿಡಿದು ಮಮತಾ ಬ್ಯಾನರ್ಜಿಯವರೆಗೆ ಹಲವು ಮಂದಿ ಸಾಧನೆಗೆ ಲಿಂಗ ಅಡ್ಡಿಯಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಕೂಡ ಜೀವಪರ, ಸಮಾನತೆಗಾಗಿ ಅತ್ಯುತ್ತಮ ನಾಯಕತ್ವನ್ನು ನೀಡಿದ್ದಾರೆ ಎಂದರು.

ನಮ್ಮ ಮುಂದೆ ಇರುವ ನಾಯಕತ್ವದ ಮಾದರಿಗಳು ಪಿತೃ ಪ್ರಧಾನ ನೀತಿಯಿಂದ ಕೂಡಿದೆ. ಅದನ್ನು ಲಿಂಗಸೂಕ್ಷ್ಮತೆ ಯಿಂದ ನೋಡಿ ಹೊಸ ದೃಷ್ಟಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಲಿಂಗ ಸಮಾನತೆ, ಸಾಮೂಹಿಕ ನಾಯತ್ವದ ಪರಿಕಲ್ಪನೆಯನ್ನು ನಾವು ಹೆಚ್ಚಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಒಬ್ಬ ಮಹಿಳೆ ಸಾವಿರ ಆಯುಧಗಳಿಗೆ ಸಮಾನ. ಸ್ವಸಹಾಯ ಗುಂಪುಗಳು, ಸಂಘಟನೆಗಳು ಮಹಿಳೆಯರನ್ನು ತಳಮಟ್ಟ ದಲ್ಲಿಯೇ ಆರ್ಥಿಕ ಸಬಲಗೊಳಿಸಿದೆ. ಮಹಿಳೆಯರ ಕುರಿತ ಸಮಾಜದ ದೃಷ್ಠಿಕೋನವನ್ನು ಬದಲಾಯಿಸಲು ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂಬೇಡ್ಕರ್ ಕೊಟ್ಟ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ವರೋನಿಕಾ ಕರ್ನೆಲಿಯೋ ವಹಿಸಿದ್ದರು. ಅಖಿಲಾ ವಿದ್ಯಾಸಂದ್ರ ಉಡುಪಿ ಘೋಷಣೆ ಮಂಡಿಸಿದರು. ಮೇರಿ ಡಿಸೋಜ ಭಾರತ ಸಂವಿಧಾನ ಪೀಠಿಕೆ ವಾಚಿಸಿದರು. ಅಪ್ಪಿ ಮೂಡುಬೆಳ್ಳೆ ಪಾಡ್ದಾನ ಹಾಡು ಹಾಡಿದರು.

ವೇದಿಕೆಯಲ್ಲಿ ಗ್ರೇಸಿ ಕುವೆಲ್ಲೊ, ಕುಲ್ಸುಮ್ ಅಬೂಬಕರ್, ಸರೋಜಾ, ರೆಹನಾ ಸುಲ್ತಾನಾ ಬೈಂದೂರು, ಮಂಜುನಾಥ ಗಿಳಿಯಾರು, ಸಂತೋಷ್ ಕರ್ನೆಲಿಯೋ, ನಾಗಮ್ಮ ಬೈಂದೂರು, ಸಂತೋಷ್ ಬಲ್ಲಾಳ್, ಸಂಜೀವ ವಂಡ್ಸೆ, ಶಾಂತಿ ನರೋನ್ಹಾ, ಶ್ರೀಕುಮಾರ್, ಸುಮಿತ್ರಾ ಸುಧಾಕರ್, ದೇವಿಕಾ ನಾಗೇಶ್, ಸಲೀಮ್ ಖಾನ್ ಕೊಪ್ಪಳ, ಪ್ರಭಾವತಿ, ಚಂದ್ರಮ್ಮ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version