ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ 30 ಕೋಟಿ ರೂ. ಬಿಡುಗಡೆಗೆ ಪ್ರಯತ್ನ: ಸಚಿವೆ ಜಯಮಾಲಾ ಭರವಸೆ
ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಕಾರ್ಖಾನೆಯ ಆಡಳಿತ ಮಂಡಳಿ ಕೋರಿರುವ 30 ಕೋಟಿ ರೂ.ಗಳ ಬಿಡುಗಡೆ ಕುರಿತಂತೆ ಸರಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ತಿಳಿಸಿದ್ದಾರೆ.
ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಯ ಕುರಿತಂತೆ ಸಮಾಲೋಚನೆ ನಡೆಸಲು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ರೈತ ಮುಖಂಡರ ಜೊತೆ ಕರೆಯಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಃಶ್ಚೇತನ ಕುರಿತು ನುರಿತ ತಾಂತ್ರಿಕ ತಜ್ಞರನ್ನು ಒಳಗೊಂಡ ಮೆ. ಮಿಟ್ಕಾನ್ ಕನ್ಸಲ್ಟೆನ್ಸಿ ಮತ್ತು ಇಂಜಿನಿಯರಿಂಗ್ ಸರ್ವಿಸಸ್ ಪುಣೆ ಇವರಿಂದ ವಿಸ್ತೃತ ಯೋಜನಾ ವರದಿ ತಯಾರಿಸಿದ್ದು, ಅದರಂತೆ ಕಾರ್ಖಾನೆಯ ಪುರ್ನಶ್ಚೇತನಕ್ಕೆ ಸರಕಾರದಿಂದ 30 ಕೋಟಿ ಆರ್ಥಿಕ ನೆರವು ನೀಡಿದರೆ ಕಾರ್ಖಾನೆಯನ್ನು ಪುನರಾಂಭಿಸಬಹುದು ಎಂದು ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಜಯಶೀಲ ಶೆಟ್ಟಿ ತಿಳಿಸಿದರು.
ಈಗಾಗಲೇ ವಾರಾಹಿ ನದಿಯಿಂದ ನೀರು ಹರಿಯುತ್ತಿದ್ದು ರೈತರು ಕಬ್ಬು ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಅಲ್ಲದೆ ಕರಾವಳಿ ಭಾಗದ ಹವಾಮಾನ ವೈಪರೀತ್ಯದಿಂದ ಭತ್ತದ ಬೆಳೆಗಿಂತ ಕಬ್ಬು ಬೆಳೆ ಇಲ್ಲಿನ ರೈತರಿಗೆ ಲಾಭದಾಯವಾಗಿದೆ. ಸರಕಾರ 30 ಕೋಟಿ ರೂ. ಮಂಜೂರು ಮಾಡಿದರೆ ಜಿಲ್ಲೆಯ ಸಹಕಾರಿ ಸಂಘಗಳಿಂದ 20 ಕೋಟಿ ಮೊತ್ತದ ಶೇರು ಸಂಗ್ರಹಿಸುವುದಾಗಿ ಜಯಶೀಲ ಶೆಟ್ಟಿ ವಿವರಿಸಿದರು.
ಕಾರ್ಖಾನೆಯ ಪುನ:ಶ್ಚೇತನಕ್ಕೆ ಅಗತ್ಯವಿರುವ 30 ಕೋಟಿ ರೂ.ಗಳನ್ನು ನೀಡುವ ಕುರಿತಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮತ್ತು ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರೈತ ಮುಖಂಡರನ್ನು ಒಳಗೊಂಡ ನಿಯೋಗ ಸಕ್ಕರೆ ಸಚಿವರ ಬಳಿ ತೆರಳಿ ಮನವಿ ಸಲ್ಲಿಸೋಣ. ಹಣ ಬಿಡುಗಡೆ ಬಗ್ಗೆ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದ ಡಾ. ಜಯಮಾಲಾ, ಜ. 30 ರಂದು ಬೆಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದ್ದು ಅಂದೇ ರಾಜ್ಯದ ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ, ಫೆ.8ರಂದು ನಡೆಯುವ ಬಜೆಟ್‌ನಲ್ಲಿ ಕಾರ್ಖಾನೆಗೆ ಹಣ ಮೀಸಲಿಡುವ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.
ಅಲ್ಲದೇ ಸಕ್ಕರೆ ಕಾರ್ಖಾನೆಯನ್ನು ಪುನ: ಆರಂಭಿಸುವ ಕುರಿತಂತೆ ಸಾಧಕ ಬಾಧಕಗಳ ಬಗ್ಗೆ ರಾಜ್ಯದ ಇತರೆ ಸಕ್ಕರೆ ಕಾರ್ಖಾನೆಗಳ ಮಾಲಕರನ್ನು ಜಿಲ್ಲೆಗೆ ಕರೆಸಿ, ಕಾರ್ಖಾನೆಯನ್ನು ಪರಿಶೀಲಿಸಿ ಅವರ ಅಭಿಪ್ರಾಯವನ್ನೂ ಸಹ ಪಡೆಯೋಣ. ಹಾಗೂ ರಾಜ್ಯದ ಇತರೆ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸೋಣ. ಕಾರ್ಖಾನೆಯಲ್ಲಿ ಕಬ್ಬು ಮಾತ್ರವಲ್ಲದೇ ಹೊಸ ತಂತ್ರಜ್ಞಾನ ದೊಂದಿಗೆ ಇತರೇ ಉಪ ಉತ್ಪನ್ನಗಳಾದ ಇಥೆನಾಲ್, ಮದ್ಯ ತಯಾರಿಕೆ, ಡ್ರೈ ಐಸ್ ಮುಂತಾದವುಗಳನ್ನೂ ಸಹ ತಯಾರಿಸಿದರೆ ಕಾರ್ಖಾನೆಯನ್ನು ಲಾಭದಾಯಕವಾಗಿ ನಡೆಸಲು ಸಾಧ್ಯ ಎಂದು ಸಚಿವರು ಹೇಳಿದರು.
ಶಾಸಕ ರಘುಪತಿ ಭಟ್ ಮಾತನಾಡಿ, ಸಕ್ಕರೆ ಕಾರ್ಖಾನೆಯ ಉಳಿವಿಗೆ ಈ ಹಿಂದಿನಿಂದಲೂ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು. ಜಾಗತಿಕ ಟೆಂಡರ್ ಸಹ ಕರೆಯಲಾಗಿತ್ತು. ಖಾಸಗಿ ಸಂಸ್ಥೆಯೊಂದು ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಮುಂದೆ ಬಂದಿದ್ದರೂ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ, ಪ್ರಸ್ತುತ ಆಡಳಿತ ಮಂಡಳಿ ಕೋರಿರುವ ಮೊತ್ತದ ಬಿಡುಗಡೆಗೆ ಸರಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ನಾಯಕ್, ಹಾಗೂ ವಿವಿಧ ರೈತ ಸಂಘಟನೆಳ ಪ್ರತಿನಿಧಿಗಳು ಉಪಸ್ಥಿತರಿದ್ದರು.