ಸಕ್ಕರೆ ಕಾರ್ಖಾನೆ ಪುನಶ್ಚೇತನ: ಉನ್ನತ ಮಟ್ಟದ ಸಭೆ- ಸಚಿವೆ ಜಯಮಾಲಾ

Spread the love

ಸಕ್ಕರೆ ಕಾರ್ಖಾನೆ ಪುನಶ್ಚೇತನ: ಉನ್ನತ ಮಟ್ಟದ ಸಭೆ- ಸಚಿವೆ ಜಯಮಾಲಾ

ಉಡುಪಿ: ಬ್ರಹ್ಮಾವರದಲ್ಲಿರುವ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಉಭಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ಏರ್ಪಡಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಂಡು ಮತ್ತೆ ಹಿಂದಿನಂತೆ ವ್ಯವಹಾರ ನಡೆಸಬೇಕೆಂಬುದು ತನ್ನ ಆಶಯವಾಗಿದೆ. ಈಗಾಗಲೇ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರೂ ಕೂಡಾ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ರೈತರು ಮುಂದೆ ಬಂದರೆ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಸಾಕಷ್ಟು ಮಾಹಿತಿ ದೊರಕಿದ್ದು, ಶೀಘ್ರವೇ ಈ ಬಗ್ಗೆ ಸಕ್ಕರೆ ಸಚಿವರು ಹಾಗೂ ಸಕ್ಕರೆ ಇಲಾಖೆ ಆಯುಕ್ತರೊಂದಿಗೆ ತಾನು ಸಮಾಲೋಚಿಸಲಿದ್ದೇನೆ. ಕಾರ್ಖಾನೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ರೈತರ ಹಿತಾಸಕ್ತಿಯೂ ಇರುವುದರಿಂದ ಉಭಯ ಜಿಲ್ಲೆಗಳ ಶಾಸಕರು, ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯನ್ನು ನಡೆಸಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವರು ಹೇಳಿದರು.

ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಕಾರ್ಖಾನೆಯ ಪುನಶ್ಚೇತನಕ್ಕೆ ಎಲ್ಲಾ ವಿಧದ ಬೆಂಬಲ ಹಾಗೂ ತಂತ್ರಜ್ಞಾನದ ನೆರವು ನೀಡಲು ಸರಕಾರ ಸಿದ್ಧವಿದೆ. ಇದರಿಂದ ಸಾಕಷ್ಟು ಉದ್ಯೋಗಗಳೂ ದೊರಕುವುದರಿಂದ ಜಿಲ್ಲೆಯ ಪ್ರಗತಿಗೆ ಪೂರಕವಾಗಲಿದೆ. ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತ ನಡುವೆ ಸಮನ್ವಯತೆ ಮುಖ್ಯವಾಗಿದೆ. ವಾರಾಹಿ ನೀರಾವರಿ ಯೋಜನೆ ಬಂದಿರುವುದರಿಂದ ಈ ಭಾಗದಲ್ಲಿ ಇನ್ನಷ್ಟು ಕಬ್ಬು ಬೆಳೆಯಲು ಅವಕಾಶವಿದೆ ಎಂದು ಸಚಿವೆ ಜಯಮಾಲಾ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ವಿಸ್ತ್ರತ ಯೋಜನಾ ವರದಿ(ಡಿಪಿಆರ್) ತಯಾರಿಸಲಾಗಿದ್ದು, ಈಗಿನ ಅಂದಾಜಿನಂತೆ ಸುಮಾರು 30 ಕೋಟಿ ರೂ. ಅಗತ್ಯವಿದೆ. ಕಾರ್ಖಾನೆ ಪುನಶ್ಚೇತನ, ನಂತರ ಕಬ್ಬು ಪೂರೈಕೆಯ ಸಾಧ್ಯತೆಗಳ ಬಗ್ಗೆ ಸಾಧ್ಯತಾ ಅಧ್ಯಯನ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ವಾರಾಹಿ ಯೋಜನೆಯ ಮೂಲ ಉದ್ದೇಶವೇ ಕಬ್ಬು ಬೆಳೆಗೆ ನೀರೊದಗಿಸುವುದಾಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿದರೆ ರೈತರೂ ಮುಂದೆ ಬರಲಿದ್ದಾರೆ. ವರ್ಷದಲ್ಲಿ ಕನಿಷ್ಠ 6 ತಿಂಗಳು ಕಬ್ಬು ದೊರೆಯುವಂತಾಗಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ ಮಾತನಾಡಿ, ಕಾರ್ಖಾನೆಯ ಆಸ್ತಿ ಮಾರಾಟಕ್ಕೆ ಅವಕಾಶ ನೀಡಬಾರದು. ರೈತರಿಗೆ ಪುನಶ್ಚೇತನ ಪೂರಕವಾಗಲಿದೆಯೇ ಎಂಬುದರ ಬಗ್ಗೆಯೂ ಅಧ್ಯಯನ ಮಾಡಬೇಕಿದೆ ಎಂದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಕಾರ್ಖಾನೆಯ ಪುನಶ್ಚೇತನಕ್ಕೆ ರೈತರ ಸಹಕಾರವೂ ಅಗತ್ಯ ಇದೆ. ಸಾಕಷ್ಟು ಕಬ್ಬು ಪೂರೈಕೆಯಾಗುವುದು ಮುಖ್ಯವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಲಾಲಾಜಿ ಮೆಂಡನ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಯಶೀಲ ಶೆಟ್ಟಿ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್, ರೈತ ಸಂಘಟನೆಗಳ ಮುಖಂಡರು, ಕಬ್ಬು ಬೆಳೆಗಾರರ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love