ಸಕಲ ಸರಕಾರಿ ಗೌರವಗಳೊಂದಿಗೆ ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಅಂತ್ಯ ಸಂಸ್ಕಾರ
ಕುಂದಾಪುರ: ಎರಡು ದಿನಗಳ ಹಿಂದೆ ನಿಧನರಾಗಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್(91) ಅವರ ಮೃತ ದೇಹದ ಅಂತ್ಯವಿಧಿಗಳನ್ನು ಗುರುವಾರ ರೋಮನ್ ಕ್ರೈಸ್ತ ಸಮುದಾಯದ ಹೋಲಿ ರೋಜರಿ ಇಗರ್ಜಿಯಲ್ಲಿ ಅತ್ಯಂತ ಸರಳ ವಿಧಿಗಳ ಮೂಲಕ ನೆರವೇರಿಸಲಾಯಿತು.
ಬೆಳಿಗ್ಗೆ 11 ಗಂಟೆಯ ವೇಳೆಯಲ್ಲಿ ಮನೆಯಿಂದ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ರೋಜರಿ ಇಗರ್ಜಿಗೆ ತರಲಾಗಿತ್ತು. ಕುಂದಾಪುರ ವಲಯ ಧರ್ಮಗುರುಗಳಾದ ವಂ. ಸ್ಟ್ಯಾನಿ ತಾವ್ರೋ ಅವರ ಮಾರ್ಗದರ್ಶನದಲ್ಲಿ ನಡೆದ ಪ್ರಾರ್ಥನಾ ಹಾಗೂ ಪೂಜಾ ವಿಧಿಗಳಲ್ಲಿ ಧರ್ಮಗುರುಗಳಾದ ವಂ. ಆರ್ಥರ್ ಪಿರೇರಾ ಪ್ರಾರ್ಥನಾ ವಿಧಿ ನೆರವೇರಿಸಿದರು. ಸಹಾಯಕ ಧರ್ಮಗುರುಗಳಾದ ವಂ. ವಿಜಯ್ಡಿಸೋಜಾ ಹಾಗೂ ವಂ. ಪ್ರವೀಣ್ಮಾರ್ಟಿಸ್ಹಾಗೂ ಇಗರ್ಜಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಲೂಯಿಸ್ಜೆ ಫೆರ್ನಾಂಡಿಸ್ಇದ್ದರು.
ಇಗರ್ಜಿಯ ಒಳ ಭಾಗದಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಸರಳ ರೀತಿಯಲ್ಲಿ ಪ್ರಾರ್ಥನಾ ವಿಧಿಯನ್ನು ಮುಗಿಸಿ ಹೊರ ಬಂದ ಬಳಿಕ, ಪೊಲೀಸ್ ಇಲಾಖೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಗೌರವ ರಕ್ಷೆಯನ್ನು ನೀಡಲಾಯಿತು. ಈ ವೇಳೆ ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂಶಂಕರ್, ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಉಪ ನಿರೀಕ್ಷಕರಾದ ಹರೀಶ್ ಆರ್ ನಾಯ್ಕ್ ಹಾಗೂ ರಾಜ್ ಕುಮಾರ್ ಇದ್ದರು.
ಕೊರೋನಾ ನಿರ್ಬಂಧ ಇರುವ ಕಾರಣದಿಂದಾಗಿ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳಲು ಕಡಿಮೆ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಇಗರ್ಜಿಯ ಪರಿಸರದ ನಿವಾಸಿಗಳು ದೂರದಿಂದಲೇ ಸರ್ಕಾರದ ಗೌರವ ರಕ್ಷೆ ಹಾಗೂ ಇತರ ವಿಧಿಗಳನ್ನು ನೀಡಿದರು.